ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಎಸ್‌: 91 ಅಡಿ ದಾಟಿದ ನೀರಿನ ಮಟ್ಟ

Published 28 ಜೂನ್ 2024, 13:23 IST
Last Updated 28 ಜೂನ್ 2024, 13:23 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆ.ಆರ್‌.ಎಸ್‌ ಅಣೆಕಟ್ಟೆಗೆ ಹರಿದು ಬರುವ ನೀರಿನ ಪ್ರಮಾಣ ಕಳೆದ ಎರಡು ದಿನಗಳಿಂದ ಹೆಚ್ಚಾಗಿದ್ದು, ನೀರಿನ ಮಟ್ಟ ಶುಕ್ರವಾರ 91 ಅಡಿ (16.118 ಟಿ.ಎಂ.ಸಿ) ದಾಟಿದೆ.

ಜಲಾಶಯಕ್ಕೆ 13,437 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಗುರುವಾರ 3,826 ಕ್ಯುಸೆಕ್‌ ಇದ್ದ ಒಳ ಹರಿವಿನ ಪ್ರಮಾಣ 24 ಗಂಟೆಗಳಲ್ಲಿ 10 ಸಾವಿರ ಕ್ಯುಸೆಕ್‌ನಷ್ಟು ಹೆಚ್ಚಾಗಿದೆ. ಕೊಡಗು ಮತ್ತು ವೈನಾಡು ಭಾಗದಲ್ಲಿ ಮೂರು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೊರ ಹರಿವಿನ ಪ್ರಮಾಣ 478 ಕ್ಯುಸೆಕ್‌ ಇದೆ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 77.9 ಅಡಿಗಳಷ್ಟು ನೀರಿನ ಸಂಗ್ರಹ ಇತ್ತು. 760 ಕ್ಯುಸೆಕ್‌ ಒಳ ಹರಿವು ಮತ್ತು 308 ಕ್ಯುಸೆಕ್‌ ಹೊರ ಹರಿವು ದಾಖಲಾಗಿತ್ತು. ಜಲಾಶಯದಲ್ಲಿ ಸದ್ಯ 16 ಟಿ.ಎಂ.ಸಿ ನೀರಿನ ಸಂಗ್ರಹವಿದ್ದು, ಇದರಲ್ಲಿ 8 ಟಿ.ಎಂ.ಸಿ ನೀರನ್ನು ‘ಡೆಡ್‌ ಸ್ಟೋರೇಜ್‌’ ಎಂದು ಪರಿಗಣಿಸಲಾಗುತ್ತದೆ. ಉಳಿದ 8 ಟಿಎಂಸಿ ನೀರನ್ನು ಮಾತ್ರ ಕುಡಿಯಲು ಮತ್ತು ಕೃಷಿಗೆ ಬಳಸಬಹುದು.

ಸೋರಿಕೆ ತಡೆಗಟ್ಟಲು ಕ್ರಮ:

ಜಲಾಶಯದ 80 ಅಡಿ ಮಟ್ಟದ 16 ಗೇಟ್‌ಗಳಿಗೆ ಗುರುವಾರದಿಂದ ಗ್ರೀಸಿಂಗ್‌ ಮಾಡುವ ಕೆಲಸ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಈ ಕಾರ್ಯ ಮುಗಿಯಲಿದೆ. ನೀರಿನ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಅಣೆಕಟ್ಟೆಯ 136 ಗೇಟ್‌ಗಳನ್ನು ₹69.52 ಕೋಟಿ ವೆಚ್ಚದಲ್ಲಿ ಬದಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.

‘ಜಲಾಶಯದ ಉತ್ತರ ದಂಡೆಯಿಂದ ಪಾಂಡವಪುರ, ಮಂಡ್ಯ, ಮದ್ದೂರು, ಮಳವಳ್ಳಿಗೆ ಹೊರಡುವ ವಿಶ್ವೇಶ್ವರಯ್ಯ ನಾಲೆಯ ಅಧುನೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಅಣೆಕಟ್ಟೆ ಅಥವಾ ನದಿ ಒಡ್ಡಿನ ನಾಲೆಗಳಿಗೆ ಮುಂಗಾರು ಹಂಗಾಮು ಬೆಳೆಗೆ ನೀರು ಹರಿಸುವ ಕುರಿತು ಕಾವೇರಿ ನೀರಾವರಿ ಸಲಹಾ ಸಮಿತಿ ಇನ್ನೂ ತೀರ್ಮಾನ ಕೈಗೊಂಡಿಲ್ಲ’ ಎಂದು ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT