ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಹಾಳು ಗುಂಡಿಯಾದ ‘ಕೈಲಾಸ– ವೈಕುಂಠ’ ಕೊಳ!

ನಗರದ ಆಕರ್ಷಕ ತಾಣ ಈಗ ಭೂತಬಂಗಲೆಯಂತಿದೆ, ಅಭಿವೃದ್ಧಿ ಕಾಣದ ಸುಂದರ ಉದ್ಯಾನ
Last Updated 23 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ದಶಕಗಳ ಹಿಂದೆ ನಗರದ ಜನರ ಆಕರ್ಷಣೆಯ ತಾಣವಾಗಿದ್ದ ‘ಕೈಲಾಸ–ವೈಕುಂಠ’ ಜೋಡಿಕೊಳಗಳು ಇಂದು ಹಾಳು ಗುಂಡಿಯಂತಾಗಿವೆ. ಪ್ರಕೃತಿಯ ಮಡಿಲಲ್ಲಿ ಅರಳಿ ನಿಂತಿದ್ದ ಈ ಸುಂದರ ತಾಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಭೂತಬಂಗಲೆಯಂತಾಗಿದೆ.

ಗಾಂಧಿನಗರದಿಂದ ಬನ್ನೂರು ರಸ್ತೆವರೆಗೂ ಚಾಚಿಕೊಂಡಿದ್ದ ಈ ತಾಣ ‘ಕೈಲಾಸ ಉದ್ಯಾನ’ ಎಂದೇ ಪ್ರಸಿದ್ಧಿ ಪಡೆದಿತ್ತು. ಅಕ್ಕ–ತಂಗಿಯಂತೆ ಅಕ್ಕಪಕ್ಕದಲ್ಲಿ ಅರಳಿ ನಿಂತಿದ್ದ ಎರಡು ಕೊಳಗಳನ್ನು ಕೈಲಾಸ– ವೈಕುಂಠ ಕೊಳ ಎಂದೇ ಕರೆಯಲಾಗುತ್ತಿತ್ತು. ಎರಡೂ ಕೊಳಗಳನ್ನು ಸೇರಿಸಿ ಗಿಡಮರಗಳ ಭದ್ರ ಕೋಟೆಯನ್ನೇ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಕಾವೇರಿ ಉದ್ಯಾನಕ್ಕಿಂತಲೂ ಸುಂದರವಾಗಿದ್ದ ಈ ಜಾಗವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಹಳ್ಳಿಗಳ ಜನರು ಭೇಟಿ ಕೊಡುತ್ತಿದ್ದರು.

ಮುಂಜಾನೆ–ಸಂಜೆ ಇಲ್ಲಿ ವಿಹಾರ ಮಾಡುವವರಿಗೆ ಕೊರತೆ ಇರಲಿಲ್ಲ. ಕಲ್ಲು ಬೆಂಚುಗಳನ್ನು ಹಾಕಿಸಿ ಸುಂದರ ರೂಪ ನೀಡಲಾಗಿತ್ತು. ಬೇಸಿಗೆ ಅವಧಿಯಲ್ಲಿ ಜನರನ್ನು ನಿಯಂತ್ರಣ ಮಾಡುವುದೇ ಕಷ್ಟವಾಗಿತ್ತು. ದಸರಾ ಸೇರಿದಂತೆ ಹಬ್ಬಹರಿದಿನಗಳಲ್ಲಿ ದೀಪಾಲಂಕಾರವನ್ನೂ ಮಾಡಲಾಗುತ್ತಿತ್ತು. 12 ಎಕರೆ ವಿಶಾಲ ಪ್ರದೇಶದಲ್ಲಿದ್ದ ಈ ತಾಣ ಮಿನಿ ಬೃಂದಾವನದಂತಿತ್ತು. ಪ್ರೇಮ ನಿವೇದನೆಯ ತಾಣವೂ ಆಗಿ ಗುರುತಿಸಿಕೊಂಡಿದ್ದ ಇದು ಒಲಿದ ಹೃದಯಗಳಿಗೆ ಕನಸು ಕಟ್ಟಿಕೊಡುತ್ತಿತ್ತು.

ಈಗ ಹೇಗಿದೆ ಗೊತ್ತಾ?: ಈಗ ಈ ತಾಣ ಜಲಮಂಡಳಿಯ ಸುಪರ್ದಿಯಲ್ಲಿದ್ದು ಭೂತಬಂಗಲೆಯ ರೂಪ ಪಡೆದಿದೆ. ಇಳಿಜಾರಿನ ಪ್ರದೇಶದಲ್ಲಿ ಸುತ್ತಲೂ ಮರಗಿಡಗಳ ನಡುವೆ ಮರೆಯಾಗಿದ್ದು ಜನಮಾನಸದಿಂದಲೂ ಮಾಯವಾಗಿದೆ. ಹಿರಿಯ ನಾಗರಿಕರಷ್ಟೇ ಈ ತಾಣದ ಮಹಿಮೆ ಹೇಳುತ್ತಾರೆ.

ಕೊಳಗಳನ್ನು ಜಲಮಂಡಳಿ ನಿರ್ವಹಣೆ ಮಾಡುತ್ತಿದ್ದು ಕೆಆರ್‌ಎಸ್‌ನಿಂದ ಬರುವ ನೀರನ್ನು ಶುದ್ಧೀಕರಿಸಿ ನಗದ ವಿವಿಧ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸುಂದರ ಉದ್ಯಾನದ ತಾಣ ಈಗ ಕೇವಲ ಪಂಪ್‌ಹೌಸ್‌ ಮಾತ್ರವೇ ಆಗಿದೆ. ಆವರಣದಲ್ಲಿ ಪಾಳು ಬಿದ್ದಿರುವ ಕಟ್ಟಡ ಥೇಟ್‌ ಭೂತಬಂಗಲೆಯಂತೆಯೇ ಕಾಣುತ್ತದೆ. ಆ ಕಟ್ಟಡ ನೋಡಿದರೆ ಅಲ್ಲಿಗೆ ತೆರಳಲು ಭಯವಾಗುತ್ತದೆ. ಸುತ್ತಲೂ ಹಾವು–ಹಲ್ಲಿಗಳಿದ್ದು ಅಲ್ಲಿಗೆ ತೆರಳಲು ಜನರು ಭಯಪಡುತ್ತಾರೆ.

ಕೊಳಗಳ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು ಉದ್ಯಾನ ಆಕರ್ಷಣೆ ಕಳೆದುಕೊಂಡಿದೆ. ಆದರೂ ಜನಾಕರ್ಷಣೆಯ ಕೇಂದ್ರವಾಗಿದ್ದ ತಾಣದ ಕೆಲವು ಸಾಕ್ಷಿಗಳು ಅಲ್ಲಲ್ಲಿ ಕಾಣ ಸಿಗುತ್ತವೆ. ಉದ್ಯಾನಕ್ಕೆ ಪ್ರವೇಶಿಸುವ ದ್ವಾರ ಈಗಲೂ ಇದೆ. ಕೊಳಗಳ ಏರಿಗಳು ಆಕರ್ಷಕವಾಗಿದ್ದು ಉದ್ಯಾನದ ರೂಪದಲ್ಲೇ ಇವೆ. ಕೊಳಗಳ ಸುತ್ತಲೂ ವಾಕಿಂಗ್‌ ಮಾಡಲು ಇದ್ದ ಜಾಗ ಮುಚ್ಚಿ ಹೋಗಿದೆ.

ಕೊಳಗಳ ಸಮೀಪದಲ್ಲೇ ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌ ಮನೆ ಇದೆ. ಸುತ್ತಲೂ ವಿದ್ಯಾವಂತರೇ ವಾಸಿಸುತ್ತಿದ್ದಾರೆ. ಅಧಿಕಾರಿಗಳ ಮನೆಗಳೂ ಅಲ್ಲಿವೆ. ಆದರೂ ಕೊಳಗಳ ಅಭಿವೃದ್ಧಿಗೆ ಯಾರೂ ಧ್ವನಿ ಎತ್ತದಿರುವುದು ವಿಪರ್ಯಾಸ. ನಗರಸಭೆ ಹಾಗೂ ಜಲಮಂಡಳಿ ಅಧಿಕಾರಿಗಳು ಈ ತಾಣವನ್ನು ವ್ಯರ್ಥ ವಸ್ತುಗಳನ್ನು ಸಂಗ್ರಹಿಸುವ ಗೋದಾಮು ಮಾಡಿಕೊಂಡಿರುವುದು ದರ್ಶನವಾಗುತ್ತದೆ.

‘ನನಗೆ ನೆನಪಿರುವಂತೆ ಈ ಜಾಗ ಮಂಡ್ಯದ ಸುಂದರ ಉದ್ಯಾನವಾಗಿತ್ತು. ಆದರೆ ಈಚೆಗೆ ಅಧಿಕಾರಿಗಳು ಆ ಕೊಳಗಳನ್ನು ಮರೆತೇ ಬಿಟ್ಟಿದ್ದಾರೆ. ಜಲಮಂಡಳಿ ಕೂಡ ಕೊಳಗಳನ್ನು ಅಭಿವೃದ್ಧಿಪಡಿಸಿಲ್ಲ. ಈಗಲಾದರೂ ಜಿಲ್ಲಾಡಳಿತ ಈ ತಾಣಕ್ಕೆ ಹೊಸ ರೂಪ ನೀಡಬೇಕು’ ಎಂದು ಗಾಂಧಿನಗರ ನಿವಾಸಿ, ಉಪನ್ಯಾಸಕ ಎಸ್‌.ರಾಜೀವ್‌ ಒತ್ತಾಯಿಸಿದರು.

‘ಕೈಲಾಸ ಉದ್ಯಾನಕ್ಕೆ ಮೊದಲಿನ ರೂಪ ನೀಡಬೇಕು ಎಂದು ನಾನು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆ’ ಎಂದು ನಗರಸಭಾ ಸದಸ್ಯ ಭಾರತೀಶ್‌ ಹೇಳಿದರು.

***

ಅಭಿವೃದ್ಧಿ, ಬೋಟಿಂಗ್‌ ಸೌಲಭ್ಯ: ಡಿ.ಸಿ

‘ನಗರದ ಅಭಿವೃದ್ಧಿಗಾಗಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ₹ 50 ಕೋಟಿ ಬಿಡುಗಡೆಯಾದರೆ ಪಂಪ್‌ಹೌಸ್‌ ಅಭಿವೃದ್ಧಿಗೊಳಿಸಲಾಗುವುದು. ಉದ್ಯಾನ ರೂಪ ನೀಡಿ ಬೋಟಿಂಗ್‌ ಸೌಲಭ್ಯ ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ನಗರಕ್ಕೆ ಮೂಲ ಸೌಲಭ್ಯ ಒದಗಿಸುವ ಕಾಮಗಾರಿಗಳ ಪಟ್ಟಿಯಲ್ಲಿ ಪಂಪ್‌ಹೌಸ್‌ ತಾಣವೂ ಇದೆ. ಅನುದಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಹಣ ಬಿಡುಗಡೆಯಾದ ತಕ್ಷಣ ಉದ್ಯಾನ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು. ಕೊಳಗಳಿಗೆ ಮತ್ತೆ ಸುಂದರ ರೂಪ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT