ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಮುಸ್ಲಿಂ ಸೌಹಾರ್ದ ವೇದಿಕೆಯಿಂದ ‘ಸೌಹಾರ್ದ ಸಂಕ್ರಾಂತಿ’

Published 15 ಜನವರಿ 2024, 13:58 IST
Last Updated 15 ಜನವರಿ 2024, 13:58 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂ ಗ್ರಾಮದಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟದಿಂದ ಸೋಮವಾರ ಸೌಹಾರ್ದ ಸಂಕ್ರಾಂತಿ ಆಚರಿಸಲಾಯಿತು.

ಗಂಜಾಂನ ಅಂಜೂರ ಫಾರಂ ಸಮೀಪ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಹಿಂದೂಗಳಿಗೆ ಹಾಗೂ ಹಿಂದೂಗಳು ಮುಸ್ಲಿಮರಿಗೆ ಎಳ್ಳು ಬೆಲ್ಲ ತಿನ್ನಿಸಿ ಪರಸ್ಪರ ಶುಭ ಕೋರಿದರು. ನೆರೆದಿದ್ದವರಿಗೆ ಮುಸ್ಲಿಮರು ಕಬ್ಬಿನ ತುಂಡು ಮತ್ತು ಸಿಹಿ ಪೊಂಗಲ್‌ ವಿತರಿಸಿ ಸಂಕ್ರಾಂತಿ ಹಬ್ಬ ಶುಭವನ್ನು ತರಲಿ ಎಂದು ಹಾರೈಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕ ಕಾರ್ಯದರ್ಶಿ ದೇವಿ ಮಾತನಾಡಿ, ‘ಮುಸಲ್ಮಾನರು ಸಂಕ್ರಾಂತಿ ಆಚರಿಸುವ ಮೂಲಕ ಶಾಂತಿ, ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಈ ಸಂದೇಶ ವಿಚ್ಛಿದ್ರಕಾರಿ ಶಕ್ತಿಗಳಿಗೆ ಮುಟ್ಟಬೇಕು. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳು ಕೂಡ ಮುಸ್ಲಿಂರ ಹಬ್ಬಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ರಂಗಯ್ಯ ಮಾತನಾಡಿ, ‘ಸೂರ್ಯ, ನೀರು, ಮಣ್ಣು, ಗಾಳಿ ಎಲ್ಲರಿಗೂ ಸೇರಿವೆ. ನಾವೆಲ್ಲರೂ ಮನುಷ್ಯರು. ಜಾತಿ, ಧರ್ಮಗಳು ನಮ್ಮ ಬಂಧುತ್ವಕ್ಕೆ ಗೋಡೆಯಾಗಬಾರದು. ಪರಸ್ಪರು ಅವರವರ ನಂಬಿಕೆ, ಆಚರಣೆಗಳನ್ನು ಗೌರಿಸಬೇಕು’ ಎಂದರು.

ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅನ್ಸರ್‌ ಪಾಷ, ‘ಸಂಕ್ರಾಂತಿ ಹಬ್ಬದಲ್ಲಿ ಸೂರ್ಯನು ತನ್ನ ಪಥ ಬದಲಿಸುವಂತೆ ಧರ್ಮ ದ್ವೇಷಿಗಳು ತಮ್ಮ ಪ್ರವೃತ್ತಿ ಬದಲಿಸಿಕೊಳ್ಳಬೇಕು. ಜಾತಿ, ಧರ್ಮ, ಮತ, ಪಂಥಗಳನ್ನು ಬದಿಗಿಟ್ಟು ಸಹೋದರರಂತೆ ಬದುಕಬೇಕು. ಹಾಗಾದರೆ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಇಲಿಯಾಸ್‌ ಅಹಮದ್‌ಖಾನ್‌, ಕಾರ್ಯದರ್ಶಿ ಅಬ್ದುಲ್‌ ಸುಕ್ಕೂರ್‌, ಖಜಾಂಚಿ ಅಯೂಬ್‌ ಷರೀಫ್‌, ಅಬ್ದುಲ್ಲಾ ಬೇಗ್‌, ಏಜಾಸ್‌ ಪಾಷ, ಸಯ್ಯದ್‌ ಕಾಬೂಲ್‌, ಅಫ್ತಾಬ್‌, ರೇಷ್ಮಾಭಾನು, ಖೈರುನ್ನೀಸಾ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಕೆ. ಲತಾ, ಕಾರ್ಯದರ್ಶಿ ಸುಶೀಲಾ, ವಕೀಲ ಸಿ.ಎಸ್‌. ವೆಂಕಟೇಶ್‌, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರವಿಚಂದ್ರ, ಪಾಂಡು, ಪುರಸಭೆ ಮಾಜಿ ಅಧ್ಯಕ್ಷರಾದ ಶೀಲಾ ನಂಜುಂಡಯ್ಯ, ಎಲ್‌. ನಾಗರಾಜು, ಆನಂದ್‌, ಪ್ರಿಯಾ ರಮೇಶ್‌, ಕಲಾವತಿ, ವಿಶ್ವಕರ್ಮ ಸಮಾಜದ ಮುಖಂಡರಾದ ಸತೀಶ್‌, ನಂದೀಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT