ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಬಳಿ ಸರ್‌ ಎಂ.ವಿ ಪ್ರತಿಮೆ ಸ್ಥಾಪನೆ ವಿರೋಧಿಸಿ ಧರಣಿ

ಜಲಾಶಯದ ಮುಖ್ಯ ದ್ವಾರದ ಎದುರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ
Last Updated 9 ಜುಲೈ 2020, 9:24 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಗೆ ಸರಿ ಸಮನಾಗಿ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸಬಾರದು ಎಂದು ಆಗ್ರಹಿಸಿ ‘ನಾಲ್ವಡಿ ಏಕ ಪ್ರತಿಮೆ ಹೋರಾಟ ಸಮಿತಿ– ಮಂಡ್ಯ ಮತ್ತು ಮೈಸೂರು’ ಸದಸ್ಯರು ಬುಧವಾರ ಕೆಆಎರ್‌ಎಸ್‌ ಬಳಿ ಬುಧವಾರ ಧರಣಿ ನಡೆಸಿದರು.

ಕೆಆರ್‌ಎಸ್‌ ಜಲಾಶಯದ ಮುಖ್ಯ ದ್ವಾರದ ಎದುರು ಮೆಟ್ಟಿಲುಗಳ ಮೇಲೆ ಕುಳಿತು ಒಂದು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದರು. ‘ಬೇಡ ಬೇಡ ವಿಶ್ವೇಶ್ವರಯ್ಯ ಪ್ರತಿಮೆ ಬೇಡ....’, ಇತರ ಘೋಷಣೆಗಳನ್ನು ಕೂಗಿದರು. ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ವಿರೋಧಿಸಿ ವಿವಿಧ ಫಲಕಗಳನ್ನು ಪ್ರದರ್ಶಿಸಿದರು.

ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್‌ ಮಾತನಾಡಿ, ‘ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್‌ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಕೇವಲ 11 ತಿಂಗಳು 15 ದಿನ ಮಾತ್ರ ಮುಖ್ಯ ಎಂಜಿನಿಯರ್‌ ಆಗಿದ್ದರು. ಆವರು ಇಲ್ಲಿಗೆ ಬರುವ ಮುನ್ನವೇ ಜಲಾಶಯ ನಿರ್ಮಾಣದ ಯೋಜನೆ ಸಿದ್ಧವಾಗಿತ್ತು. ನಂತರದಲ್ಲಿ ಕೂಡ 7 ಮಂದಿ ಮುಖ್ಯ ಎಂಜಿನಿಯರ್‌ಗಳಾಗಿ ಸೇವೆ ಸಲ್ಲಿಸಿದ್ದಾರೆ. ಆದರೂ ವಿಶ್ವೇಶ್ವರಯ್ಯ ಅವರೇ ಕೆಆರ್‌ಎಸ್‌ ಜಲಾಶಯದ ನಿರ್ಮಾತೃ ಎಂದು ಜನಮಾನಸದಲ್ಲಿ ತಪ್ಪು ಅಭಿಪ್ರಾಯ ಬಿತ್ತಲಾಗಿದೆ. ಇದರಿಂದಾಗಿಯೇ ಹಲವು ಕೋಟಿ ರೂಪಾಯಿ ಖರ್ಚು ಮಾಡಿ ಅವರ ಪ್ರತಿಮೆಯನ್ನು ಕೆಆರ್‌ಎಸ್‌ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಪ್ರತಿಮೆ ಸ್ಥಾಪನೆ ವಿಷಯವನ್ನು ಸರ್ಕಾರ ಮರು ಪರಿಶೀಲನೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ರಾಜಮಾತೆ ಪ್ರತಿಮೆ ಇರಲಿ: ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್‌ಗೌಡ ಮಾತನಾಡಿ, ‘ವಿಶ್ವೇಶ್ವರಯ್ಯ ಅವರಂತೆ ಮಿರ್ಜಾ ಇಸ್ಮಾಯಿಲ್‌, ಕಾಂತರಾಜ ಅರಸ್‌ ಇತರರು ಕೂಡ ದಿವಾನರಾಗಿ, ಎಂಜಿನಿಯರ್‌ ಆಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮತ್ತು ಅವರ ತಾಯಿ ರಾಜಮಾತೆ ವಾಣಿ ವಿಲಾಸ ಸನ್ನಿಧಾನ ಅವರು ತಮ್ಮ ಸ್ವಂತ ವಜ್ರಾಭರಣಗಳನ್ನು ಮಾರಾಟ ಮಾಡಿ ಜಲಾಶಯ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಅವರ ತ್ಯಾಗ ದೊಡ್ಡದಿದ್ದು, ನಾಲ್ವಡಿಯವರ ಪ್ರತಿಮೆಯ ಜತೆಗೆ ಅವರ ತಾಯಿಯ ಪ್ರತಿಮೆ ಸ್ಥಾಪಿಸಲಿ. ಬೇಕಿದ್ದರೆ ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಬೇರೆಡೆ ಸ್ಥಾಪನೆ ಮಾಡಲಿ’ ಎಂದರು.

ಮೀಸಲಾತಿ ವಿರೋಧಿ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹಿಂದುಳಿದ ಜನರಿಗಾಗಿ ಮೀಸಲಾತಿ ಜಾರಿಗೆ ತರಲು ನಿರ್ಣಯಿಸಿದಾಗ ಅಂದಿನ ದಿವಾನ ವಿಶ್ವೇಶ್ವರಯ್ಯ ಅವರು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಿಲ್ಲರ್‌ ಆಯೋಗ ರಚನೆಯನ್ನು ವಿರೋಧಿಸಿ ದಿವಾನ್‌ ಹುದ್ದೆಗೆ ರಾಜೀನಾಮೆ ನೀಡಿ ಶೋಷಿತರ ಬಗ್ಗೆ ತಮಗಿರುವ ಅಸಹನೆ ತೋರಿದ್ದಾರೆ. ಅಂತಹ ಸಮಸಮಾಜ ವಿರೋಧಿ ಮನಸ್ಥಿತಿಯ ವ್ಯಕ್ತಿಯ ಪ್ರತಿಮೆಯನ್ನು ರಾಜರ್ಷಿ ನಾಲ್ವಡಿಯವರ ಪ್ರತಿಮೆಗೆ ಸಮನಾಗಿ ಸ್ಥಾಪಿಸಬಾರದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಬಿ. ಶ್ರೀನಿವಾಸ್‌ ಹೇಳಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ, ನಾಲ್ವಡಿ ಏಕ ಪ್ರತಿಮೆ ಹೋರಾಟ ಸಮಿತಿ ಸಂಚಾಲಕ ಅರವಿಂದ್‌ ಶರ್ಮಾ ಮಾತನಾಡಿದರು.

ನಾಲ್ವಡಿ ಏಕ ಪ್ರತಿಮೆ ಹೋರಾಟ ಸಂಚಾಲನಾ ಸಮಿತಿಯ ನಂದೀಶ್‌ ಅರಸ್‌, ಎಚ್‌.ಎಲ್‌. ಯಮುನಾ, ಸೀತಾರಾಂ, ಮಾಜಿ ಮೇಯರ್‌ ಪುರುಷೋತ್ತಮ, ಹಿರಿಯ ವಕೀಲ ಸಿ. ಪುಟ್ಟಸ್ವಾಮಿ, ಬೆಳಗೊಳ ವಿಷಕಂಠೇಗೌಡ, ಡಾ.ಶಿವಕುಮಾರ್‌ ಸೋಸಲೆ ಸಿದ್ದರಾಜು, ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಕೆ.ಟಿ. ರಂಗಯ್ಯ, ಬೆಳಗೊಳ ಬಸವಣ್ಣ, ಮಜ್ಜಿಗೆಪುರ ಶಿವರಾಂ ಇತರರು ಪಾಲ್ಗೊಂಡಿದ್ದರು.

ಎಚ್ಚರಿಕೆ: ಕೆಆರ್‌ಎಸ್‌ ಜಲಾಶಯದ ಬಳಿ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು. ಪ್ರತಿಮೆ ಸ್ಥಾಪನೆ ಕುರಿತ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ತಜ್ಞರ ವರದಿ ಪಡೆದು ಜನರಿಗೆ ವಾಸ್ತವ ಸಂಗತಿಯನ್ನು ತಿಳಿಸಿಕೊಡಬೇಕು. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ಪ್ರಕ್ರಿಯೆ ಮುಂದುವರೆಸಿದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT