ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಶೋಧನೆಗಳಿಂದ ಹೊರ ಜಗತ್ತಿನ ಉನ್ನತಿ

ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2ಕೆ20 ಅಂತರರಾಷ್ಟ್ರೀಯ ಸಮ್ಮೇಳನ; ಬಸವಯ್ಯ ಅಭಿಮತ
Last Updated 28 ಫೆಬ್ರುವರಿ 2020, 12:55 IST
ಅಕ್ಷರ ಗಾತ್ರ

ಮಂಡ್ಯ: ‘ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯನ್ನು ಹೊರ ಜಗತ್ತಿನ ಮುಂದೆ ಅನಾವರಣಗೊಳಿಸಬೇಕು. ಹೊಸ ಸಂಶೋಧನೆಗಳು ಜಗತ್ತಿನ ಉನ್ನತಿಗೆ ಉಪಯೋಗವಾಗಬೇಕು’ ಎಂದು ಜನತಾ ಶಿಕ್ಷಣ ಟ್ರಸ್ಟ್‌ ಉಪಾಧ್ಯಕ್ಷ, ವಕೀಲ ಬಸವಯ್ಯ ಹೇಳಿದರು.

ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು, ನ್ಯೂಯಾರ್ಕ್ ವಿಶ್ವವಿದ್ಯಾಲಯ, ಉತ್ತರ ಪ್ರದೇಶದ ಯುಎಸ್‍ಎಸ್‍ಐಇಟಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗಲ್ಲಿ ಶುಕ್ರವಾರ ನಗರದ ಪಿಇಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅಡ್ವಾನ್ಸಸ್‌ ಇನ್ ಮಕ್ಯಾನಿಕಲ್ ಎಂಜಿನಿಯರಿಂಗ್ ಸೈನ್ಸಸ್‌ (ಯಂತ್ರ ಶಿಲ್ಪಿ ವಿಜ್ಞಾನದ ಹೊಸ ಬೆಳವಣಿಗೆಗಳು)– 2ಕೆ20 ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

‘ಇಂದು ತಂತ್ರಜ್ಞಾನ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ವಿಜ್ಞಾನ, ವೈದ್ಯ ವಿಜ್ಞಾನ ಎಲ್ಲದಕ್ಕೂ ತಂತ್ರಜ್ಞಾನ ಬೇಕೇ ಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲೂ ತಂತ್ರಾಂಶಗಳ ಅನಿವಾರ್ಯತೆ ಇದೆ. ಅಪರಾಧಿಗಳನ್ನು ವಿಚಾರಣೆಗೆ ಬೇರೆಡೆ ಕರೆದೊಯ್ಯುವ ಬದಲು ಇರುವ ಸ್ಥಳದಲ್ಲೇ ಕುಳಿತು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವ ಅವಕಾಶಗಳಿವೆ. ತಂತ್ರಜ್ಞಾನದಿಂದ ಚಿನ್ನದ ನಿಕ್ಷೇಪ ಪತ್ತೆ ಹಚ್ಚುತ್ತಿದ್ದಾರೆ. ಜನಜೀವನ ತಂತ್ರಾಂಶಗಳ ಮೇಲೆ ಅವಲಂಬಿತವಾಗಿದೆ’ ಎಂದರು.

‘ವಿದ್ಯಾರ್ಥಿಗಳು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಚಿಂತನೆ ನಡೆಸಬೇಕು. ಅದು ಅವರ ಕರ್ತವ್ಯವೂ ಆಗಬೇಕು. ವಿಜ್ಞಾನ ಮತ್ತು ನೀತಿ ಎರಡು ಜೊತೆಜೊತೆಯಲ್ಲೇ ಸಾಗಬೇಕು. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಂವಿಧಾನದ ಅರಿವು ಹೊಂದಬೇಕು. ಹಕ್ಕು, ಕರ್ತವ್ಯಗಳ ಬಗ್ಗೆ ತಿಳಿದು ಕೊಳ್ಳಬೇಕು. ವೈಜ್ಞಾನಿಕವಾಗಿ ಪ್ರತಿಯೊಂದು ಅಂಶಗಳನ್ನು ಅವಲೋಕಿಸಿ, ದೇಶದ ಬೆಳವಣಿಗೆಗೆ ಸಹಕಾರ ನೀಡಬೇಕು’ ಎಂದರು.

‘ತಂತ್ರಜ್ಞಾನ ಇಲ್ಲದಿದ್ದರೆ ಪ್ರಪಂಚ ವೈಶಾಲ್ಯತೆ ಮನುಷ್ಯನಿಗೆ ತಿಳಿಯುತ್ತಿರಲಿಲ್ಲ. ಮನುಷ್ಯ ಕುಬ್ಜನಾಗುತ್ತಿದ್ದ. ತಂತ್ರಜ್ಞಾನದಿಂದ ಭೂಮಿ- ಆಕಾಶ, ಪಾತಾಳ ಒಂದಾಗಿದೆ. ಸಾಕಷ್ಟು ವಿಚಾರಗಳು ಕ್ಷಣಮಾತ್ರದಲ್ಲಿ ದೊರೆಯುತ್ತವೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳಬೇಕು. ಆಲೋಚನೆಯಲ್ಲಿ ವಿಜ್ಞಾನದ ದೃಷ್ಟಿಕೋನ ಇದ್ದಾಗ ಉತ್ತಮ ಸಂಶೋಧನೆಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದರು.

ನ್ಯೂಯಾರ್ಕ್‌ ಬಿಂಗಮ್‌ಟನ್‌ ವಿವಿ ಪ್ರಾಧ್ಯಾಪಕ ಪ್ರೊ.ಮೈಕಲ್‌ ವಿ.ಟೆಸ್ಟಾನಿ ಮಾತನಾಡಿ ‘ಮಂಡ್ಯದಲ್ಲಿ ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನದಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಬಲುದೊಡ್ಡ ಅವಕಾಶ ಸಿಕ್ಕಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಹೊಸ ಸಂಶೋಧನೆ, ಆವಿಷ್ಕಾರಗಳನ್ನು ಮಂಡನೆ ಮಾಡಬೇಕು’ ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಐಐಟಿಯ ರೋಹಿತ್ ಶರ್ಮಾ, ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ, ಪ್ರಾಧ್ಯಾಪಕರಾದ ಡಾ.ಕೆ.ನರಸಿಂಹಚಾರಿ, ಡಾ.ಕೆ.ಎಂ.ಜಗದೀಶ್, ಡಾ.ವಿ.ಆರ್.ದೇವದತ್, ಡಾ.ಎನ್.ಎಲ್.ಮುರಳೀಕೃಷ್ಣ ಇದ್ದರು.

32 ಪ್ರಬಂಧಗಳ ಮಂಡನೆ

ಮೊದಲ ದಿನದ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ 32 ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಪ್ರಬಂಧ ಮಂಡನೆ ಮಾಡಿದರು. ಬೇರೆ ಬೇರೆ ಕೊಠಡಿಗಳಲ್ಲಿ ಪ್ರಬಂಧ ಮಂಡನೆಗೆ ಅವಕಾಶ ಕಲ್ಪಿಸಲಾಗಿತ್ತು. ಡಾ.ಅಶ್ವತ್ಥ್, ವಿ.ಎಂ.ವಿಜಯಕುಮಾರ್‌, ಝೈನುದ್ದೀನ್‌ ಎ. ರಶಿದ್‌, ಡಾ.ಅನಂತ್‌ ಎಸ್‌.ಅಯ್ಯಂಗಾರ್‌ ಸೇರಿ ಹಲವರು ತಮ್ಮ ವಿಚಾರ ಮಂಡಿಸಿದರು. ನಂತರ ಸಂವಾದವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT