ಭಾನುವಾರ, ಮಾರ್ಚ್ 29, 2020
19 °C
ಮೂರು ವರ್ಷದ ಪೋರಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

3 ವರ್ಷದ ಬಾಲಕಿ ಸೃಜನಿಯ ಅಮೂರ್ತ ಚಿತ್ರಕಲಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಆಕೆ ಮೂರು ವರ್ಷದ ಪುಟ್ಟ ಪೋರಿ. ಎಲ್ಲ ಮಕ್ಕಳು ಆಟವಾಡುವುದರಲ್ಲೇ ಸಮಯ ಕಳೆದರೆ, ಆಕೆ ತನ್ನ ಮನಸ್ಸಿನಲ್ಲಿ ಮೂಡಿದ ಕಲ್ಪನೆಗಳಿಗೆ ಕುಂಚದ ಮೂಲಕ ಅಮೂರ್ತ ರೂಪ ನೀಡಿದ್ದಾಳೆ. ನೂರಾರು ಕಲಾಕೃತಿಗಳು ಆಕೆಯ ಕುಂಚದಿಂದ ಅರಳಿವೆ.

ಆ ಪುಟ್ಟ ಪೋರಿ ಎಸ್‌.ವಿ.ಸೃಜನಿ. ಈಕೆ ರಚಿಸಿದ ಕಲಾಕೃತಿಗಳ ‘ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ವನ್ನು ಚಿಗುರು ಚಿತ್ತಾರ ವತಿಯಿಂದ ಇಲ್ಲಿನ ವಿ.ವಿ. ನಗರದ ‌‘ಪುಟ್ಟಹೆಜ್ಜೆ’ ನಿವಾಸದಲ್ಲಿ ಆಯೋಜಿಸಲಾಗಿದೆ.

ನೂರಕ್ಕೂ ಹೆಚ್ಚು ಬಣ್ಣಬಣ್ಣದ ಅಮೂರ್ತ ಚಿತ್ರಗಳು ಸೃಜನಿಯ ಮನಸ್ಸಿನಲ್ಲಿನ ಭಾವನೆಯ ಪ್ರತೀಕವಾಗಿ ಹೊರಹೊಮ್ಮಿವೆ. ಒಂದೊಂದು ರೇಖೆಯು ಒಂದೊಂದು ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಪ್ರತಿಭೆಗೆ ವಯಸ್ಸಿನ ಅಂತರವಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಅಧಿಕಾರಿ ಬಿಂದು ಮಾಧವ ವಡವಿ, ‘ಬಾಲಕಿ ಸೃಜನಿ ಗೀಚಿದ ಗೆರೆಗಳಲ್ಲಿ ನಿಗೂಢತೆ ಅಡಗಿದೆ. ಅರ್ಥವಿಲ್ಲದೆ, ಸುಮ್ಮನೆ ಬರೆದ ಚಿತ್ರಗಳಲ್ಲಿ ಒಂದು ಬಗೆಯ ಪರಿಪೂರ್ಣತೆ ಕಾಣಿಸುತ್ತಿದೆ. ನಾವು ಅದರಲ್ಲಿನ ಅರ್ಥವನ್ನು ಕಂಡು ಕೊಳ್ಳಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಮಗುವಿನ ಕಲ್ಪನೆ ಚಿತ್ರದ ಮೂಲಕ ಮುದ್ದಾಗಿ ವ್ಯಕ್ತವಾಗಿದೆ. ಚಿತ್ರಗಳನ್ನು ಗಮನಿಸಿದರೆ ಹಲವು ಅರ್ಥಗಳು ವ್ಯಕ್ತವಾಗುತ್ತವೆ. ತಂದೆ ಎಂ.ಎಲ್‌.ಸೋಮವರದ ಅವರು ಮಗಳ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದಾರೆ ಎಂದು ಭಾವಿಸಿದ್ದೆ. ನಿಜವಾಗಿಯೂ ಆಕೆಯಲ್ಲಿ ಅಗಾಧ ಪ್ರತಿಭೆ ಇದ್ದು, ಪ್ರೋತ್ಸಾಹಿಸುವ ಮೂಲಕ ನಿಜವಾದ ಅರ್ಥ ಕಂಡು ಕೊಳ್ಳುವಂತೆ ಮಾಡಬೇಕು’ ಎಂದು ಹೇಳಿದರು.

ಲೇಖಕ ಕಗ್ಗರೆ ಪ್ರಕಾಶ್‌ ಮಾತನಾಡಿ, ‌‘ಭೂರಮೆ ವಿಲಾಸ ಕವನ ಸಂಕಲನದ ಮುಖಪುಟಕ್ಕೆ ಸೃಜನಿ ಬಿಡಿಸಿದ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದರಲ್ಲಿನ 35ಕ್ಕೂ ಹೆಚ್ಚು ಕವಿತೆಗಳಿಗೆ ಆಕೆಯ ಚಿತ್ರಗಳನ್ನು ಬಳಸಿಕೊಂಡಿದ್ದು, ಪುಸ್ತಕ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರಗಳು ಕವನಗಳಿಗೆ ತುಂಬಾ ಹೊಂದಿಕೆಯಾಗಿದ್ದು, ಪದ್ಯಗಳನ್ನು ಓದಿ ಚಿತ್ರ ಬರೆದಿರುವ ಅನುಭವ ನೀಡುತ್ತವೆ’ ಎಂದು ಬಣ್ಣಿಸಿದರು.

ಕಲಾವಿದ ಎಲ್‌.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾವಿದ ಬಿ.ಸಿ.ದೇವರಾಜ್‌, ಬಾಲಕಿಯ ತಂದೆ ಎಂ.ಎಲ್‌.ಸೋಮವರದ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)