ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಲ್ಲು ಗಣಿ: ಗ್ರಾಮಸ್ಥರ ಗೋಳಿಗೆ ಕೊನೆ ಇಲ್ಲ

ಬಿಂಡಿಗನವಿಲೆ ಹೋಬಳಿ ಅರಣ್ಯದಲ್ಲಿ ಸ್ಫೋಟ; ಸಂಕಷ್ಟದಲ್ಲಿ ಜನ, ಜಾನುವಾರು
Last Updated 30 ಆಗಸ್ಟ್ 2018, 16:55 IST
ಅಕ್ಷರ ಗಾತ್ರ

ನಾಗಮಂಗಲ: ಕಳೆದ 20 ವರ್ಷಗಳಿಂದ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಹೊನ್ನಾವರ ಸಮೀಪ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸುತ್ತಲಿನ ಹಲವು ಗ್ರಾಮಗಳ ರೈತರ ಬದುಕು ಬೆಂಕಿಗೆ ಬಿದ್ದಂತಾಗಿದೆ.

ಗಣಿಧಣಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಮೂಲ್ಯ ಅರಣ್ಯ ಸಂಪನ್ಮೂಲ ಹಾಳಾಗುತ್ತಿದ್ದರೂ ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ , ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇತ್ತ ಕಡೆ ತಿರುಗಿ ನೋಡುತ್ತಿಲ್ಲ. ಹೊನ್ನಾವರ ಗ್ರಾಮದ ಸರ್ವೆ ನಂ. 78 ತಾಲ್ಲೂಕಿನ ಗಡಿ ಭಾಗವಾಗಿದ್ದು ಸಂಪೂರ್ಣ ಅರಣ್ಯ ಇಲಾಖೆಗೆ ಸೇರಿದೆ. ಅಕ್ರಮ ಗಣಿ ಮಾಲೀಕರು ಇಲ್ಲಿಯ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ತೆಗೆದು ಹಾಸನ ಜಿಲ್ಲೆಯ ಕ್ರಷರ್‌ಗಳಲ್ಲಿ ಜಲ್ಲಿಯಾಗಿ ಪರಿವರ್ತಿಸುತ್ತಿದ್ದಾರೆ. ಈ ವಿಷಯ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅನಧಿಕೃತ ಗಣಿಗಳಿಂದಾಗಿ ಮನೆಗಳು, ಸರ್ಕಾರಿ ಕಟ್ಟಡಗಳು, ನೀರಿನ ಟ್ಯಾಂಕ್‌ಗಳು, ಶಾಲಾ ಕಟ್ಟಡಗಳು ಬಿರುಕು ಬಿಟ್ಟಿವೆ.

ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ತಾಲ್ಲೂಕಿನ ಹೊನ್ನಾವರ, ಗಾಣಿಗರ ಕೊಪ್ಪಲು, ಎಚ್. ಕ್ಯಾತನಹಳ್ಳಿ, ಮಾಚನಾಯಕನಹಳ್ಳಿ, ಡಿ. ಕೋಡಿಹಳ್ಳಿ, ಕೆ. ಮಲ್ಲೇನಹಳ್ಳಿ ಗ್ರಾಮದ ಮನೆಗಳು ಬಿರುಕು ಮೂಡಿವೆ. ಹೊನ್ನಾವರ ಗ್ರಾಮದಲ್ಲಂತೂ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಮತ್ತು ಪೈಪ್‌ಲೈನ್‌ ಹಾಳಾಗಿವೆ. ಕಲ್ಲು ಸ್ಫೋಟದ ಶಬ್ದದಿಂದಾಗಿ ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಹಸು, ಹೆಮ್ಮೆ ಹಾಗೂ ಇತರ ಪ್ರಾಣಿಗಳು ಹೆದರಿ ಓಡಿಹೋಗುತ್ತಿವೆ.

ನವಿಲುಗಳ ಸಂತತಿ ನಾಶ:
‘ಅರಣ್ಯ ಪ್ರದೇಶದಲ್ಲಿ ಚಿರತೆ, ಕತ್ತೆ ಕಿರುಬಗಳು ವಾಸಿಸುತ್ತಿದ್ದವು. ಗಣಿಗಾರಿಕೆಯಿಂದ ಪ್ರಾಣಿಗಳು ಸಾಯುತ್ತಿವೆ. ರಾತ್ರಿಯ ವೇಳೆ ಕಲ್ಲು ಸ್ಫೋಟ ಮಾಡುತ್ತಿರುವ ಕಾರಣ ಕಲ್ಲು ಬಡಿದು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಇಲ್ಲಿ ಅತೀ ಹೆಚ್ಚು ನವಿಲುಗಳು ವಾಸಿಸುತ್ತಿದ್ದವು. ಆದರೆ ಈಗ ನವಿಲುಗಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಹೊನ್ನಾವರ ಗ್ರಾಮದ ರೈತ ಮಂಜುನಾಥ್‌ ಹೇಳುತ್ತಾರೆ.

ಅಕ್ರ ಗಣಿ ನಡೆಯುವ ಸ್ಥಳಕ್ಕೆ ಹೋಗಿ ಭೇಟಿ ನೀಡಿದರೆ ಮರಣ ಹೊಂದಿದ ನವಿಲುಗಳ ಕಳೇಬರ ಸಿಗುತ್ತವೆ. ಅರಣ್ಯದ ತುಂಬೆಲ್ಲಾ ರಾಶಿ ರಾಶಿಯಾಗಿ ಜಲ್ಲಿ ಕಲ್ಲು ಚೆಲ್ಲಾಡುತ್ತಿರುವ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಸಮೀಪದ ಜಮೀನುಗಳು ಪಾಳು ಬಿದ್ದಿವೆ. ಸೈಜು ಕಲ್ಲುಗಳಿಗಾಗಿ ತೋಡಿರುವ ಹೊಂಡಗಳನ್ನು ನೋಡಿದರೇ ಭೂಮಿಯನ್ನು ಅಗೆದಿರುವ ದೃಶ್ಯಗಳು ಕಾಣುತ್ತವೆ. ಈ ಪ್ರದೇಶದಲ್ಲಿ 300– 600 ಅಡಿಗಳವರೆಗಿನ ಅಪಾಯಕಾರಿ ಹೊಂಡ ಬಾಯ್ತೆರೆದು ನಿಂತಿವೆ. ಬಂಡೆ ಸ್ಫೋಟಕ್ಕಾಗಿ ತೆಗೆದಿರುವ ಕುಳಿಗಳು, ಆಧುನಿಕ ಸ್ಫೋಟಕ್ಕೆ ಬಳಸುವ ವೈರ್‌ಗಳೂ ಎಲ್ಲೆಂದರಲ್ಲಿ ಚೆಲ್ಲಾಡುತ್ತಿವೆ. ಆದರೆ ಇವುಗಳು ಅಧಿಕಾರಿಗಳ ಕಣ್ಣಿಗೆ ಬೀಳದಿರುವುದು ಆಶ್ಚರ್ಯ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಪ್ರದೇಶ ಮೊದಲು ಮರಳು ಮಾಫಿಯಾಗೆ ಬಲಿಯಾಗಿತ್ತು. ಈಗ ಗಣಿಗಾರಿಕೆಯಿಂದ ಜನ– ಜಾನುವಾರು ಅಪಾಯ ಎದುರಿಸುವಂತಾಗಿದೆ. ಗಣಿಗಾರಿಕೆಯಿಂದ ಅಂತರ್ಜಲ ಮಾಯವಾಗಿ ಕೆರೆಗಳು ಪಾಳುಬಿದ್ದಿವೆ, ಕೊಳವೆಬಾವಿಗಳು ಬತ್ತಿ ಹೋಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ 500– 600 ಅಡಿ ಕೊಳವೆ ಬಾರಿ ಕೊರಸಿದರೂ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ನೋವು ವ್ಯಕ್ತಪಡಿಸುತ್ತಾರೆ. ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮಹಿಳೆಯರು ಸೇರಿ ಸಾರ್ವಜನಿಕರು ಹಲವು ಹೋರಾಟ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.

‘ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಈಚೆಗೆ ಮುತ್ತಿಗೆ ಹಾಕಿ ಗಣಿಗಾರಿಕೆಗೆ ಬಳಸುವ ಟ್ರಾಕ್ಟರ್, ಕಂಪ್ರೆಷರ್ ಹಾಗೂ ಇತರ ಯಂತ್ರಗಳನ್ನು ತಂದು ಊರಿನಲ್ಲಿ ಇಟ್ಟಿದ್ದೆವು. ಬಿಂಡಿಗನವಿಲೆ ಮತ್ತು ಹಾಸನಜಿಲ್ಲೆಯ ಶ್ರವಣಬೆಳಗೊಳ ಠಾಣಾ ಪೊಲೀಸರು ಹೊನ್ನಾವರ ಗ್ರಾಮಕ್ಕೆ ಹೋಗಿ ಧಮಕಿ ಹಾಕಿ ಗಣಿ ಪರಿಕರಗಳನ್ನು ವಾಪಸ್‌ ಕೊಡಿಸಿದ್ದಾರೆ. ಕೊಡದೇ ಇದ್ದಲ್ಲಿ ನಿಮ್ಮ ಮೇಲೆ ರೌಡಿ ಶೀಟ್‌ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ’ ಎಂದು ಹೊನ್ನಾವರ ಗ್ರಾಮಸ್ಥರು ತಿಳಿಸಿದರು.

*********

ಅರಣ್ಯ ಪ್ರದೇಶಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಕ್ರಮವಾಗಿ ಕಲ್ಲು ತೆಗೆಯುತ್ತಿರುವುದು ಪತ್ತೆಯಾದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ. ಈ ವಿಷಯದಲ್ಲಿ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಲಾಗುವುದು
– ಎಂ.ನಂಜುಂಡಯ್ಯ, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT