ಶನಿವಾರ, ನವೆಂಬರ್ 16, 2019
21 °C
ದೇಶದ ಏಕತೆ, ಭದ್ರತೆಗೆ ಧಕ್ಕೆ ತರುವವರ ವಿರುದ್ಧ ಕ್ರಮಕ್ಕೆ ಆಗ್ರಹ; ಸ್ವಯಂಪ್ರೇರಿತರಾಗಿ ಬೆಂಬಲ

ಕೆ.ಆರ್‌.ಪೇಟೆ: ಬಂದ್ ಸಂಪೂರ್ಣ ಯಶಸ್ವಿ

Published:
Updated:
Prajavani

ಕೆ.ಆರ್.ಪೇಟೆ: ದೇಶದ ಸಮಗ್ರತೆ ಮತ್ತು ಏಕತೆಗೆ ಭಂಗ ತರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಗುರುವಾರ ನಡೆದ ಸ್ವಯಂಪ್ರೇರಿತ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ತಾಲ್ಲೂಕು ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕೆ.ಆರ್.ಪೇಟೆ ಪಟ್ಟಣ ಬಂದ್‌ಗೆ ಪಕ್ಷಾತೀತವಾಗಿ ಎಲ್ಲರ ಬೆಂಬಲ ವ್ಯಕ್ತವಾಯಿತು.

ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಸಂಪೂರ್ಣ ಶಾಂತಿಯುತ ವಾಗಿ ನಡೆದ ಈ ಬಂದ್ ವೇಳೆ ಪಟ್ಟಣದ ಶಾಲಾ – ಕಾಲೇಜುಗಳು, ಸಿನಿಮಾ ಮಂದಿರಗಳು. ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು, ಬ್ಯಾಂಕ್ , ಅಂಚೆ ಕಚೇರಿ ಸೇರಿದಂತೆ ಎಲ್ಲಾ ಬಗೆಯ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.  ಆಸ್ಪತ್ರೆಗಳು ಔಷಧಿ ಅಂಗಡಿಗಳು, ಸರ್ಕಾರಿ ಕಚೇರಿಗಳು ತೆರೆದಿದ್ದರೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನಂತೆ ಸಂಚರಿಸಿದವು. ಆಟೊ ಮಾಲೀಕರು ಮತ್ತು ಚಾಲಕರು ಬೆಂಬಲ ನೀಡಿದ್ದರಿಂದ ಬಹುತೇಕ ಆಟೊಗಳು ರಸ್ತೆಗೆ ಇಳಿದಿರಲಿಲ್ಲ.

ತೆಂಡೇಕೆರೆಯ ಬಾಳೆಹೊನ್ನೂರು ಶಾಖಾಮಠದ ಗಂಗಾಧರಶಿವಾಚಾರ್ಯ ಶ್ರೀಗಳು ಹಾಗೂ ಬೇಬಿಬೆಟ್ಟದ ಶ್ರೀ ಗುರು ಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಮಾನವಸರಪಳಿ ರಚಿಸಿ ಕೆಲಕಾಲ ಮೈಸೂರು ಚನ್ನರಾಯಪಟ್ಟಣ ರಸ್ತೆಯಲ್ಲಿ ರಸ್ತೆತಡೆ ನಡೆಸಿ ಭಯೋತ್ಪಾ ದನಾ ಚಟುವಟಿಕೆ ನಡೆಸುತ್ತಿರುವ ಪಿಎಫ್ಐ, ಎಸ್ಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು. ದೇಶದ್ರೋಹಿ ಚಟುವಟಿಕೆ ನಡೆಸಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಗಂಗಾಧರ ಶಿವಾಚಾರ್ಯ ಮಾತನಾಡಿ, ದೇಶದ ಏಕತೆ, ಸಮಗ್ರತೆ ಹಾಗೂ ಭದ್ರತೆ ವಿಚಾರದಲ್ಲಿ ವಿರುದ್ಧವಾಗಿ ಯಾವುದೇ ಧರ್ಮ, ಜಾತಿಯವನು ನಡೆದುಕೊಂಡರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೆಕು. ದೇಶದ್ರೋಹಿ ಸಂಘಟನೆಗಳನ್ನು  ಶಾಶ್ವತವಾಗಿ ನಿಷೇಧಿಸಬೇಕು. ಮೊನ್ನೆ ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮದಲ್ಲಿ ನಡೆದ ದೇಶದ್ರೋಹಿ ಚಟುವಟಿಕೆಯನ್ನು ಎನ್ಎಸ್‌ಎ ಮತ್ತು ಸಿಬಿಐಗೆ ತನಿಖೆಗೆ ಒಪ್ಪಿಸಬೇಕು ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಬೀದಿಗಿಳಿದ ವಕೀಲರು ಮತ್ತು ವ್ಯಾಪಾರಿಗಳು: ಬಂದ್ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದ ವಕೀಲರು ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಬಂದ್‌ಗೆ  ಬೆಂಬಲ ನೀಡಿದರು.

ಪ್ರವಾಸಿಮಂದಿರ ವೃತ್ತದಿಂದ ಹೊರಟ ಮೆರವಣಿಗೆ ಮಿನಿವಿಧಾನ ಸೌಧಕ್ಕೆ ತೆರಳಿತು. ಮಾರ್ಗಮಧ್ಯೆ ಮಸೀದಿಯ ಬಳಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಲು ಯತ್ನಿಸಿದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಿಕಿ ನಡೆಯಿತು. ಪೊಲೀಸರು ಅವರನ್ನು ಅಲ್ಲಿಂದ ಚದುರಿಸಿದರು.

ಮಿನಿವಿಧಾನ ಸೌಧದ ಮುಂದೆ ಹಲವು ಮುಖಂಡರು ಮಾತನಾಡಿದರು. ನಂತರ ತಹಶೀಲ್ದಾರ್ ಎಂ.ಶಿವಮೂರ್ತಿಗೆ ಮನವಿ ಪತ್ರವನ್ನು ಶ್ರೀಗಳು ನೀಡಿದರು.

ಪ್ರತಿಭಟನೆಯಲ್ಲಿ ಚನ್ನಬಸವೇಶ್ವರ ಕಲ್ಲುಮಠದ ವಿರೂಪಾಕ್ಷ ರಾಜಯೋಗಿ,  ಹಿಂದೂ ಹಿತರಕ್ಷಣಾ ವೇದಿಕೆ, ಬಜರಂಗದಳ, ವಿಎಚ್‌ಪಿ,  ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಕರ್ನಾಟಕ ಕನ್ನಡ ಸಮರಸೇನೆ, ಸಾಹಿತ್ಯ ಪರಿಷತ್‌, ವಕೀಲರ ಸಂಘ , ತಾಲ್ಲೂಕಿನ ಜವಳಿ ವ್ಯಾಪಾರಿಗಳು, ರೆಡಿಮೇಡ್ ಬಟ್ಟೆಗಳ ವರ್ತಕರು, ತಾಲ್ಲೂಕು ಆಟೊ ಚಾಲಕರ ಸಂಘ, ವಿತಕರರ ಸಂಘ, ರಾಜಾಸ್ಥಾನ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಿಗಿ ಪೋಲಿಸ್ ಭದ್ರತೆ: ಕೆ.ಆರ್.ಪೇಟೆ ಬಂದ್ ಹಿನ್ನೆಲೆಯಲ್ಲಿ ನಾಗಮಂಗಲ ಡಿವೈಎಸ್‌ಪಿ ವಿಶ್ವನಾಥ್, ಸಿಪಿಐ ಕೆ.ಎನ್.ಸುಧಾಕರ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪಟ್ಟಣದ ತುಂಬೆಲ್ಲಾ ಹೆಜ್ಜೆ ಹೆಜ್ಜೆಗೂ ಪೋಲಿಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಪಟ್ಟಣದ ತುಂಬೆಲ್ಲಾ ಕೇಸರಿ ಬಣ್ಣದ ಭಗವಾಧ್ವಜಗಳು ಹಾಗೂ ಕನ್ನಡ ಬಾವುಟಗಳು ರಾರಾಜಿಸಿದವು.

ಪ್ರತಿಕ್ರಿಯಿಸಿ (+)