ಶನಿವಾರ, ಡಿಸೆಂಬರ್ 5, 2020
25 °C
ದ್ವಿತೀಯ ಪಿಯು ಮರು ಮೌಲ್ಯಮಾಪನ; ಹೆಚ್ಚುವರಿಯಾಗಿ ಸೇರ್ಪಡೆಯಾದ 7 ಅಂಕ

ದೃಷ್ಟಿದೋಷವಿರುವ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ದ್ವಿತೀಯ ಪಿಯುಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ಅರಕೇಶ್ವರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಬಿ.ಸಿ.ಸುಜಾತಾ ಜಿಲ್ಲೆಗೆ ಪ್ರಥಮ ಸ್ಥಾನ (ಕಲಾ ವಿಭಾಗ) ಪಡೆದಿದ್ದಾರೆ. ಪಾರ್ಶ್ವ ಅಂಧತ್ವ ಸಮಸ್ಯೆಯಿಂದ ಬಳಲುತ್ತಿರುವ ಈಗೆ ದೃಷ್ಟಿದೋಷದ ನಡುವೆಯೂ ಉನ್ನತ ಸಾಧನೆ ಮಾಡಿರುವುದು ವಿದ್ಯಾರ್ಥಿ ಸಮುದಾಯಕ್ಕೆ ಸ್ಫೂರ್ತಿಯಾಗಿದೆ.

ಜುಲೈ 14ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಸುಜಾತಾ 557 ಅಂಕ ಗಳಿಸಿದ್ದರು. 560 ಅಂಕ ಗಳಿಸಿದ್ದ ಟಿ.ಆರ್‌.ಅಭಿಲಾಷಾ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ಇಂಗ್ಲಿಷ್‌ ವಿಷಯದಲ್ಲಿ ಹೆಚ್ಚು ಅಂಕ ನಿರೀಕ್ಷಿಸಿದ್ದ ಸುಜಾತಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮೊದಲು ಇಂಗ್ಲಿಷ್‌ನಲ್ಲಿ 69 ಅಂಕ ಬಂದಿದ್ದವು. ಮರು ಮೌಲ್ಯಮಾಪನದ ಫಲಿತಾಂಶದಲ್ಲಿ 76 ಅಂಕ ಬಂದಿವೆ.

ಸುಜಾತಾಗೆ ಹೆಚ್ಚುವರಿ 7 ಅಂಕಗಳು ದೊರೆತಿದ್ದು ಒಟ್ಟು ಅಂಕ 564ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್‌ನಲ್ಲಿ ಮುಂದಿದ್ದ ಅವರು ಅಪಾರ ಭರವಸೆಯೊಂದಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಹೆಚ್ಚು ಅಂಕಗಳ ಜೊತೆಗೆ ಅವರ ಆತ್ಮವಿಶ್ವಾಸವೂ ಗೆದ್ದಿದೆ. ಸರ್ಕಾರಿ ಕಾಲೇಜಿನಲ್ಲಿ ಓದಿ ಉನ್ನತ ಸ್ಥಾನ ಗಳಿಸಿರುವ ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸುಜಾತಾ ಬೇವುಕಲ್ಲು ಕೊಪ್ಪಲು ಗ್ರಾಮದ ಚಂದ್ರಶೇಖರ್‌–ಲಕ್ಷ್ಮಮ್ಮ ದಂಪತಿಯ ಪುತ್ರಿ. ಚಂದ್ರಶೇಖರ್‌ ಸಂಪೂರ್ಣ ಅಂಧರಾಗಿರುವ ಕಾರಣ ಸುಜಾತಾ ಭಾಗಶಃ ಅಂಧತ್ವ ಸಮಸ್ಯೆ ಅನುಭವಿಸುತ್ತಿದ್ದಾರೆ. ಕನ್ನಡಕ ಧರಿಸಿ ಪುಸ್ತಕಗಳನ್ನು ಕಣ್ಣಿನ ಹತ್ತಿರಕ್ಕೆ ತಂದುಕೊಂಡು ಅಭ್ಯಾಸ ಮಾಡಬೇಕಾದ ಅನಿವಾರ್ಯತೆ ಇದೆ. ಕೊರತೆ ಹಾಗೂ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕಾರ ಮಾಡಿರುವ ಸುಜಾತಾ 564 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ದಾಖಲು ಮಾಡಿದ್ದಾರೆ.

ಸುಜಾತಾ ಅಣ್ಣ ಸುಜಯ್‌ ಕೂಡ ದೃಷ್ಟಿ ದೋಷದ ಸಮಸ್ಯೆ ಅನುಭವಿಸುತ್ತಿದ್ದು ಮೈಸೂರಿನ ಜೆಎಸ್‌ಎಸ್‌ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ಡಿಪ್ಲೊಮಾ ಓದುತ್ತಿದ್ದಾರೆ. ಅಂಧತ್ವದಿಂದಾಗಿ ತಂದೆ ಮನೆಯಲ್ಲೇ ಇರುತ್ತಾರೆ. ತಾಯಿ ಲಕ್ಷ್ಮಮ್ಮ ತರಕಾರಿ ವ್ಯಾಪಾರ ಮಾಡಿ ಮಕ್ಕಳ ಶೈಕ್ಷಣಿಕ ಜೀವನ ಕಟ್ಟಿಕೊಟ್ಟಿದ್ದಾರೆ.

‘ಇಂಗ್ಲಿಷ್‌ನಲ್ಲಿ ಕಡಿಮೆ ಅಂಕ ಬಂದ ಕಾರಣ ಬಹಳ ನೋವಾಗಿತ್ತು. ವಿಶ್ವಾಸದಿಂದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೆ. 7 ಅಂಕ ಬಂದಿರುವುದು ಖುಷಿ ತಂದಿದೆ’ ಎಂದು ಸುಜಾತಾ ಹೇಳಿದರು.

‘ದಪ್ಪ ಗಾಜಿನ ಕನ್ನಡಕ ಧರಿಸುವ ಸುಜಾತಾ ಕಷ್ಟುಪಟ್ಟು ಓದುತ್ತಿದ್ದಳು. ನೆನಪಿನ ಶಕ್ತಿ ತುಂಬಾ ಚೆನ್ನಾಗಿತ್ತು. ಒಂದು ದಿನವೂ ಕಾಲೇಜಿಗೆ ತಪ್ಪಿಸುತ್ತಿರಲಿಲ್ಲ. ಅವಳ ಸಾಧನೆಯಿಂದ ಸಂತಸವಾಗಿದೆ’ ಎಂದು ಇಂಗ್ಲಿಷ್‌ ಉಪನ್ಯಾಸಕ ಎನ್‌.ಎಲ್‌.ರವಿಶಂಕರ್‌ ಹೇಳಿದರು. ಪ್ರಾಚಾರ್ಯ ಜೆ.ಎಸ್‌.ಗೌರಾಚಾರಿ ಹಾಗೂ ಸಿಬ್ಬಂದಿ ಅಭಿನಂದಿಸಿದರು.

********

ಐಎಎಸ್‌ ಕನಸು; ಬೇಕಿದೆ ನೆರವು

ಮೈಸೂರಿನ ಮರಿಮಲ್ಲಪ್ಪ ಮಹಿಳಾ ಕಾಲೇಜಿನಲ್ಲಿ ಬಿ.ಎ ಪದವಿಗೆ ದಾಖಲಾಗಿರುವ ಬಿ.ಸಿ.ಸುಜಾತಾಗೆ ಐಎಎಸ್‌ ಅಧಿಕಾರಿಯಾಗುವ ಕನಸಿದೆ. ಉಪನ್ಯಾಸಕರ ಮಾರ್ಗದರ್ಶನದಿಂದ ಈಗಿನಿಂದಲೇ ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ.

ಮೈಸೂರಿನಲ್ಲಿ ಉಳಿದುಕೊಳ್ಳಲು ಅವರು ಹಲವು ಹಾಸ್ಟೆಲ್‌ಗಳಿಗೆ ಅರ್ಜಿ ಹಾಕಿದ್ದಾರೆ. ಉತ್ತಮ ಸೌಲಭ್ಯವುಳ್ಳ ಹಾಸ್ಟೆಲ್‌ ಸಿಕ್ಕಿದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಅದಕ್ಕಾಗಿ ಸುಜಾತಾ ತಂದೆ–ತಾಯಿ ನೆರವಿಗಾಗಿ ಮೊರೆ ಇಟ್ಟಿದ್ದಾರೆ. ನೆರವು ನೀಡಲು ಇಚ್ಛಿಸುವವರು ಮೊ; 9019795804 ಸಂಖ್ಯೆ ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು