ಭಾನುವಾರ, ಸೆಪ್ಟೆಂಬರ್ 26, 2021
23 °C
ಬೆಳಕವಾಡಿ ಗ್ರಂಥಾಲಯ ಅವ್ಯವಸ್ಥೆ ಆಗರ; ಗಾಳಿ, ಬೆಳಕಿನ ವ್ಯವಸ್ಥೆಯೂ ಇಲ್ಲ

ಬೀಳುವ ಸ್ಥಿತಿಯಲ್ಲಿ ಲೈಬ್ರರಿ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಕವಾಡಿ: ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದಲ್ಲಿರುವ ಗ್ರಂಥಾಲಯ ಅವ್ಯವಸ್ಥೆಯ ಆಗರವಾಗಿದೆ. ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಹೊಸ ಕಟ್ಟಡದಲ್ಲಿ ಗ್ರಂಥಾಲಯವನ್ನು ತೆರೆದು, ಓದುಗರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಒತ್ತಾಯ ಈ ಭಾಗದ ಜನರದ್ದು.

ಗ್ರಾಮ ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡದಲ್ಲಿ ಸುಮಾರು 38 ವರ್ಷಗಳಿಂದ ಗ್ರಂಥಾಲಯ ನಡೆಯುತ್ತಿದೆ. ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಕಟ್ಟಡದ ಪಕ್ಕದಲ್ಲೇ ಜನರು ಮೂತ್ರ ವಿಸರ್ಜನೆ ಮಾಡುತ್ತಾರೆ. ಜತೆಗೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ.

‘ಕೇಂದ್ರದಲ್ಲಿ ಓದುಗರ ಅಭಿರುಚಿಗೆ ತಕ್ಕಂತೆ ದಿನಪತ್ರಿಕೆಗಳು ಸಿಗುವುದಿಲ್ಲ. ಎರಡು ಪತ್ರಿಕೆಗಳು ಮಾತ್ರ ಬರುತ್ತವೆ. ಕಳೆದ 20– 30 ವರ್ಷಗಳಿಂದ ಇರುವ ಪುಸ್ತಕಗಳನ್ನೇ ಇಂದಿಗೂ ಓದುವಂತಾ ಗಿದೆ. ಹೊಸ ಪುಸ್ತಕಗಳು ಬರುತ್ತಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕ ಹಾಗೂ ಸಾಹಿತ್ಯ ಪುಸ್ತಕಗಳನ್ನು ಖರೀದಿಸಬೇಕು. ಇದರಿಂದ ಸಾಹಿತ್ಯ ಅಭಿರುಚಿಯನ್ನು ಬೆಳೆಸಬಹುದು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಸುಸಜ್ಜಿತ ಕಟ್ಟಡದಲ್ಲಿ ಗ್ರಂಥಾಲಯ ವನ್ನು ತೆರೆದರೆ ನೂರಾರು ಮಂದಿಗೆ ಅನುಕೂಲವಾಗಲಿದೆ. ಗ್ರಂಥಾಲಯ ಇಲಾಖೆಯು ಹೊಸ ಪುಸ್ತಕಗಳನ್ನು ಒದಗಿಸಬೇಕು. ರಾಜ್ಯ ಹಾಗೂ ಸ್ಥಳೀಯ ದಿನಪತ್ರಿಕೆಗಳನ್ನು ಪೂರೈಸಬೇಕು’ ಎಂದು ರಂಗಸ್ವಾಮಿ ಒತ್ತಾಯಿಸಿದರು.

‘ಗ್ರಂಥಾಲಯಕ್ಕೆ ಮೂಲಸೌಕರ್ಯ ಕಲ್ಪಿಸಿ, ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಮೇಲ್ವಿಚಾರಕರು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಬೇಕು’ ಎಂದು ಗ್ರಾ.ಪಂ ಸದಸ್ಯ ಎಸ್.ಪ್ರಶಾಂತ್ ಆಗ್ರಹಿಸಿದರು.

‘ಡಿಜಿಟಲ್‌ ಗ್ರಂಥಾಲಯ ಸ್ಥಾಪನೆ’

‘ಗ್ರಂಥಾಲಯದ ಕಟ್ಟಡವನ್ನು ಪರಿಶೀಲನೆ ನಡೆಸುತ್ತಿದ್ದು, ಈಚೆಗೆ ಕೆಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸದ್ಯದಲ್ಲೇ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣವಾಗಲಿದೆ. ಆ ಕಟ್ಟಡದ ಕೊಠಡಿಯೊಂದರಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.