ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಪುರ ಧ್ವಜಸತ್ಯಾಗ್ರಹದ ಸ್ಮರಣೆ: ಸಚಿವ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ದಿನವಿಡೀ ವಿವಿಧ ಕಾರ್ಯಕ್ರಮ ಆಯೋಜನೆ
Last Updated 6 ಮಾರ್ಚ್ 2021, 16:42 IST
ಅಕ್ಷರ ಗಾತ್ರ

ಮಂಡ್ಯ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಾರ್ಚ್ 12 ರಂದು ಮದ್ದೂರಿನ, ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಧ್ವಜ ಸತ್ಯಾಗ್ರಹವನ್ನು ಸ್ಮರಣೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ದೇಶದ ಆಯ್ದ 75 ಸ್ಥಳ, ನಗರಗಳಲ್ಲಿ ಅಮೃತ ಮಹೋತ್ಸವ ನಡೆಯಲಿದ್ದು, ಅದರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸ್ಥಳವೂ ಒಂದು’ ಎಂದರು.

‘ಗುಜರಾತ್ ರಾಜ್ಯದ ಸಬರಮತಿ ಆಶ್ರಮದಲ್ಲಿ ಮಾರ್ಚ್ 12ರಂದು ಪ್ರಧಾನಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮವು ವರ್ಚುವಲ್ ವೇದಿಕೆಯ ಮೂಲಕ ದೇಶದ 75 ಸ್ಥಳ, ನಗರಗಳಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ’ ಎಂದರು.

‘75 ವಾರ 75 ಕಾರ್ಯಕ್ರಮ ನಡೆಯಲಿದೆ. ಸಾಂಕೇತಿಕವಾಗಿ 75 ಜನರು ಪಾಲ್ಗೊಳ್ಳಲಿದ್ದಾರೆ. 75 ಸಸಿ ನೆಡಲಾಗುವುದು. ಸೈಕಲ್ ಜಾಥಾ ಆಯೋಜನೆ ಮಾಡಿದ್ದು, ಮಕ್ಕಳಿಂದ ದೇಶಭಕ್ತಿಯನ್ನು ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾತನಾಡಿ, ಶಿವಪುರ ಧ್ವಜ ಸತ್ಯಾಗ್ರಹ ಸಂಬಂಧ ವಸ್ತು ಪ್ರದರ್ಶನ, ಸ್ತಬ್ಧಚಿತ್ರ ಪ್ರದರ್ಶನ ಮಾಡಲಾಗುವುದು. ಸ್ವಾತಂತ್ರ್ಯ ಕುರಿತಂತೆ ನಾಟಕ, ನೃತ್ಯ, ಆಶುಭಾಷಣ ಸ್ಪರ್ಧೆ, ಚಿತ್ರಕಲೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳ ಆಯೋಜನೆ ಮೂಲಕ ಸ್ವಾತಂತ್ರ್ಯ ಹೋರಾಟದ ಸಂದೇಶಗಳನ್ನು ಸಾರಲಾಗುವುದು. ಸ್ವಾತಂತ್ರ್ಯ ಹೋರಾಟಗಾರರು, ಹಾಗೂ ವಿವಿಧ ಕ್ಷೇತ್ರದ ಸಾಕರನ್ನು ಸನ್ಮಾನಿಸಲಾಗುವುದು’ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ, ಜಿ.ಪಂ ಸಿ.ಇ.ಒ ಜುಲ್ಪಿಕರ್ ಉಲ್ಲಾ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಮದ್ದೂರು ತಹಶೀಲ್ದಾರ್ ವಿಜಯ್ ಕುಮಾರ್, ಎಎಸ್‌ಪಿ ಧನಂಜಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್ ಇದ್ದರು.

ಪಾಳು ಕಟ್ಟಡದಲ್ಲಿ ಉತ್ಸವ ಏಕೆ?

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಶಿವಪುರ ಧ್ವಜಸತ್ಯಾಗ್ರಹ ಸ್ಮಾರಕ ಸೌಧ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಕಟ್ಟಡವನ್ನು ದುರಸ್ತಿ ಮಾಡದೆ ಅಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ನಿರ್ವಹಣೆ ಕೊರತೆಯಿಂದಾಗಿ ಮುಖ್ಯ ಭವನ, ಅನೆಕ್ಸ್‌ ಕಟ್ಟಡ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಬೀದಿನಾಯಿಗಳ ವಾಸಸ್ಥಾನವಾಗಿವೆ. ಸೌಧದ ಆವರಣದಲ್ಲಿದ್ದ ಕಾರಂಜಿ ಸ್ಥಗಿತಗೊಂಡಿದೆ. ಸುಂದರ ಕೈತೋಟ, ಆಲಂಕಾರಿಕ ಗಿಡಗಳು ಹಾಳಾಗಿವೆ, ಚಪ್ಪಡಿ ಕಲ್ಲುಗಳು ಕಳ್ಳತನವಾಗಿದೆ.

‘ಕೆಂಗಲ್‌ ಹನುಮಂತಯ್ಯ ಅವರು ಕಟ್ಟಿದ ಸುಂದರ ಕಟ್ಟಡ ಅದು. ಈಗಿನ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅದನ್ನು ಉಳಿಸುವ ಇಚ್ಛಾಶಕ್ತಿ ಇಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ’ ಎಂದು ಸಾಹಿತಿ ಜಿ.ಟಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಮುಂದಿನ ದಿನಗಳಲ್ಲಿ ಸತ್ಯಾಗ್ರಹ ಸೌಧವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತೇವೆ. ಇಲಾಖೆಯೊಂದಕ್ಕೆ ನೀಡುವ ಚರ್ಚೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT