ಮಂಡ್ಯ: ನಾಗಮಂಗಲ ತಾಲ್ಲೂಕಿನಲ್ಲಿ ‘ಬಗರ್ಹುಕುಂ ಸಕ್ರಮೀಕರಣ’ ಯೋಜನೆಯಡಿ ನಿಯಮ ಉಲ್ಲಂಘಿಸಿ ನೂರಾರು ಎಕರೆ ಸರ್ಕಾರಿ ಜಮೀನನ್ನು ಮಂಜೂರಾತಿ ಮಾಡಿ, ಸಾಗುವಳಿ ಚೀಟಿ ವಿತರಿಸಿರುವ ಬಗ್ಗೆ ತನಿಖಾ ವರದಿ ಬೆಳಕು ಚೆಲ್ಲಿದೆ.

ಸರ್ಕಾರಿ ಜಮೀನನನ್ನು ಕಬಳಿಸುವ ದುರುದ್ದೇಶದಿಂದ ಮಾರ್ಗಸೂಚಿ, ನಿಯಮ ಮತ್ತು ಮಾನದಂಡಗಳನ್ನು ಉಲ್ಲಂಘಿಸಿ ತಹಶೀಲ್ದಾರ್ ಹಂತದಲ್ಲಿ ಮಂಜೂರಾತಿಗೆ ಕ್ರಮವಹಿಸಿರುವುದು ಕಾನೂನು ಬಾಹಿರ ಎಂದು ತಿಳಿಸಲಾಗಿದೆ.

2022ರ ಜನವರಿ 1ರಿಂದ 2023ರ ಜೂನ್ 30ರ ಅವಧಿಯಲ್ಲಿ ಮಂಜೂರಾತಿಗೆ ಪರಿಗಣಿಸಿರುವ 694 ಅರ್ಜಿಗಳು ‘ಬಗರ್ ಹುಕುಂ ಸಕ್ರಮೀಕರಣ ಸಮಿತಿ’ ಸಭೆಯ ನಡಾವಳಿಯಲ್ಲಿ ನಮೂದಾಗಿರುವುದಿಲ್ಲ. ಆದರೂ 359 ಪ್ರಕರಣಗಳಲ್ಲಿ ‘ಮಂಜೂರಾತಿ ಆದೇಶ’ ನೀಡಿ ಸಾಗುವಳಿ ಚೀಟಿ ವಿತರಿಸಲಾಗಿದೆ. 335 ಪ್ರಕರಣಗಳಲ್ಲಿ ಕಿಮ್ಮತ್ತು ಪಾವತಿಸಲು ‘ನೋಟಿಸ್’ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮವಾಗಿ ಸಾಗುವಳಿ ಚೀಟಿ ವಿತರಿಸಿ, ಸರ್ಕಾರಿ ಜಮೀನು ಕಬಳಿಸುತ್ತಿರುವ ಬಗ್ಗೆ ದೂರು ಅರ್ಜಿಗಳು ಬಂದ ಮೇರೆಗೆ 2024ರಲ್ಲಿ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು ನೇತೃತ್ವದಲ್ಲಿ ‘ತನಿಖಾ ತಂಡ’ ರಚಿಸಲಾಗಿತ್ತು. ತನಿಖಾ ತಂಡವು 694 ಅರ್ಜಿಗಳನ್ನು ಪರಿಶೀಲಿಸಿ, ವಿವರವಾದ ತನಿಖಾ ವರದಿ ನೀಡಿತ್ತು.

ಒಂದೇ ಕುಟುಂಬದವರಿಗೆ ಹೆಚ್ಚಿನ ಜಮೀನು:

ಕುಟುಂಬದ ವ್ಯಾಖ್ಯಾನವನ್ನು ಪರಿಶೀಲಿಸದೇ ಅನೇಕ ಪ್ರಕರಣಗಳಲ್ಲಿ ಒಂದೇ ಕುಟುಂಬದ ಸದಸ್ಯರಿಗೆ ಅಂದರೆ ತಂದೆ–ಮಗ, ಅತ್ತೆ–ಸೊಸೆ, ಗಂಡ–ಹೆಂಡತಿ ಹೀಗೆ ಮಂಜೂರಾತಿ ಮಾಡಿರುವ ಪ್ರಕರಣಗಳು ಕಂಡುಬಂದಿವೆ. ದೊಡ್ಡ ಹಿಡುವಳಿದಾರರಿಗೂ ಜಮೀನು ಮಂಜೂರು ಮಾಡಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಪೌತಿದಾರರ (ಮೃತರ) ಹೆಸರಿನಲ್ಲಿ ಸಾಗುವಳಿ ಚೀಟಿ ನೀಡಲಾಗಿದೆ.

ಕ್ರಮಕ್ಕೆ ಪ್ರಧಾನ ಕಾರ್ಯದರ್ಶಿಗೆ ಪತ್ರ:

‘ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ಗಳಾದ ಎಲ್.ಎಂ. ನಂದೀಶ್, ಕೆ.ಎಂ. ಸ್ವಾಮಿಗೌಡ, ಪ್ರಸನ್ನಕುಮಾರ್, ಎಫ್ಡಿಎ ಎನ್.ಪಿ. ಶಶಿಧರ್, ಎಸ್ಡಿಎಗಳಾದ ಬಿ.ಸಿ. ಸತೀಶ್, ಎ.ಡಿ. ಅಭಿನಂದನ್ ಕುಮಾರ್ ಅವರು ಅಕ್ರಮ ಭೂ ಮಂಜೂರಾತಿ ಮಾಡುವ ಮೂಲಕ ಲೋಪವೆಸಗಿರುವುದು ಕಂಡು ಬಂದಿದೆ. ಈ ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು ಅಗತ್ಯ’ ಎಂದು ಜಿಲ್ಲಾಧಿಕಾರಿ ಕುಮಾರ ಅವರು 2025ರ ಮಾರ್ಚ್ 6ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಅಕ್ರಮವಾಗಿ ಸಾಗುವಳಿ ಚೀಟಿ ವಿತರಣೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಡಿಸಿ ಪತ್ರ ಬಗರ್ಹುಕುಂ ಸಮಿತಿ ಸದಸ್ಯರಿಗೂ ಸರ್ಕಾರಿ ಜಮೀನು

ಕರ್ತವ್ಯದಿಂದ ಬಿಡುಗಡೆಗೊಂಡ ನಂತರವೂ ಸಹಿ!:  2022ರ ಮಾರ್ಚ್ 17ರಿಂದ 2023ರ ಜನವರಿ 10ರವರೆಗೆ ನಾಗಮಂಗಲ ತಹಶೀಲ್ದಾರ್ ಆಗಿದ್ದ ಎಲ್.ಎಂ. ನಂದೀಶ್ ಅವರು ಹುದ್ದೆಯಿಂದ ಬಿಡುಗಡೆಗೊಂಡ ನಂತರವೂ 4 ಪ್ರಕರಣಗಳಲ್ಲಿ ಸಾಗುವಳಿ ಚೀಟಿಗೆ ಸಹಿ ಹಾಕಿದ್ದಾರೆ ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿದೆ. ‘ಬಗರ್ ಹುಕುಂ ಸಕ್ರಮೀಕರಣ ಸಮಿತಿಯು ಸಭೆಯಲ್ಲಿ ವಜಾ ಮಾಡಿರುವ 10 ಅರ್ಜಿಗಳಿಗೂ ಅಧಿಕಾರಿಗಳು ಸಾಗುವಳಿ ಚೀಟಿ ನೀಡಿದ್ದಾರೆ. ಮೂಲ ಅರ್ಜಿದಾರರ ಹೆಸರುಗಳನ್ನು ತಿದ್ದಿ ಹೊಸದಾಗಿ ಅರ್ಜಿದಾರರ ಹೆಸರುಗಳನ್ನು ಬರೆದು 2 ಪ್ರಕರಣಗಳಲ್ಲಿ ಸಾಗುವಳಿ ಚೀಟಿ ನೀಡಲಾಗಿದೆ. ಆಶ್ಚರ್ಯವೆಂದರೆ ಸಮಿತಿಯ ಸದಸ್ಯರಿಗೂ 2 ಪ್ರಕರಣಗಳಲ್ಲಿ ಜಮೀನು ಮಂಜೂರು ಮಾಡಲಾಗಿದೆ’ ಎಂದು ವರದಿಯಲ್ಲಿ ನಮೂದಿಸಲಾಗಿದೆ.

ಕಿಮ್ಮತ್ತು ಪಾವತಿಗೂ ಮುನ್ನವೇ ಮಂಜೂರಾತಿ!: 55 ಪ್ರಕರಣಗಳಲ್ಲಿ ಫಲಾನುಭವಿಗಳು ಕಿಮ್ಮತ್ತು ಪಾವತಿಸುವ ಮುನ್ನವೇ ‘ಬಗರ್ಹುಕುಂ ಸಕ್ರಮೀಕರಣ’ ಯೋಜನೆಯಡಿ ಸರ್ಕಾರಿ ಜಮೀನಿಗೆ ಮಂಜೂರಾತಿ ಆದೇಶ ನೀಡಿ ಸಾಗುವಳಿ ಚೀಟಿಗೆ ಸಹಿ ಮಾಡಲಾಗಿದೆ. ಅರ್ಜಿದಾರರು ಕೋರಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು 7 ಪ್ರಕರಣಗಳಲ್ಲಿ ಮಂಜೂರು ಮಾಡಿದ್ದಾರೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಸರ್ವೆ ನಂಬರ್ಗಳಲ್ಲಿ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯದೇ 12 ಪ್ರಕರಣಗಳಲ್ಲಿ ಮಂಜೂರಾತಿಗೆ ಕ್ರಮವಹಿಸಲಾಗಿದೆ ಎಂಬ ಲೋಪವನ್ನು ಎತ್ತಿ ಹಿಡಿಯಲಾಗಿದೆ.

‘430 ಪ್ರಕರಣಗಳ ವಿಚಾರಣೆ ಮುಕ್ತಾಯ’: ‘694 ಪ್ರಕರಣಗಳಲ್ಲಿ 430 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು ಬಾಕಿ ಪ್ರಕರಣಗಳ ವಿಚಾರಣೆ ಎರಡು ತಿಂಗಳೊಳಗೆ ಮುಕ್ತಾಯಗೊಳ್ಳಲಿದೆ. ಇನ್ನು 15 ದಿನದೊಳಗೆ ಜಿಲ್ಲಾಧಿಕಾರಿ ಅವರಿಗೆ ಮಧ್ಯಂತರ ವರದಿ ಸಲ್ಲಿಸುತ್ತೇನೆ’ ಎಂದು ತನಿಖಾಧಿಕಾರಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಶೇ 90ರಷ್ಟು ಪ್ರಕರಣಗಳಲ್ಲಿ ನಿಯಮ ಪಾಲನೆಯಲ್ಲಿ ಸಣ್ಣಪುಟ್ಟ ದೋಷಗಳಾಗಿವೆ. ಇವು ‘ಕ್ಲರಿಕಲ್ ಮಿಸ್ಟೇಕ್’ ಆಗಿದ್ದು ಸರಿಪಡಿಸಬಹುದಾದ ಲೋಪಗಳು. ಈ ಪ್ರಕರಣಗಳಲ್ಲಿ ಅನರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಿರುವುದು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.