ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕಿಕ್ಕೇರಮ್ಮ ರಥೋತ್ಸವ ಸಂಭ್ರಮ

ನೈವೇದ್ಯ ಅರ್ಪಿಸಿ, ಪ್ರಸಾದ ಸಮರ್ಪಣೆ; ಭಾವೈಕ್ಯದ ಸಂಭ್ರಮ
ಕಿಕ್ಕೇರಿ ಕೆ.ವಿ.ಗೋವಿಂದರಾಜು
Published 16 ಏಪ್ರಿಲ್ 2024, 6:08 IST
Last Updated 16 ಏಪ್ರಿಲ್ 2024, 6:08 IST
ಅಕ್ಷರ ಗಾತ್ರ

ಕಿಕ್ಕೇರಿ: ಸಕ್ಕರೆ ನಾಡಿನ ಅಕ್ಕರೆ ಗ್ರಾಮದಲ್ಲಿ ಭಾಸ್ಕರನ ಇಳಿಹೊತ್ತಿನಲ್ಲಿ ಜಾನಪದ ವೈಸಿರಿಯ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಂಗಮದಲ್ಲಿ ಸರಿಯಾಗಿ 4.30ಕ್ಕೆ ವಿಜೃಂಭಣೆಯಿಂದ ಸುಸಂಪನ್ನವಾಯಿತು.

ಜೋಡಿ ಗ್ರಾಮಗಳಾದ ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮಗಳ ಮಹಾಲಕ್ಷ್ಮೀ(ಕಿಕ್ಕೇರಮ್ಮ) ಅಮ್ಮನವರ ಬ್ರಹ್ಮ ರಥೋತ್ಸವದಲ್ಲಿ ಎತ್ತ ನೋಡಿದರೂ ಜನ ಸಾಗರ, ಭಕ್ತರ ಭಾವೈಕ್ಯ ಸಂಗಮ, ಪಕ್ಷಾತೀತವಾಗಿ ಜನಸಮೂಹ ಕಾಣಿಸಿತು. ಮಹಾಲಕ್ಷ್ಮೀ, ಕಿಕ್ಕೇರಮ್ಮ, ಲಕ್ಕಮ್ಮ ಉಘೇ ಉಘೇ ಎಂದು ಜೈಕಾರ ಹಾಕುತ್ತ ಸಾಗುತ್ತಿದ್ದ ನೋಟ ಭಕ್ತಿ ಶಕ್ತಿಯ ದೇವಿಯ ಮಹಿಮೆಯನ್ನು ಸಾರುವಂತಿತ್ತು.

ಸುಮಾರು ಒಂದು ಕಿ.ಮೀ.ದೂರದಲ್ಲಿನ ಊರ ಹೊರಗಿನ ಅಮ್ಮನವರ ಗುಡಿಯವರೆಗೆ ಕಿಕ್ಕೇರಿಯ ಅಂಗಡಿಬೀದಿಯಿಂದ ಸಾಗಿದ ಮಹಾರಥವನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ನೂತನ ರಥ, ರಂಗು ರಂಗಿನ ಜರತಾರಿಗಳ ಧ್ವಜಕೇಸರಿ, ಸುಗಂಧಪುಷ್ಪಗಳ ಅಲಂಕೃತ ಮಾಲೆಯಲ್ಲಿ ದೇವಿ ರಥಾರೂಢಳಾಗಿ ಸಾಗುತ್ತಿದ್ದ ನೋಟವನ್ನು ಭಕ್ತರು ಕಣ್ತುಂಬಿಕೊಂಡು ಹಣ್ಣು, ದವನ ಎಸೆದು ಭಕ್ತಿ ಭಾವ ಮೆರೆದರು.

ಬೆಳಿಗ್ಗೆ ಕಳಶ ಪೂಜೆ, ಬಲಿಯನ್ನ, ದೂಪದ ಪೂಜೆ, ಧ್ವಜಪಟ ಪೂಜೆಗಳು ಗುಡಿಯಿಂದ ಸಾಗಿ ಊರಲೆಲ್ಲ ಮೆರವಣಿಗೆ ಸಾಗಿತು. ನಂತರ ಉತ್ಸವ ಮೂರ್ತಿಯಾದ ಚಿಕ್ಕಮ್ಮ ದೇವಿಯ ಮೆರವಣಿಗೆ ಗುಡಿಯಿಂದ ಮಂಗಳ ವಾದ್ಯದೊಂದಿಗೆ ಹೊರಟಿತು. ಪಟ್ಟಣದಲ್ಲೆಲ್ಲ ಮೆರವಣಿಗೆ ಮೂಲಕ ಸಾಗಿದ ದೇವಿಯನ್ನು ಸಂಭ್ರಮದಿಂದ ಭಕ್ತರು ಬೀದಿಯಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಹಸಿರು ತೋರಣ ಕಟ್ಟಿ, ಆರತಿ ಎತ್ತಿ ಬರಮಾಡಿಕೊಂಡರು. ಪ್ರತಿ ಮನೆಗಳಲ್ಲಿ ಹಣ್ಣು ತುಪ್ಪದ ರಸಾಯನ ಮಾಡಿ ದೇವರು ಆಗಮಿಸಿದಾಗ ನೈವೇದ್ಯ ಅರ್ಪಿಸಿ ಪ್ರಸಾದ ಹಂಚಿದರು.

ವಿವಿಧ ಸಂಘ ಸಂಸ್ಥೆ, ದಾನಿಗಳಿಂದ ರಸಾಯನ, ಮೊಸರನ್ನ, ನೀರುಮಜ್ಜಿಗೆ, ಪಾನಕ, ಫ್ರೂಟ್ ಸಲಾಡ್, ಸಿಹಿತಿನಿಸು, ಹಣ್ಣು ತುಪ್ಪವನ್ನು ಭಕ್ತರಿಗೆ ನೀಡಿ ಬಿರುಬಿಸಿಲಿನಿಂದ ಬಸವಳಿದವರ ಹಸಿವು, ದಾಹ ತಣಿಸಿದರು.

ಊರಲೆಲ್ಲ ಸಾಗಿದ ದೇವಿ ಉತ್ಸವಮೂರ್ತಿಯನ್ನು ಅಂತಿಮವಾಗಿ ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಆರೂಢಿಸಲಾಯಿತು. ರಥದ ಚಕ್ರಗಳಿಗೆ, ರಥಕ್ಕೆ ದೃಷ್ಟಿಪೂಜೆ, ಬಲಿಯನ್ನ ಪೂಜೆ, ಮಹಾಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನವಜೋಡಿಗಳು ಹಣ್ಣು ದವನ ಎಸೆದು ದೇವಿಗೆ ನಮಸ್ಕರಿಸುತ್ತಿದ್ದ ನೋಟ ವಿಶೇಷವಾಗಿತ್ತು. ಅಲ್ಲಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬಾಳೆಹಣ್ಣಿನ ಮೇಲೆ ಹೆಸರು ಬರೆದು ದೇವರಿಗೆ ಎಸೆಯುತ್ತಿದ್ದರು.

ರಥ ಸಂಭ್ರಮದಲ್ಲಿ ದೇವಿಯ ಆರಾಧಕರಾದ ಕೆಂಚಮ್ಮ, ದೊಡ್ಡಹಟ್ಟಿ, ಬೂನಾಸಿ, ಮಾರಮ್ಮ ವಠಾರದವರು, ಪಕ್ಷಾತೀತವಾಗಿ ವಿವಿಧ ಪಕ್ಷಗಳ ಮುಖಂಡರು, ಹೋಬಳಿಯ ಮುಖಂಡರು, ಹೊರ ರಾಜ್ಯಗಳಿಂದ ಭಕ್ತರು, ಲಕ್ಷ್ಮೀಪುರ ಸುತ್ತಮುತ್ತಲ ಹತ್ತೂರಿನ ಗ್ರಾಮಸ್ಥರು, ಮುಖಂಡರು ಭಾಗವಹಿಸಿದ್ದರು.

ರಾಮನಹಳ್ಳಿ ಕೆಂಪಣ್ಣ ತಂಡದವರ ಕೋಲಾಟ, ಭಜರಂಗದಳದ ಬೃಹತ್ ಕೇಸರಿ ಧ್ವಜ ಹಾರಾಟ ವಿಶೇಷವಾಗಿತ್ತು. ಇನ್‌ಸ್ಪೆಕ್ಟರ್ ರೇವತಿ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಿದ್ದರು.

ಕಿಕ್ಕೇರಿಯಲ್ಲಿ ಜರುಗಿದ ಕಿಕ್ಕೇರಮ್ಮನ ರಥೋತ್ಸವದ ಮುನ್ನ ದೇವಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು
ಕಿಕ್ಕೇರಿಯಲ್ಲಿ ಜರುಗಿದ ಕಿಕ್ಕೇರಮ್ಮನ ರಥೋತ್ಸವದ ಮುನ್ನ ದೇವಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು
ಕಿಕ್ಕೇರಿಯಲ್ಲಿ ಸೋಮವಾರ ಮುಸ್ಸಂಜೆಯಲ್ಲಿ ಜರುಗಿದ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವದಲ್ಲಿ ಜಮಾಯಿಸಿದ್ದ ಭಕ್ತಸಮೂಹ
ಕಿಕ್ಕೇರಿಯಲ್ಲಿ ಸೋಮವಾರ ಮುಸ್ಸಂಜೆಯಲ್ಲಿ ಜರುಗಿದ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವದಲ್ಲಿ ಜಮಾಯಿಸಿದ್ದ ಭಕ್ತಸಮೂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT