ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಗಿರವಿ ಅಂಗಡಿ ಮಾಲೀಕರ ವಿಚಾರಣೆ

Last Updated 15 ಅಕ್ಟೋಬರ್ 2020, 13:53 IST
ಅಕ್ಷರ ಗಾತ್ರ

ಮಂಡ್ಯ: ಹೆಚ್ಚು ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಸಂಗ್ರಹಿಸಿ ಮೋಸ ಮಾಡಿರುವ ಪ್ರಕರಣದ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಆರೋಪಿ ಸೋಮಶೇಖರ್‌ ಗಿರವಿ ಅಂಗಡಿಯಲ್ಲಿ ಚಿನ್ನ ಅಡಮಾನ ಮಾಡಿದ್ದಾನೆ ಎಂಬ ಶಂಕೆಯ ಮೇಲೆ ಗಿರವಿ ಅಂಗಡಿಗಳ ಮಾಲೀಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಕೆಲಸ ಮಾಡುತ್ತಿದ್ದ ಖಾಸಗಿ ಫೈನಾನ್ಸ್‌ಗಳಿಗೆ ಆರೋಪಿ ಜೊತೆ ತೆರಳಿ ದಾಖಲಾತಿ ಪರಿಶೀಲನೆ ನಡೆಸಲಾಗಿದೆ.

36 ಮಹಿಳೆಯರಿಂದ ಚಿನ್ನ ಪಡೆದಿರುವುದಾಗಿ ಆರೋಪಿ ಮಾಹಿತಿ ನೀಡಿದ್ದು ಎಲ್ಲರಿಗೂ ನೋಟಿಸ್‌ ಜಾರಿ ಮಾಡಿ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಹಣ ಕಳೆದುಕೊಂಡ ಬಹುತೇಕ ಮಂದಿ ವಿದ್ಯಾವಂತರು ಹಾಗೂ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದವರೇ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನ, ಹಣ ಕಳೆದುಕೊಂಡು ವಂಚನೆಗೆ ಒಳಗಾದ ಮಹಿಳೆಯರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಹಾಗೂ ಪೂರ್ವ ಪೊಲೀಸ್‌ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ಬಹುತೇಕ ದೂರುಗಳಲ್ಲಿ ಸೋಮಶೇಖರ್‌ ಸೇರಿದಂತೆ ಪೂಜಾ ಎಂಬ ಮಹಿಳೆಯ ವಿರುದ್ಧವೂ ದೂರು ದಾಖಲಿಸಿದ್ದಾರೆ.

‘ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ ಆರೋಪಿ ಚಿನ್ನ, ಹಣ ಪಡೆದು ಸ್ವಂತ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದ. ಒಬ್ಬರಿಂದ ಹಣ ಪಡೆದು ಮತ್ತೊಬ್ಬರಿಗೆ ನೀಡುತ್ತಿದ್ದ. ಪೂಜಾ ಎನ್ನುವ ಮಹಿಳೆ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.4 ತಂಡ ರಚನೆ ಮಾಡಲಾಗಿದ್ದು ಹಣ ಪಡೆದವರು, ಕೊಟ್ಟವರು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

***

ಆರೋಪಿ ಬಿಜೆಪಿ ನಾಯಕಿಯ ಪುತ್ರ

ಬಂಧಿತನಾಗಿರುವ ಆರೋಪಿ ಸೋಮಶೇಖರ್‌ ಬಿಜೆಪಿ ನಾಯಕಿ ತಾಯಮ್ಮ ಅವರ ಪುತ್ರ ಎಂಬ ವಿಚಾರ ಬೆಳಕಿಗೆ ಬಂದಿದೆ. 2008ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ತಾಯಮ್ಮ ನಗರಸಭೆ ನಾಮ ನಿರ್ದೇಶಿತ ಸದಸ್ಯೆಯಾಗಿ ಆಯ್ಕೆಯಾಗಿದ್ದರು.

‘ನನ್ನ ಮಗ ಮೋಸ ಮಾಡಿದ್ದಾನೆ ಎಂಬ ವಿಚಾರ ಗೊತ್ತಾದ ತಕ್ಷಣ ನಾನು ದುಖಃದಲ್ಲಿ ಮುಳುಗಿದ್ದೇನೆ. ಅವನೇ ಮೋಸ ಮಾಡಿದ್ದಾನೋ, ಅವನ ಹಿಂದೆ ಬೇರೆಯವರು ಇದ್ದಾರೋ ಎಂಬ ಯಾವ ವಿಚಾರವೂ ನನಗೆ ಗೊತ್ತಿಲ್ಲ’ ಎಂದು ತಾಯಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT