ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ | ಬಹಿರಂಗ ಪ್ರಚಾರ ಅಂತ್ಯ: ಕ್ಷೇತ್ರ ತೊರೆದ ಘಟಾನುಘಟಿ ನಾಯಕರು

ಮನೆಮನೆ ಪ್ರಚಾರ ಆರಂಭ, ಮತದಾರರ ಮನಸೆಳೆಯಲು ಕಡೇ ಕ್ಷಣದ ಕಸರತ್ತು
Last Updated 3 ಡಿಸೆಂಬರ್ 2019, 14:04 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆಬಿದ್ದಿದೆ. ಕಡೆಯ ದಿನ ಬಿಜೆಪಿ, ಕಾಂಗ್ರೆಸ್‌, ಜಡಿಎಸ್‌ ಅಭ್ಯರ್ಥಿಗಳು, ಮುಖಂಡರು ಮತದಾರರ ಮನೆಸೆಳೆಯಲು ಅಂತಿಮ ಕಸರತ್ತು ನಡೆಸಿದರು.

ಕೆ.ಆರ್‌.ಪೇಟೆ ಪಟ್ಟಣವಿಡೀ ಮಂಗಳವಾರ ಜನಜಾತ್ರೆಯಿಂದ ತುಂಬಿತ್ತು. ರಸ್ತೆರಸ್ತೆಯಲ್ಲೂ ಜನರೇ ಕಾಣುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಮುಖಂಡರು ಹಾಗೂ ಅಭ್ಯರ್ಥಿಗಳ ಮನಸ್ಸಿನಲ್ಲಿ ಧಾವಂತ ಹೆಚ್ಚಾಗಿತ್ತು. ಮತ್ತಷ್ಟು ಹಳ್ಳಿಗಳಲ್ಲಿ ಪ್ರಚಾರ ಮಾಡುವ ಬರದಲ್ಲಿ ತರಾತುರಿಯಲ್ಲಿ ಮುನ್ನಡೆಯುತ್ತಿದ್ದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಕ್ಷೇತ್ರ ಮೌನಕ್ಕೆ ಶರಣಾಯಿತು. ಪ್ರಚಾರ ವಾಹನಗಳು ಮುಖಂಡರ ಮನೆ ಮುಂದೆ, ಪಕ್ಷದ ಕಚೇರಿಗಳ ಮುಂದೆ ನಿಂತವು. ಹೊರಗಿನಿಂದ ಬಂದ ವಿವಿಧ ಪಕ್ಷಗಳ ನಾಯಕರು, ರಾಜ್ಯಮಟ್ಟದ ಮುಖಂಡರು ಕ್ಷೇತ್ರ ತೊರೆದು ತಮ್ಮೂರಿನತ್ತ ಮರಳಿದರು.

ಕಡೆಯ ದಿನ ಜೆಡಿಎಸ್‌ ಅಭ್ಯರ್ಥಿ ಬಿ.ಎಲ್‌.ದೇವರಾಜು ಪರ ಯುವ ಮುಖಂಡ ಕೆ.ನಿಖಿಲ್‌ ಪ್ರಚಾರ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ವಿವಿಧ ಹಳ್ಳಿಗಳಲ್ಲಿ ಸಂಚಾರ ನಡೆಸಿದ ಜೆಡಿಎಸ್‌ ಮುಖಂಡರು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೇಳುತ್ತಾ ಮತಯಾಚನೆ ಮಾಡಿದರು.

ಶೀಳನೆರೆ ಹೋಬಳಿ ಮೂಲಕ ನಿಖಿಲ್ ಪ್ರಚಾರ ಆರಂಭಿಸಿದರು. ಮಡುವಿನಕೋಡಿ, ವಿಠಲಾಪುರ, ಗಂಜಿಗೆರೆ, ಬಿಲ್ಲೇನಹಳ್ಳಿ, ಬೂಕನಕೆರೆ, ಬಳ್ಳೇಕೆರೆ, ಮುರುಕನಹಳ್ಳಿ, ರಾಯಸಮುದ್ರ ಮುಂತಾದ ಗ್ರಾಮಗಳಲ್ಲಿ ರೋಡ್‌ಶೋ ನಡೆಸುವ ಮೂಲಕ ಮತಯಾಚನೆ ನಡೆಸಿದರು. ಜೆಡಿಎಸ್‌ ಪಕ್ಷವನ್ನು ಮತದಾರರು ಕೈಹಿಡಯಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಬಿಜೆಪಿ ಸಮ್ಮೇಳನ: ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕಡೆಯದಿನ ಬೆಂಬಲಿಗರೊಂದಿಗೆ ಹಳ್ಳಿಗಳ ಸಂಚಾರದಲ್ಲಿ ತೊಡಗಿದ್ದರು. ಮುಖಂಡರು ವಿವಿಧ ಗುಂಪುಗಳಾಗಿ ಪ್ರಚಾರದಲ್ಲಿ ತೊಡಗಿದ್ದರು. ಮತ್ತೊಂದೆಡೆ ಯುವ ಮುಖಂಡ ಬಿ.ವೈ.ರಾಘವೇಂದ್ರ ವಿಶ್ವಕರ್ಮ ಸಮುದಾಯದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಳೆದೊಂದು ವಾರದಿಂದಲೂ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ರಾಘವೇಂದ್ರ ತೊಡಗಿದ್ದಾರೆ. ನಾಯಕ, ಕುರುಬ, ಈಡಿಗ ಸಮುದಾಯಗಳ ಸಮಾವೇಶ ಮುಗಿಸಿದ್ದ ಅವರು ಕಡೆಯ ದಿನ ವಿಶ್ವಕರ್ಮ ಸಮಾವೇಶ ಹಮ್ಮಿಕೊಂಡಿದ್ದರು.

ಸಿದ್ದರಾಮಯ್ಯ ಕಡೆಯ ಭಾಷಣ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಹಿರಂಗ ಪ್ರಚಾರದ ಕಡೇ ಕ್ಷಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಪರ ಭಾಷಣ ಮಾಡಿದರು. ಹುಣಸೂರು ಕ್ಷೇತ್ರದಿಂದ ಕೆ.ಆರ್‌.ಪೇಟೆಗೆ ಬಂದ ಅವರು ಕೆ.ಆರ್‌.ಪೇಟೆಯಲ್ಲಿ ಆಯೋಜನೆಗೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಬೆಳಿಗ್ಗೆಯಿಂದಲೂ ವಿವಿಧ ಗ್ರಾಮಗಳಲ್ಲಿ ಸಂಚಾರ ಮಾಡಿದ್ದ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಸಂಜೆ ಸಿದ್ದರಾಮಯ್ಯ ಅವರ ಸಮಾವೇಶದಲ್ಲಿ ಪಾಲ್ಗೊಂಡರು.

ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌
ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌

ಹದ್ದಿನಕಣ್ಣು: ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸುತ್ತಿದ್ದಾರೆ. ಮತದಾನಕ್ಕೆ 24 ಗಂಟೆ ಮಾತ್ರ ಉಳಿದಿದ್ದು ಕಡೇ ಕ್ಷಣದಲ್ಲಿ ಮತದಾರರನ್ನು ಒಲಿಸುಕೊಳ್ಳುವತ್ತ ಕಾರ್ಯಕರ್ತರು ಮುಂದಾಗಿದ್ದಾರೆ. ಈ ಹಂತದಲ್ಲಿ ಚುನಾವಣಾ ಆಯೋಗ ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದು ಪಕ್ಷಗಳ ಮುಖಂಡರು, ಕಾರ್ಯಕರ್ತರ ಚಟುವಟಿಕೆ ಮೇಲೆ ಕಣ್ಣಿಟ್ಟಿದೆ. ಕೇಂದ್ರ ಅರೆ ಸೇನಾ ಪಡೆ ಸೇರಿ ಸಾವಿರಾರು ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಿದೆ.

594 ಕಡೆ ದಾಳಿ, ₹ 20 ಲಕ್ಷ ಮೌಲ್ಯದ ಮದ್ಯ ವಶ

ಮಂಡ್ಯ ಜಿಲ್ಲೆಯಾದ್ಯಂತ ನ.11ರಿಂದ ಡಿ.2ರವರೆಗೆ ಅಬಕಾರಿ ಇಲಾಖೆ ಅಧಿಕಾರಿ ಅಧಕಾರಿಗಳು 594 ಕಡೆ ದಾಳಿ ನಡೆಸಿದ್ದು ₹ 20.43 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ದಾಳಿಯಲ್ಲಿ ಇದೂವರೆಗೆ 228 ಆರೋಪಿಗಳನ್ನು ಬಂಧಸಲಾಗಿದೆ. ಒಟ್ಟಾರೆ 556 ಲೀಟರ್‌ ಮದ್ಯ, 25.550 ಲೀಟರ್‌ ಬಿಯರ್, 121 ಲೀಟರ್‌ ಸೇಂದಿ, 20 ವಾಹನ ವಶಕ್ಕೆ ಪಡೆಯಲಾಗಿದೆ. ಒಟ್ಟು 308 ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಮತಗಟ್ಟೆ ಸಿಬ್ಬಂದಿಯನ್ನು ಕೆ.ಆರ್‌.ಪೇಟೆಯಲ್ಲಿ ತೆರೆದಿರುವ ಮಸ್ಟರಿಂಗ್ ಕೇಂದ್ರ ಸರ್ಕಾರಿ ಪಾಲೆಟೆಕ್ನಿಕ್ ಕಾಲೇಜು ಆವರಣಕ್ಕೆ ತಲುಪಿಸಲು ಸಾರಿಗೆ ಬಸ್‌ ಸೌಲಭ್ಯ ಒದಗಿಸಲಾಗಿದೆ ಎಂದುಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ವೆಂಕಟೇಶ್ ತಿಳಿಸಿದರು.

ಅಭ್ಯರ್ಥಿ ಸಂದರ್ಶನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT