ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ: ಬಿಜೆಪಿ ಹುಳುಕು ಮುಚ್ಚಿಕೊಳ್ಳಲು ಸಿಎಂ ಹೆಸರು ದುರ್ಬಳಕೆ- ಚಲುವರಾಯಸ್ವಾಮಿ

ಡಿ.ಕೆ.ಶಿವಕುಮಾರ್‌ ಅವರಿಗೆ ಸಂಚು ಮಾಡಿ ಡಿಸಿಎಂ ಆಗುವ ಅವಶ್ಯವಿಲ್ಲ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.
Published 6 ಜುಲೈ 2024, 10:07 IST
Last Updated 6 ಜುಲೈ 2024, 10:07 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ ಸರ್ಕಾರದಲ್ಲಿ ಗೋಲ್‌ಮಾಲ್‌ ನಡೆದಿತ್ತು. ಬಿಜೆಪಿ ಸರ್ಕಾರವೇ ಜಾಗ ಕೊಟ್ಟಿತ್ತು. ಇದನ್ನು ಮುಚ್ಚಿಕೊಳ್ಳಲು ಮೈಸೂರಿನ ‘ಮುಡಾ’ ಪ್ರಕರಣದಲ್ಲಿ ಮುಖ್ಯಮಂತ್ರಿ ಹೆಸರನ್ನು ಎಳೆದು ತಂದಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಸಂಚು ಮಾಡಿ ಡಿಸಿಎಂ ಆಗುವ ಅವಶ್ಯವಿಲ್ಲ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. 

ನಗರದಲ್ಲಿ ಶನಿವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮುಡಾ ಪ್ರಕರಣದ ಬಗ್ಗೆ ಮಾತನಾಡುವ ಎಚ್‌.ಡಿ.ಕುಮಾರಸ್ವಾಮಿಯವರು ತಮ್ಮ ಬೆನ್ನನ್ನು ತಿರುಗಿ ನೋಡಿಕೊಳ್ಳಬೇಕು. ಅವರು ಮಂಡ್ಯ ಸಂಸದರಾಗಿ ಆಯ್ಕೆಯಾಗಿ ಈಗ ಕೇಂದ್ರ ಸಚಿವರಾಗಿದ್ದಾರೆ. ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ ಎಂದು ತಿರುಗೇಟು ನೀಡಿದರು.  

ಸರ್ಕಾರದ ಜನಸಂಪರ್ಕ ಸಭೆಗಳಿಂದ ಜನರಿಗೆ ಪ್ರಯೋಜನವಾಗುತ್ತಿಲ್ಲ ಎಂಬ ಎಚ್‌.ಡಿ.ಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಕುಮಾರಸ್ವಾಮಿಯವರ ಜನತಾ ದರ್ಶನಕ್ಕೆ ಜನರನ್ನು ಲಾರಿ ಮತ್ತು ಟ್ರ್ಯಾಕ್ಟರ್‌ನಲ್ಲಿ ಕರೆದುಕೊಂಡು ಬಂದರೋ ಗೊತ್ತಿಲ್ಲ. ಅವರ ಮೇಲಿನ ಪ್ರೀತಿಯಿಂದಲೇ ಬಂದಿರಬಹುದು ಅಂತ ತಿಳಿದುಕೊಳ್ಳೋಣ. ಕೇಂದ್ರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಅರ್ಜಿ ಸಲ್ಲಿಕೆಯಾಗಿರಬಹುದು. ಅವರಿಗೆ ಯಾವ ರೀತಿಯ ಅರ್ಜಿಗಳು ಸಲ್ಲಿಕೆಯಾಗಿವೆ ನೋಡೋಣ ಎಂದರು.  

ಬಿಜೆಪಿ ಸುತ್ತೋಲೆ

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯಾವ ಆದೇಶವಿತ್ತೋ, ಈಗಲೂ ಅದೇ ಆದೇಶವಿದೆ. ಇವರ ಜನತಾದರ್ಶನದ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಾವು ಚರ್ಚೆ ಮಾಡಿಲ್ಲ. ಚಿತ್ರದುರ್ಗದ ಸಂಸದರಾಗಿದ್ದ ನಾರಾಯಣಸ್ವಾಮಿ ಹೀಗೆ ಮಾಡಲು ಹೊರಟಾಗ ಬಿಜೆಪಿ ಸರ್ಕಾರ ಮಾಡಿದ್ದ ಸುತ್ತೋಲೆಯನ್ನೇ ಈಗ ನಾವು ಹೊರಡಿಸಿದ್ದೇವೆ ಅಷ್ಟೆ’ ಎಂದು ಚಲುವರಾಯಸ್ವಾಮಿ ಹೇಳಿದರು. 

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ, ಸಂಸದರು, ಕೇಂದ್ರ ಸಚಿವರ ಬಗ್ಗೆ ಲಘುವಾಗಿ ಮಾತನಾಡಿದ್ದರು, ಅವರು ಯಾರು ನಮಗೆ ಹೇಳೋಕೆ ಎಂಬಂತೆ ವರ್ತಿಸಿದ್ದರು. ಎರಡು ಬಾರಿ ಸಿ.ಎಂ ಆಗಿರುವ ಕುಮಾರಸ್ವಾಮಿಗೆ ಕಾನೂನು ಜ್ಞಾನ ಇಲ್ಲವಾ ಅಂತ ನಾನು ಕೇಳೋಕೆ ಹೋಗಲ್ಲ. ಅವರಿಗೆ ನೋಯಿಸುವ ಉದ್ದೇಶ ನನಗಿಲ್ಲ. ಕುಮಾರಸ್ವಾಮಿ ಒಬ್ಬರದ್ದೇ ದೊಡ್ಡತನ, ಮಿಕ್ಕವರೆಲ್ಲಾ ಸಣ್ಣವರು’ ಎಂದು ವ್ಯಂಗ್ಯವಾಗಿ ಹೇಳಿದರು. 

ಜಿಲ್ಲೆಗೆ ಅನುದಾನ ತರಲಿ

ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್‌ ಮತ್ತು ಬಸವರಾಜ ಬೊಮ್ಮಾಯಿ ಅವರನ್ನು ಬಿಟ್ಟು, ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿದ್ದಾರೆ ಅಂದರೆ, ಇವರ ಮೇಲೆ ಮೋದಿ ಅವರಿಗೆ ಹೆಚ್ಚು ವಿಶ್ವಾಸವಿದೆ ಎಂದರ್ಥ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಿ. ನೀರಾವರಿ ಯೋಜನೆಗೆ ₹5 ಸಾವಿರ ಕೋಟಿ ತರಲಿ. ರಂಗನಾಥಸ್ವಾಮಿ ಮತ್ತು ಚಲುವನಾರಾಯಣ ಸ್ವಾಮಿ ದೇಗುಲ ಅಭಿವೃದ್ಧಿಗೆ ಅನುದಾನ ತರಲಿ. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗ ನಿವಾರಿಸಲಿ. ನಾವು ಏಳೂ ಶಾಸಕರು ಮತ್ತು ಜಿಲ್ಲಾಡಳಿತ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT