ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಪ್ರೀತಿಸುವ ಮನಸ್ಸುಗಳು ಬೇಕಾಗಿವೆ

ಚದುರಿದ ತಾರೆಗಳ ಸಮ್ಮಿಲನ; ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್‌ರಾಮ್‌ ಅಭಿಮತ
Last Updated 20 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಮಂಡ್ಯ: ‘ಕನ್ನಡ ಸಾಯುವ ಭಾಷೆಯಲ್ಲ, ಇಂಗ್ಲಿಷ್‌ಗಿಂತಲೂ ಪುರಾತನವಾದ ಕನ್ನಡವನ್ನು ಪ್ರೀತಿಸುವ ಮನಸ್ಸುಗಳು ಬೇಕಾಗಿವೆ. ಕನ್ನಡದಲ್ಲಿ ಜೀವಿಸಿ, ಭಾವಿಸಿ, ಕನ್ನಡ ಅನುರಣಿಸುವಂತೆ ಮಾಡಬೇಕಾಗಿದೆ’ ಎಂದು ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಚೇತನ್ ರಾಮ್ ಹೇಳಿದರು.

ವಿಶ್ವ ಕನ್ನಡ ವೇದಿಕೆ ವತಿಯಿಂದ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಗುರುವಾರ ನಡೆದ ಚದುರಿದ ತಾರೆಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಆಡುವ ಮಾತಿನಂತೆ ಬರೆಯುವ ಭಾಷೆಯೊಂದಿದ್ದರೆ ಅದು ಕನ್ನಡ ಮಾತ್ರ. ಕನ್ನಡದಲ್ಲಿನ ಸ್ಪಷ್ಟತೆ ಯಾವ ಭಾಷೆಯಲ್ಲೂ ಕಾಣಲು ಸಾಧ್ಯವಿಲ್ಲ. ಕನ್ನಡವನ್ನು ಮಾತನಾಡುವ ಕೋಟಿ ಕೋಟಿ ಮನಸ್ಸುಗಳಿದ್ದು, ಶಾಶ್ವತವಾಗಿ ಭಾಷೆ ಬೆಳೆಯಲಿದೆ’ ಎಂದರು.

ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ಮುದ್ದೇಗೌಡ ಮಾತನಾಡಿ ‘ಕನ್ನಡ ಭಾಷೆಯ ಮೇಲೆ ಹಿಂದಿಗಿಂತಲೂ ಇಂದು ಹೆಚ್ಚು ಆಕ್ರಮಣ ನಡೆಯುತ್ತಿದೆ. ಇಂಗ್ಲಿಷ್‌ ಮಾಧ್ಯಮದ ಹೆಸರಿನಲ್ಲಿ ಈ ಮಣ್ಣಿನ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಯಾವುದೇ ಭಾಷೆ ಉಳಿಯಬೇಕು, ಬೆಳೆಯಬೇಕು ಎಂದರೆ ಅದನ್ನು ಹೆಚ್ಚೆಚ್ಚು ಬಳಸಬೇಕು. ಆದರೆ ನಮ್ಮಲ್ಲಿ ಅದು ಆಗುತ್ತಿಲ್ಲ. ಎಲ್ಲಾ ಪೋಷಕರೂ ಇಂಗ್ಲಿಷ್‌ ವ್ಯಾಮೋಹಕ್ಕೆ ಸಿಲುಕುತ್ತಿದ್ದಾರೆ’ ಎಂದರು.‌

‘350 -400 ವರ್ಷಗಳ ಇತಿಹಾಸವಿರುವ ಇಂಗ್ಲಿಷ್ ಭಾಷೆ ಜಗತ್ತನ್ನು ಆವರಿಸಿದೆ. ಕನ್ನಡದಲ್ಲಿ ಮಾತನಾಡುವುದೇ ಅಪಮಾನ ಎಂಬ ಭಾವನೆ ಮೂಡಿದ್ದು, ಪೋಷಕರು ಇದಕ್ಕೆ ಅವಕಾಶ ಕಲ್ಪಿಸಿಕೊಡದೆ ಕನ್ನಡ ಬೆಳೆಸಬೇಕು. ಜಾಗತಿಕ ಮಟ್ಟದಲ್ಲಿ ಸಾಯುತ್ತಿರುವ ಭಾಷೆಗಳ ಸಾಲಿನಲ್ಲಿ ಕನ್ನಡ 40ನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಇದು ಇಂದು, ನೆನ್ನೆ ಹುಟ್ಟಿದ ಭಾಷೆಯಲ್ಲ. ಅಂದಾಜು 2500 ವರ್ಷಗಳ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಇದರ ಬೇರುಗಳು ಭೂಮಿಯ ಅಗಲಕ್ಕೂ, ಆಳಕ್ಕೂ ಹರಡಿಕೊಂಡಿದೆ. ಇದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ’ ಎಂದರು.

‘ಎಷ್ಟೇ ಕಷ್ಟ ಇದ್ದರೂ, ಪೋಷಕರು ತಮ್ಮ ಮಗುವನ್ನು ಇಂಗ್ಲಿಷ್ ಮಾಧ್ಯಮದಲ್ಲೇ ವ್ಯಾಸಂಗ ಮಾಡಿಸಬೇಕು ಎಂದು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಬೇರೆ ಭಾಷೆ ಕಲಿಯೋದು ಬೇಡ ಎನ್ನುತ್ತಿಲ್ಲ, ಎಲ್ಲ ಭಾಷೆಗಳನ್ನು ಕಲಿಯೋಣ, ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಕನ್ನಡ ಭಾಷೆ ಎಂಬುದು ತಂದೆ-ತಾಯಿ ಭಾಷೆ. ಇಂಗ್ಲಿಷ್, ಹಿಂಹಿ ಇನ್ನಿತರೆ ಭಾಷೆಗಳು ನೆಂಟರಿದ್ದ ಹಾಗೆ ತಾಯಿ ಭಾಷೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

‘ಇತ್ತೀಚೆಗೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಶಾಲೆಗಳಲ್ಲೂ ವ್ಯಾಸಂಗ ಮಾಡಿ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಗಳು ಕಣ್ಣೆದುರೇ ಇವೆ. ಪೋಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಠಕ್ಕೆ ಬಿದ್ದಾದರೂ ಕನ್ನಡ ಶಾಲೆಗಳನ್ನು ಉಳಿಸಲೇಬೇಕು’ ಎಂದರು.

ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡಿ ವಿವಿಧ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದಕ್ಷಿಣ ಶಿರಡಿ ಪೀಠಾಧ್ಯಕ್ಷ ಡಾ.ಸಾಯಿ ದತ್ತ ರಘುನಾಥ ಗೂರೂಜಿ ಸಾನಿಧ್ಯ ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ದೊಡ್ಡಚಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಜೆಡಿಎಸ್ ಮುಖಂಡ ಕೆ.ರಾಧಾಕೃಷ್ಣ, ವಿಶ್ವ ಕನ್ನಡ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್.ವಿಜಯಕುಮಾರ್‌ಗೌಡ, ಕಾನೂನು ಘಟಕದ ಅಧ್ಯಕ್ಷ ಎಸ್.ಎಂ.ಶಿವಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಎನ್.ನಟರಾಜ್, ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT