ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ ಪ್ರವೇಶಕ್ಕೆ ನಿರ್ಬಂಧ: ಭಕ್ತರ ಪರದಾಟ

Last Updated 25 ಜುಲೈ 2020, 14:38 IST
ಅಕ್ಷರ ಗಾತ್ರ

ಮೇಲುಕೋಟೆ: ಕೋವಿಡ್ ನಿಯಂತ್ರಣಕ್ಕಾಗಿ ಶ್ರಾವಣ ಶನಿವಾರ ಮತ್ತು ಭಾನುವಾರ ಮೇಲುಕೋಟೆ ದೇವಾಲಯಗಳಿಗೆ ಭಕ್ತರ ಪ್ರವೇಶ ನಿರ್ಬಂಧದ ಆದೇಶ ಪ್ರಚಾರದ ಕೊರತೆ ಭಕ್ತರ ಪರದಾಟಕ್ಕೆ ಕಾರಣವಾಯಿತು.

ಅತಿ ಹೆಚ್ಚು ಭಕ್ತರು ಬರುವ ಶ್ರಾವಣ ಮಾಸದ ಶನಿ ಮತ್ತು ಭಾನುವಾರಗಳಂದು ದೇವಾಲಯಗಳಿಗೆ ಭಕ್ತರ ಪ್ರವೇಶ ನಿಷೇಧ ಮಾಡಿ ನಾಲ್ಕೈದು ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಆದರೆ, ದೇವಾಲಯದ ಅಧಿಕಾರಿ ನಂಜೇಗೌಡ ಆದೇಶದ ಸಂಬಂಧ ಫ್ಲೆಕ್ಸ್ ಕೂಡಾ ಹಾಕದೆ, ವ್ಯಾಪಕ ಪ್ರಚಾರ ಮಾಡದ ಕಾರಣ ಭಕ್ತರಿಗೆ ಆದೇಶದ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ರಾಜ್ಯದ ವಿವಿಧೆಡೆಗಳಿಂದ ಶನಿವಾರ ಸಹಸ್ರಾರು ಭಕ್ತರು ವಾಹನಗಳ ಮೂಲಕ ಮೇಲುಕೋಟೆಗೆ ಬಂದಿದ್ದರು. ಐ.ಬಿಯವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು ಭಕ್ತರು ದೇಗುಲದ ಅಧಿಕಾರಿಯನ್ನು ಶಪಿಸುತ್ತಾ ವಾಪಸ್ಸಾದರು.

ಭಕ್ತರ ದಟ್ಟನೆಯ ಬಗ್ಗೆ ಮಾಹಿತಿ ಪಡೆದ ಮೇಲುಕೋಟೆ ಎಸ್.ಐ ಚಿದಾನಂದ್ ಮತ್ತು ಸಿಬ್ಬಂದಿ ಬೆಳಿಗ್ಗೆ 9 ಗಂಟೆಯಿಂದ ಪಟ್ಟಣದ ಹೊರಭಾಗದಲ್ಲೇ ಭಕ್ತರ ವಾಹನಗಳನ್ನು ತಡೆದು ವಾಪಸ್‌ ಕಳುಹಿಸಿದರು.

ಮೇಲುಕೋಟೆಯ ಪ್ರವೇಶ ನಿರ್ಬಂಧವಿರುವ ಕಾರಣ ದೇವಾಲಯ, ಯೋಗಾನರಸಿಂಹಸ್ವಾಮಿ ಬೆಟ್ಟ, ಕಲ್ಯಾಣಿಯ ಬಳಿ ಭಕ್ತರು ಬರಲು ಸಾಧ್ಯವಾಗಲಿಲ್ಲ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ಮಾತ್ರ ಬೀಗ ಹಾಕಲಾಗಿತ್ತು.

ಜಿಲ್ಲಾಧಿಕಾರಿ ಆದೇಶದ ಬಗ್ಗೆ ವ್ಯಾಪಕ ಪ್ರಚಾರ ಮಾಡಿದ್ದರೆ ನಾವು ಮೇಲುಕೋಟೆಗೆ ಬರುತ್ತಿರಲಿಲ್ಲ, ಸರ್ಕಾರ ಲಾಕ್‌ಡೌನ್ ಹಿಂಪಡೆದ ಕಾರಣ ಬಂದಿದ್ದೇವೆ ಅವರ ತಪ್ಪಿನಿಂದ ನಾವು ತೊಂದರೆ ಅನುಭವಿಸಬೇಕಾಗಿದೆ ಎಂದು ಹಲವು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ಶೇರ್ತಿಸೇವೆ

ಚೆಲುವನಾರಾಯಣಸ್ವಾಮಿಗೆ ಅಮ್ಮನವರ ವರ್ಧಂತಿ ಪ್ರಯುಕ್ತ ಶನಿವಾರ ಶೇರ್ತಿಸೇವೆ ನೆರವೇರಿತು. ಶ್ರೀದೇವಿ, ಭೂದೇವಿ ಕಲ್ಯಾಣ ನಾಯಕಿ, ಭಗವದ್ರಾಮಾನುಜರೊಂದಿಗೆ ಯದುಗಿರಿನಾಯಕಿ ಅಮ್ಮನವರ ಸನ್ನಿಧಿಯಲ್ಲಿ ವಿರಾಜಮಾನನಾದ ಚೆಲುವನಾರಾಯಣನಿಗೆ ಪಾರಾಯಣ, ಮಂಗಳವಾದ್ಯದೊಂದಿಗೆ ವಿಶೇಷಪೂಜಾ ಕೈಂಕರ್ಯ ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT