ಭಾನುವಾರ, ಏಪ್ರಿಲ್ 11, 2021
32 °C
ಅಭಿನವ ಭಾರತಿ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಅಪೂರ್ವ ಸಾಧನೆ: ಡಾ.ಕೆ.ಎಸ್‌.ರಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಅಪೂರ್ವ ಸಾಧನೆ ಮಾಡಿದೆ. ಬಾಹ್ಯಾಕಾಶ, ಖಗೋಳ ವಿಜ್ಞಾನದ ಬಗ್ಗೆ ಯುವಜನರು ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ವಿಶ್ರಾಂತ ಕುಲಪತಿ, ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷ ಡಾ.ಕೆ.ಎಸ್‌.ರಂಗಪ್ಪ ಹೇಳಿದರು.

ನಗರದ ಶಂಕರನಗರದಲ್ಲಿರುವ ಅಭಿನವ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ‘ನಿತ್ಯದ ಜೀವನದಲ್ಲಿ ಖಗೋಳವಿಜ್ಞಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನಮ್ಮ ದೇಶ ತಂತ್ರಜ್ಞಾನ ಅಳವಡಿಸಿಕೊಳ್ಳುವ ವಿಚಾರದಲ್ಲಿ ಬಹಳ ಹಿಂದುಳಿದಿತ್ತು. ನಮ್ಮ ದೇಶಕ್ಕೆ ಕಂಪ್ಯೂಟರ್‌ ಬಂದಾಗ ಒಂದು ಕೊಠಡಿಯ ಗಾತ್ರವಿತ್ತು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಾವು ಬಹಳ ಮುಂದೆ ಸಾಗಿದ್ದೇವೆ. ಹೊಸ ವಿಜ್ಞಾನ ಆವಿಷ್ಕಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಹೇಳಿದರು.

‘ಮಕ್ಕಳು ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಹೊಂದಬೇಕು. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲೂ ವಿಜ್ಞಾನ ಪ್ರಮುಖ ಕ್ಷೇತ್ರವಾಗಿ ಬೆಳೆಯುತ್ತಿವೆ. ಎಲ್ಲಾ ರಾಷ್ಟ್ರಗಳು ವಿಜ್ಞಾನಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಅದೇ ರೀತಿ ಭಾರತ ಕೂಡ ವಿಜ್ಞಾನದಲ್ಲಿ ಮಹತ್ತರವಾದ ಸಾಧನೆ ಮಾಡುತ್ತಿದೆ’ ಎಂದರು.

‘ವಿಜ್ಞಾನವಿಲ್ಲದೆ ಪ್ರಂಪಚವೇ ಶೂನ್ಯ ಇದ್ದಂತೆ, ವಿಜ್ಞಾನದಿಂದ ಎಲ್ಲವನ್ನೂ ಮನುಷ್ಯ ಪಡೆದುಕೊಳ್ಳುತ್ತಿದ್ದಾನೆ. ಅವಿಷ್ಕಾರ ಮಾಡಿ ಅಭಿವೃದ್ಧಿ ಹೊಂದಲು ಮುಂದಾಗಿದ್ದಾನೆ.ವಿದ್ಯಾರ್ಥಿಗಳು ವಿಜ್ಞಾನ ಅಧ್ಯಯನಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಹೊಸದಾಗಿ ಜಾರಿಗೊಳ್ಳುತ್ತಿರುವ ರಾ‌ಷ್ಟ್ರೀಯ ಶಿಕ್ಷಣ ನೀತಿ ಸಮರ್ಪಕವಾಗಿ ಅನುಷ್ಠಾನಗೊಂಡರೆ ವಿಜ್ಞಾನಕ್ಕೆ ಪ್ರಮುಖ ಆದ್ಯತೆ ದೊರೆಯಲಿದೆ’ ಎಂದರು.

‘ಶಾಲಾ–ಕಾಲೇಜುಗಳಲ್ಲಿ ವಿಜ್ಞಾನ ಕುರಿತ ಸಮಾರಂಭ ಆಯೋಜನೆ ಮಾಡುವುದು ಉತ್ತಮ ವಿಷಯವಾಗಿದೆ. ಅಭಿನವ ಭಾರತಿ ಶಾಲೆ ವಿದ್ಯಾರ್ಥಿಗಳು ನಾಸಾ ಪ್ರವಾಸ ಮಾಡಿದ್ದಾರೆ ಎಂಬುದು ಹೆಮ್ಮೆಯ ವಿಷಯ. ನಮ್ಮ ರಾಜ್ಯದಲ್ಲಿ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಟೆಲಿಸ್ಕೋಪ್‌ ಇದೆ. ಅಭಿನವ ಭಾರತಿ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿರುವುದು ಸಂತೋಷದ ವಿಚಾರ’ ಎಂದರು.

ವಿಷಯ ಪರಿವೀಕ್ಷಕ ಎಸ್‌.ಲೋಕೇಶ್‌, ಸ್ಲೈಡ್‌ಗಳ ಮೂಲಕ ಖಗೋಳವಿಜ್ಞಾನದ ಪ್ರಮುಖ ಅಂಶಗಳನ್ನು ವಿವರಿಸಿದರು. ಗ್ರಹಗಳ ಗಾತ್ರ, ಅವುಗಳ ಪರಿಭ್ರಮಣೆ, ಪ್ರಾಮುಖ್ಯತೆ ಬಗ್ಗೆ ವಿವರ ನೀಡಿದರು. ಸ್ಪೆಲ್ಲೇರಿಯಂ ತಂತ್ರಜ್ಞಾನ ಕುರಿತು ವಿವರಿಸಿದ ಅವರು,  ಹಿಂದೆ ನಡೆದಿರುವ ಗ್ರಹಣಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

ಎಸ್.ಬಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ ‘1986ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ, ಕಮ್ಯುನಿಕೇಷನ್‌ ಕೇಂದ್ರ ಸರ್ಕಾರಕ್ಕೆ ಫೆಬ್ರುವರಿ 28ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮಾಡಬೇಕು ಎಂದು ಮನವಿ ಸಲ್ಲಿಸಿತು. ಅದರಂತೆ ವಿಶ್ವಕ್ಕೆ 'ರಾಮನ್ ಎಫೆಕ್ಟ್' ಸಿದ್ಧಾಂತ ನೀಡಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಪ್ರಾಚಾರ್ಯೆ ಅಂಜಲಿ ಜೋಷಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು