ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗೆ ಅಡ್ಡಿಪಡಿಸಿದ ರೈತರು

ದೇಶಹಳ್ಳಿ ಕೆರೆಗೆ ನೀರು ಪೂರೈಸಲು ವಿರೋಧ
Last Updated 23 ಆಗಸ್ಟ್ 2019, 20:32 IST
ಅಕ್ಷರ ಗಾತ್ರ

ಮದ್ದೂರು: ಬಹು ಗ್ರಾಮದ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಮದ್ದೂರಮ್ಮನ ಕೆರೆ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಸದಸ್ಯರು ದೇಶಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿನ ಯೋಜನೆಗೆ ತೆಗೆದಿದ್ದ ಸುಮಾರು 1 ಕಿ.ಮೀ. ದೂರದ ಗುಂಡಿಯನ್ನು ಜೆಸಿಬಿ ಯಂತ್ರದ ಮೂಲಕ ಮುಚ್ಚಿಸಿ, ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್ ಮಾತನಾಡಿ, ‘ಮದ್ದೂರಮ್ಮನ ಕೆರೆಯಿಂದ ದೇಶಹಳ್ಳಿ ಕೆರೆಗೆ ನೀರು ಪೂರೈಸುವ ಕಾಮಗಾರಿ ನಡೆಯುತ್ತಿದೆ. ಆದರೆ, ಮದ್ದೂರಮ್ಮನ ಕೆರೆಯನ್ನು ನಂಬಿಕೊಂಡಿರುವ 14 ಗ್ರಾಮಗಳ ರೈತರಿಗೆ ನೀರು ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ಬೇಸಿಗೆಯಲ್ಲಿ ನೀರಿಗೆ ತತ್ವಾರ ಎದುರಾಗುತ್ತದೆ. ಈ ಕೆರೆಯ ನೀರಿನಿಂದ ಒಂದು ಬೆಳೆ ಮಾತ್ರ ಬೆಳೆಯಲಾಗುತ್ತಿದೆ. ಕುಡಿಯುವ ನೀರಿನ ಯೋಜನೆಗಾಗಿ ನೀರನ್ನು ತೆಗೆದುಕೊಂಡು ಹೋದರೆ ಒಂದು ಬೆಳೆಗೂ ನೀರು ಪೂರೈಸಲು ಆಗುವುದಿಲ್ಲ’ ಎಂದರು.

ನವಿಲೆ ಏತನೀರಾವರಿ ಅಥವಾ ಶಿಂಷಾ ನದಿಯಲ್ಲಿ (ಹರಿಯುವ ನೀರಿನಲ್ಲಿ) ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ಜನರಿಗೆ ಕುಡಿಯುವ ನೀರು ಪೂರೈಸಬಹುದು. ಅದನ್ನು ಬಿಟ್ಟು ಮದ್ದೂರಮ್ಮನ ಕೆರೆಯಿಂದ ನೀರು ಪೂರೈಸುವುದು ಅವೈಜ್ಞಾನಿಕ ಕ್ರಮ. ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚನ್ನಸಂದ್ರ ಲಕ್ಷ್ಮಣ್, ಬೋರಣ್ಣ, ಮ.ನ.ಪ್ರಸನ್ನಕುಮಾರ್, ಪುರಷೋತ್ತಮ, ಮನೀಶ್, ಸುಧೀರ್, ಜಯರಾಮು, ವಸಂತ, ಅನಿಲ್ ಕುಮಾರ್, ರಾಮಣ್ಣ, ರಾಜು, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT