ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ದುಬಾರಿ, ಬೀನ್ಸ್‌ ಬೆಲೆ ಏರಿಕೆ

ಹೊಸ ಈರುಳ್ಳಿ ಕೆ.ಜಿಗೆ ₹70–80, ಹಳೆ ಈರುಳ್ಳಿ ₹100; ಕುಸಿದ ಸೊಪ್ಪಿನ ದರ
Last Updated 27 ಅಕ್ಟೋಬರ್ 2020, 4:01 IST
ಅಕ್ಷರ ಗಾತ್ರ

ಮಂಡ್ಯ: ಮಳೆ, ಉತ್ತಮ ಗುಣಮಟ್ಟದ ಆವಕದ ಕೊರತೆ ಕಾರಣದಿಂದ ಈರುಳ್ಳಿ ಬೆಲೆ ₹100ರ ಗಡಿ ತಲುಪಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ₹40 ಇದ್ದ ಬೀನ್ಸ್‌ ₹60ಕ್ಕೆ ಏರಿಕೆಯಾಗಿದೆ.

ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ಮಳೆ ಕಾರಣದಿಂದ ಈರುಳ್ಳಿ ಬೆಳೆ ನೆಲಕಚ್ಚಿದ್ದು, ಆವಕ ಇಲ್ಲದ ಕಾರಣ ದಿಢೀರನೆ ಬೆಲೆಯಲ್ಲಿ ಏರಿಕೆ ಕಂಡಿದೆ. ಕಳೆದ ವಾರ ₹50 ಇದ್ದ ಈರುಳ್ಳಿ ದರ ಸೋಮವಾರ ₹100ಕ್ಕೆ ಏರಿದೆ. ಕೆಲವೆಡೆ ಹಸಿಈರುಳ್ಳಿ ₹60ಕ್ಕೆ ಸಿಗುತ್ತಿದ್ದು, ಬಹುತೇಕ ಈರುಳ್ಳಿ ಕೊಳೆತು ಹೋಗುವ ಸಂಭವ ಇದೆ. ಹೊಸ ಈರುಳ್ಳಿ ₹70–80ಕ್ಕೆ ಸಿಗುತ್ತಿದ್ದು, ಗ್ರಾಹಕರು ಕಡಿಮೆ ಬೆಲೆಯ ಈರುಳ್ಳಿ ಖರೀದಿಗೆ ಮೊರೆ ಹೋಗುತ್ತಿದ್ದಾರೆ.

ಫಾಸ್ಟ್‌ಫುಡ್‌ ತಯಾರಕರು, ಹೋಟೆಲ್‌ ಮಾಲೀಕರು ಈರುಳ್ಳಿ ಬಳಕೆ ಕಡಿಮೆ ಮಾಡಿದ್ದು, 10 ಕೆ.ಜಿ. ಖರೀದಿಸುವ ಜಾಗಕ್ಕೆ 5ಕೆ.ಜಿ. ಖರೀದಿಸುತ್ತಿದ್ದಾರೆ. ಫ್ರೈಡ್‌ ರೈಸ್‌, ಗೋಬಿ ಮಂಚೂರಿ, ಕಬಾಬ್‌ಗೆ ಜೊತೆಗೆ ನೀಡುತ್ತಿದ್ದ ಈರುಳ್ಳಿ ಜಾಗಕ್ಕೆ ಸೌತೇಕಾಯಿ ಬಂದಿದೆ.

₹40 ಇದ್ದ ಎಲೆಕೋಸು ₹50ಕ್ಕೆ ಏರಿಕೆಯಾಗಿದ್ದು, ಫಾಸ್ಟ್‌ ಫುಡ್‌ ಸೆಂಟರ್‌ ಮಾಲೀಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಸಾಮಾನ್ಯವಾಗಿ ₹20ಕ್ಕೆ ಸಿಗುತ್ತಿದ್ದ ಎಲೆಕೋಸು ಕೆ.ಜಿ.ಗೆ ₹50 ಆಗಿದ್ದು, ಕಡಿಮೆ ಲಾಭಕ್ಕೆ ಮಾರುವಂತಾಗಿದೆ.

‘ಕೊರೊನಾ ಕಾರಣದಿಂದ ಸರಿಯಾಗಿ ವ್ಯಾಪಾರ ನಡೆಯುತ್ತಿಲ್ಲ. ಈ ಮಧ್ಯೆ ಎಲೆಕೋಸು ಬೆಲೆ ಏರಿಕೆ ಕಂಡಿದ್ದು, ಗೋಬಿ ಮಂಚೂರಿ ಬೆಲೆ ಏರಿಕೆ ಮಾಡಲಾಗುತ್ತಿಲ್ಲ. ಆದ್ದರಿಂದ ಕಡಿಮೆ ಲಾಭಕ್ಕೆ ಮಾರಲಾಗುತ್ತಿದೆ’ ಎಂದು ಗೋಬಿ ಸೆಂಟರ್ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

ಸೌತೇಕಾಯಿ ಬೆಲೆ ಕಡಿಮೆಯಾಗಿದ್ದು, ₹10ಕ್ಕೆ 3–4 ನೀಡಲಾಗುತ್ತಿದೆ. ನಿಂಬೆಹಣ್ಣು ₹2–2.5ಗೆ ಮಾರಾಟ ಮಾಡಲಾಗುತ್ತಿದೆ. ಬೀಟ್‌ರೂಟ್‌ ₹60, ಸುವರ್ಣಗೆಡ್ಡೆ ₹50, ಟೊಮೆಟೊ ₹20, ಶುಂಠಿ ₹50, ನಾಟಿ ಬೆಳ್ಳುಳ್ಳಿ ₹100, ಹೀರೇಕಾಯಿ ₹40, ಹಸಿರುಮೆಣಸಿನಕಾಯಿ ₹50, ಬದನೇಕಾಯಿ ₹40, ಕ್ಯಾರೆಟ್‌ ₹80, ನುಗ್ಗೇಕಾಯಿ ₹120, ಗೆಡ್ಡೆಕೋಸು ₹40, ಹೂಕೋಸು ಒಂದಕ್ಕೆ ₹30, ಆಲೂಗೆಡ್ಡೆ ₹50, ಬೂದುಗುಂಬಳ ₹30, ಹಾಗಲಕಾಯಿ ₹50, ಚೌಳೀಕಾಯಿ ₹60, ₹40 ಇದ್ದ ಭಜ್ಜಿಮೆಣಸಿನಕಾಯಿ ₹60 ರಂತೆ ಮಾರಲಾಗುತ್ತಿದೆ.

ಸೇಬು ₹80–100, ಸೀಡ್‌ಲೆಸ್‌ ದ್ರಾಕ್ಷಿ ₹120–140, ದ್ರಾಕ್ಷಿ ₹120, ಸಪೋಟ ₹60, ಮೂಸಂಬಿ ₹60, ದಾಳಿಂಬೆ ₹120–140, ಅನಾನಸ್‌ ಒಂದಕ್ಕೆ ₹30, ಕಿತ್ತಳೆ ₹60, ಹಬ್ಬದಲ್ಲಿ ₹70 ಇದ್ದ ಏಲಕ್ಕಿಬಾಳೆಹಣ್ಣು ₹50ಕ್ಕೆ ಇಳಿದಿದೆ. ಪಚ್ಚಬಾಳೆಹಣ್ಣು ₹20ರಂತೆ ಮಾರಲಾಗುತ್ತಿದೆ.

ಮಳೆ ಕಾರಣದಿಂದ ಉತ್ತಮ ಗುಣಮಟ್ಟದ ಸೊಪ್ಪು ಮಾರುಕಟ್ಟೆಗೆ ಬಾರದ ಕಾರಣ ಸೊಪ್ಪು ಕೊಳೆತು ಹೋಗುತ್ತಿದ್ದು, ಬೆಲೆಯಲ್ಲಿ ಇಳಿತ ಕಂಡಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದು, ಆದರೆ ಕೊಳೆತೇ ಹೋಗಿರುತ್ತದೆ. ಅದನ್ನು ಬೇರ್ಪಡಿಸಿ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸೊಪ್ಪು ವ್ಯಾಪಾರಿಯೊಬ್ಬರು ತಿಳಿಸಿದರು.

₹15 ಇದ್ದ ಕಿಲಕಿರೆ ₹10, ₹10 ಇದ್ದ ಕೊತ್ತಂಬರಿ ₹5, ನಾಟಿ ಕೊತ್ತಂಬರಿ ₹10, ಪುದೀನಾ ₹10, ₹20 ಇದ್ದ ಸಬಸಿಗೆ ₹10, ₹15 ಇದ್ದ ಮೆಂತೆ ₹20, ದಂಟು ₹10, ಕರಿಬೇವು ₹5, ₹10 ಇದ್ದ ಪಾಲಕ್‌ ₹5ಕ್ಕೆ ಇಳಿದಿದೆ.

ಮಾರು ಮಲ್ಲಿಗೆ ₹200, ಮರಳೆ ₹80, ಕನಕಾಂಬರ ₹100, ಕಾಕಡ ₹80, ಗಣಗಲೆ ₹80, ಸೇವಂತಿ ₹100 ರಂತೆ ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT