ಬುಧವಾರ, ನವೆಂಬರ್ 25, 2020
21 °C
ಮೂರು ವರ್ಷಗಳಿಂದ ಮುಚ್ಚಿದ್ದ ಸರ್ಕಾರಿ ಶಾಲೆ

ಕಳ್ಳನಕೆರೆ ಗ್ರಾಮದಲ್ಲಿ ಶಾಲೆ ಪುನರಾರಂಭದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಕ್ಕೇರಿ: ಮಕ್ಕಳ ದಾಖಲಾತಿ ಇಲ್ಲದೆ ಮೂರು ವರ್ಷಗಳಿಂದ ಮುಚ್ಚಿದ್ದ ಶಾಲೆಯ ಪುನರಾರಂಭದ ಸಂಭ್ರಮ ಅಲ್ಲಿ ಮನೆ ಮಾಡಿತ್ತು. ಮಕ್ಕಳೇ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಗೆ ದಾಖಲಾದ ಮಕ್ಕಳಿಗೆ ಸಿಹಿ ನೀಡಿ ಸ್ವಾಗತ ಕೋರಲಾಯಿತು. ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಯಿತು.

ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ಬುಧವಾರ ಕಂಡುಬಂದ ದೃಶ್ಯಗಳಿವು.‌ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸದ ಕಾರಣ ದಾಖಲಾತಿ ಕೊರತೆ ಇತ್ತು. ಹೀಗಾಗಿ, ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಮನೆಗೆ ಮನೆಗೆ ತೆರಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಗೂ ಶಿಕ್ಷಕರ ತಂಡವು ಪೋಷಕರನ್ನು ಮನವೊಲಿಸುವಲ್ಲಿ ಸಫಲವಾಗಿತ್ತು. ಹೀಗಾಗಿ, 14 ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಬುಧವಾರ ಶಾಲೆಯ ಆರಂಭಕ್ಕೆ ಚಾಲನೆ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮಾತನಾಡಿ, ‘ಹಳ್ಳಿಗೊಂದು ಸರ್ಕಾರಿ ಶಾಲೆ ಇರಬೇಕು. ಈ ಶಾಲೆಗೆ 70 ವರ್ಷಗಳ ದೀರ್ಘ ಇತಿಹಾಸವಿದೆ. ಶಾಲೆಯಲ್ಲಿ ಓದಿದವರು ವೈದ್ಯರು, ವಕೀಲರು, ಶಿಕ್ಷಕರು, ಎಂಜಿನಿಯರ್‌ಗಳಾಗಿದ್ದಾರೆ. ಖಾಸಗಿ ಶಾಲೆಯ ವ್ಯಾಮೋಹ ಬಿಡಬೇಕು. ಈ ಶಾಲೆಯಲ್ಲೂ ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ’ ಎಂದರು.

ನಿವೃತ್ತ ಶಿಕ್ಷಕ ರಾಜಭಾನ್ ಮಕ್ಕಳಿಗೆ ಲೇಖನ ಸಾಮಗ್ರಿ ನೀಡಿದರು.

ಮುಖಂಡರಾದ ಶಾರದಮ್ಮ, ಲಿಂಗರಾಜು ಮಾತನಾಡಿದರು. ಶಾಲೆ ಪುನರಾರಂಭಕ್ಕೆ ಸಹಕರಿಸಿದ ಗಣ್ಯರನ್ನು ಗೌರವಿಸಲಾಯಿತು.

ಈ ವೇಳೆ ಬಹುತೇಕ ಮಕ್ಕಳು, ಅಧಿಕಾರಿಗಳು ಮಾಸ್ಕ್‌ ಧರಿಸಲಿರಲಿಲ್ಲ.

ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಶಿಕ್ಷಣ ಸಂಯೋಜಕರಾದ ವೇಣುಗೋಪಾಲ್, ಬಿ.ಎಸ್. ಮೋಹನ್‌ ಕುಮಾರ್, ಜ್ಞಾನೇಶ್, ಸೋಮ ಶೇಖರ್, ಸಿ‌ಆರ್‌ಪಿ ದೊರೆಸ್ವಾಮಿ, ರಾಮ ಚಂದ್ರ, ಅರಸ್, ಲಿಂಗರಾಜೇಗೌಡ, ಪುಟ್ಟರಾಜು, ಸುರೇಶ್, ಉಪೇಂದ್ರ, ಶಾರದಮ್ಮ, ಶಿವನಾಗಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.