ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಸಾವಿರ ಕಟ್ಟಡ ಕಾರ್ಮಿಕರ ನೋಂದಣಿ ಇಲ್ಲ

ನೋಂದಾಯಿತ ಕಾರ್ಮಿಕರಿಗೆ ₹1.82 ಕೋಟಿ ಅನುದಾನ ಮೀಸಲು; ಸೌಲಭ್ಯ ಪಡೆಯಲು ಸಲಹೆ
Last Updated 1 ಮೇ 2019, 10:54 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ 34,412 ನೋಂದಾಯಿತ ಕಟ್ಟಡ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, 50 ಸಾವಿರಕ್ಕೂ ಹೆಚ್ಚು ಕಾರ್ಮಿಕರು ನೋಂದಣಿಯಿಂದ ಹೊರಗುಳಿದಿದ್ದಾರೆ. ಈ ನೋಂದಾಯಿತ ಕಾರ್ಮಿಕ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ 2018–19ನೇ ಸಾಲಿನಲ್ಲಿ ಒಟ್ಟು ₹1.82 ಕೋಟಿ ವಾರ್ಷಿಕ ವೆಚ್ಚ ಮಾಡಲಾಗಿದೆ.

ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇಲ್ಲ. ಹೊಟ್ಟೆಪಾಡಿಗೆ ಕೊಟ್ಟಷ್ಟು ಕೂಲಿ ಪಡೆದು ಕೆಲಸ ಮಾಡುವ ಇವರಿಗೆ ಕಾರ್ಮಿಕರ ದಿನಾಚರಣೆ ಬಗ್ಗೆ ಅರಿವಿಲ್ಲ. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಅದು ಸರಿಯಾಗಿ ಫಲಾನುಭವಿಗಳ ಕೈಗೆ ತಲುಪುತ್ತಿಲ್ಲ. ಕೆಲ ಕಾರ್ಮಿಕ ಸಂಘಟನೆಗಳು ಹಾಗೂ ಸರ್ಕಾರಿ ಇಲಾಖೆಗಳು ಕಾರ್ಮಿಕರಿಗೆ ಜಾಗೃತಿ ಮೂಡಿಸಿ ಕಾರ್ಮಿಕರನ್ನು ನೋಂದಣಿ ಮಾಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ಸು ಸಾಧಿಸಿವೆ.

ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು 2006ರಲ್ಲಿ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ಸ್ಥಾಪಿಸಿದೆ. ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ವಲಯದಲ್ಲಿ 84 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಶೇ 40ರಷ್ಟು ಕಾರ್ಮಿಕರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಮಂಡ್ಯ ತಾಲ್ಲೂಕಿನಲ್ಲಿ ಅತಿ ಹೆಚ್ಚು 10 ಸಾವಿರ ಹಾಗೂ ನಾಗಮಂಗಲತಾಲ್ಲೂಕಿನಲ್ಲಿ ಅತಿ ಕಡಿಮೆ 2 ಸಾವಿರ ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕರು ಜಿಲ್ಲೆ ಅಥವಾ ತಾಲ್ಲೂಕು ಕೇಂದ್ರದಲ್ಲಿ ₹50 ಶುಲ್ಕ ಪಾವತಿಸಿ ನೋಂದಣಿ ಮಾಡಿಸಬೇಕು. ನಂತರ ಪ್ರತಿ ವರ್ಷ ₹25 ಪಾವತಿಸಿ ನವೀಕರಣ ಮಾಡಬೇಕು. ಈ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ವೈದ್ಯಕೀಯ ವೆಚ್ಚ, ಅಪಘಾತ ವಿಮೆ, ಪಿಂಚಣಿ, ಮದುವೆಗೆ ಪ್ರೋತ್ಸಾಹಧನ ಹಾಗೂ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೌಲಭ್ಯವಿದೆ. ಕೆಲಸ ಮಾಡುವಾಗ ಮೃತಪಟ್ಟರೆ ₹5 ಲಕ್ಷ ಪರಿಹಾರ ನಿಧಿ, ಗಂಭೀರ ಅಪಘಾತಕ್ಕೆ ₹2 ಲಕ್ಷ ಸಹಾಯಧನ ನೀಡಲಾಗುವುದು. ಎಲ್ಲಾ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿ ಜೀವನಕ್ಕೆ ಭದ್ರತೆ ಪಡೆದುಕೊಳ್ಳಬೇಕು.

ಅಸಂಘಟಿತ ವಲಯದ ಜನರಿಗೆ ನೆರವಾಗುವ ಉದ್ದೇಶದಿಂದ 2017–18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕ್ಷೌರಿಕ, ಕಮ್ಮಾರ, ಕುಂಬಾರ, ಅಗಸ, ಟೈಲರಿಂಗ್, ಮೆಕ್ಯಾನಿಕ್, ಅಕ್ಕಸಾಲಿಗ, ಮಂಡಕ್ಕಿಬಟ್ಟಿ, ಗೃಹಕೆಲಸ, ಹಮಾಲಿಗಳು ಹಾಗೂ ಚಿಂದಿ ಆಯುವವರು ಸೇರಿ 11 ಅಸಂಘಟಿತ ವಲಯದ ಕಾರ್ಮಿಕರು ಅರ್ಜಿ ಸಲ್ಲಿಸಿ ಸ್ಮಾರ್ಟ್‌ಕಾರ್ಡ್‌ ಪಡೆಯಬಹುದು. ಉಳಿದಂತೆ 27 ಅಸಂಘಟಿತ ವಲಯಗಳನ್ನು ಸೇರಿಸುವ ನಿರೀಕ್ಷೆಯಿದೆ.

ಅಸಂಘಟಿತ ವಲಯದ ಕಾರ್ಮಿಕರು ₹25 ಶುಲ್ಕ ಪಾವತಿಸಿ ಸ್ಮಾರ್ಟ್‌ಕಾರ್ಡ್‌ ಪಡೆಯಬಹುದು. ಈವರೆಗೂ ಅಸಂಘಟಿತ ವಲಯದಿಂದ 2,394 ಕಾರ್ಮಿಕರು ಸ್ಮಾರ್ಟ್‌ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ಸರ್ಕಾರದಿಂದ ಯಾವುದೇ ಯೋಜನೆ ಪ್ರಾರಂಭವಾಗಿಲ್ಲ. 2019 ಮಾರ್ಚ್‌ 1 ರಿಂದ ಪ್ರಥಮ ಬಾರಿಗೆ ಅಸಂಘಟಿತ ಕಾರ್ಮಿಕರಿಗಾಗಿ ಶ್ರಮ ಸಮ್ಮಾನ್ ಪ್ರಶಸ್ತಿ (₹10 ಸಾವಿರ
ನಗದು) ಹಾಗೂ ವಿಶೇಷ ಸಮ್ಮಾನ್ ಪ್ರಶಸ್ತಿ (₹1 ಸಾವಿರ ನಗದು) ನೀಡಲಾಗಿದೆ.

ಫಲಾನುಭವಿಗಳಿಗೆ ಅನುದಾನ

ನೋಂದಣಿ ಮಾಡಿಸಿದ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು. 2018–19ನೇ ಸಾಲಿನಲ್ಲಿ ₹1.82 ಕೋಟಿ ಅನುದಾನವನ್ನು ವಿವಿಧ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ ತಿಳಿಸಿದರು.

ಕಾರ್ಮಿಕರ ಪ್ರತಿಮೆ ನಿರ್ಮಿಸಿ

‘ಜಿಲ್ಲೆಯಾದ್ಯಂತ 80 ಸಾವಿರ ಕಟ್ಟಡ ಕಾರ್ಮಿಕರಿದ್ದರೂ ಸಂಘಟಿತರಾಗಲು ಸಾಧ್ಯವಾಗಿಲ್ಲ. ಬಹುತೇಕರು ನೋಂದಣಿ ಮಾಡಿಸಿಲ್ಲ. ಸಂಘಟನೆ ಮೂಲಕ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮಂಡ್ಯದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಕಾರ್ಮಿಕರ ಪ್ರತಿಮೆ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾ ಬಣ್ಣದ ಕಾರ್ಮಿಕ ಸಂಘಟನೆ ಮುಖ್ಯಸ್ಥ ಏಳುಮಲೈ ಮನವಿ ಮಾಡಿದರು.

ಜಿಲ್ಲೆಯಲ್ಲಿ ನೋಂದಣಿ ಪ್ರಮಾಣ

ಮಂಡ್ಯ–– 10,089

ಮಳವಳ್ಳಿ– 5,734

ಮದ್ದೂರು– 5,227

ಪಾಂಡವಪುರ– 4,025

ಕೆ.ಆರ್.ಪೇಟೆ– 3,662

ಶ್ರೀರಂಗಪಟ್ಟಣ– 3,667

ನಾಗಮಂಗಲ– 2,008

ಒಟ್ಟು– 34,412

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT