ಬುಧವಾರ, ನವೆಂಬರ್ 20, 2019
21 °C
ಬೇಬಿಬೆಟ್ಟ ಉಳಿಸಿ ಹೋರಾಟ ಸದಸ್ಯರ ಮೇಲೆ ಗಣಿಮಾಲೀಕರ ಹಲ್ಲೆ

ದೂರು ದಾಖಲಿಸಿಕೊಳ್ಳದ ಸಿಪಿಐ ವಿರುದ್ಧ ಪ್ರತಿಭಟನೆ

Published:
Updated:
Prajavani

ಪಾಂಡವಪುರ: ಬೇಬಿಬೆಟ್ಟದಲ್ಲಿ ನಡೆಸುತ್ತಿರುವ ಗಣಿಗಾರಿಕೆ ಮತ್ತು ಕ್ರಷರ್‌ ಚಟುವಟಿಕೆಗಳ ವಿಡಿಯೊ ಮಾಡಲು ಹೋದ ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಿದರೆ, ದಾಖಲಿಸಿಕೊಳ್ಳಲು ಸಿಪಿಐ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ನಡೆಯಿತು.

ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರಾದ ಬೇಬಿ ಗ್ರಾಮದ ಲೋಕೇಶ್‌ಮೂರ್ತಿ, ಬಿ.ಎಂ.ಕುಮಾರ್, ಸಿದ್ದರಾಜು, ಫಾಲಾಕ್ಷ ಪಟೇಲ್‌, ನಿಂಗಪ್ಪ, ರಾಜು ಸೇರಿದಂತೆ ಇನ್ನಿತರ ಮೇಲೆ ಗಣಿಮಾಲೀಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಂಡು ರಕ್ಷಣೆ ಒದಗಿಸಿ ಎಂದು ಕೇಳಿದರೂ ದೂರು ಕೇಳುವವರು ಇಲ್ಲದಂತಾಗಿದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಗಣಿಗಾರಿಕೆ, ಕ್ರಷರ್ ನಡೆಯುತ್ತಿರುವ ಬಗ್ಗೆ ಏನಾದರೂ ಸಾಕ್ಷಿಗಳನ್ನು ಒದಗಿಸಿದರೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತವು ಹೋರಾಟ ಸಮಿತಿ ಸದಸ್ಯರಿಗೆ ತಿಳಿಸಿತ್ತು. ಈ ಪ್ರಕಾರ ಹೋರಾಟ ಸಮಿತಿಯ ಸದಸ್ಯರು ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಕ್ರಷರ್‌ಗಳನ್ನು ಮೊಬೈಲ್ ವಿಡಿಯೊ ತೆಗೆಯಲು ಮುಂದಾದಾಗ ಗಣಿಮಾಲೀಕರು ಬೆದರಿಕೆ ಹಾಕಿ, ಮೊಬೈಲ್ ಕಿತ್ತು ಕಳುಹಿಸಿದ್ದಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಿಪಿಐ ರವೀಂದ್ರ ಮಾತನಾಡಿ, ‘ನಾನು ದೂರ ಸ್ವೀಕರಿಸುವುದಿಲ್ಲ ಎಂದು ಹೇಳಿಲ್ಲ. ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಸದಸ್ಯರು ನೀಡಿರುವ ದೂರಿನಲ್ಲಿ, ‘ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರೇ ನಮಗೆ ಗಣಿಗಾರಿಕೆ, ಕ್ರಷರ್‌ನ ವಿಡಿಯೊ ಮಾಡಿ ಎಂದು ಹೇಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಅಧಿಕಾರಿಗಳ ಹೆಸರು ಉಲ್ಲೇಖವಾಗಿರುವುದರಿಂದ ಮೊದಲು ಎ.ಸಿ, ತಹಶೀಲ್ದಾರ್ ಅವರ ಗಮನಕ್ಕೆ ತನ್ನಿ ಎಂದು ನಾನು ಹೇಳಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಆದೇಶಕ್ಕೆ ಸಿ. ಫಾರಂ ಹೊಂದಿರುವ ಗಣಿಮಾಲೀಕರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂದು ಸದಸ್ಯರಿಗೆ ವಿವರಿಸಿದ್ದೆ’ ಎಂದರು.

ಹೋರಾಟ ಸಮಿತಿ ಸದಸ್ಯರ ದೂರನ್ನು ಈಗಲೇ ಸ್ವೀಕರಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎನ್.ಮಂಜುನಾಥ್, ರೈತ ಸಂಘದ ಮುಖಂಡರಾದ ಅಮೃತಿ ರಾಜಶೇಖರ್, ದಯಾನಂದ್‌, ಮಂಜುನಾಥ್, ಧನಂಜಯ, ಸಂದೇಶ್, ಬೇಬಿಬೆಟ್ಟ ಹೋರಾಟ ಸಮಿತಿಯ ಸಿದ್ದರಾಜು, ಲೋಕೇಶ್‌ ಮೂರ್ತಿ, ಕುಮಾರ್‌ ಹಾಗೂ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)