ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಉಳಿವು ಮತದಾರನ ಕೈಯಲ್ಲಿ

ಸಿದ್ದರಾಮಯ್ಯ ಮನವಿ, ಜನರಿಗೆ ವಿಶ್ವಾಸ ದ್ರೋಹ ಬಗೆದ ಅನರ್ಹ ಶಾಸಕರು: ಆಕ್ರೋಶ
Last Updated 23 ನವೆಂಬರ್ 2019, 10:48 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಜನರ ವಿಶ್ವಾಸಕ್ಕೆ ದ್ರೋಹ ಬಗೆದ ಅನರ್ಹ ಶಾಸಕರ ಭವಿಷ್ಯವನ್ನು ತೀರ್ಮಾನಿಸುವ ಅವಕಾಶ ಜನತಾ ನ್ಯಾಯಾಲಯದ ಮುಂದಿದೆ. ಮತದಾರರ ತೀರ್ಮಾನವು ಭವಿಷ್ಯದ ಪ್ರಜಾಪ್ರಭುತ್ವದ ಉಳಿವಿಗೆ ನೆರವಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಅಕ್ಕಿಹೆಬ್ಬಾಳು, ಸೋಮನಹಳ್ಳಿ, ಆಲಂಬಾಡಿ ಕಾವಲು, ಗಂಜಿಗೆರೆ, ಬಲ್ಲೇನಹಳ್ಳಿ ಗ್ರಾಮಗಳಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರ ಮತಯಾಚಿಸಿ ಅವರು ಮಾತನಾಡಿದರು.

ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರನ್ನು ಗೆಲ್ಲಿಸುವ ಮೂಲಕ ನನಗೆ ಶಕ್ತಿ ತುಂಬಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳೇ ಮಾಲೀಕರು. ಮತದಾರರಿಗಿಂತ ಯಾರೂ ದೊಡ್ಡವರಲ್ಲ. ಹೀಗಿರುವಾಗ ನಾರಾಯಣಗೌಡ ಜನರನ್ನು ಕೇಳಿ ರಾಜೀನಾಮೆ ನೀಡಿಲ್ಲ. ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ, ಈಗ ಚುನಾವಣೆಗೆ ಕಾರಣರಾಗಿದ್ದಾರೆ. ನಾಳೆ ಮತ್ತೆ ಇದನ್ನೇ ಮಾಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.

ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಮಾತನಾಡಿ, ‘ಜನರಿಂದ ಗೆದ್ದವರಿಗೆ ನೈತಿಕತೆ ಇರಬೇಕು. ಐದು ವರ್ಷಗಳ ಅವಧಿಗೆ ಆಶೀರ್ವದಿಸಿರುವಾಗ ಸ್ವಾರ್ಥಕ್ಕಾಗಿ ಉಪಚುನಾವಣೆ ತಂದವರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹಾಲುಮತ ಕುರುಬ ಸಮಾಜ ಹೆಚ್ಚಾಗಿರುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಲ್ಲಿಯೇ ಸಿದ್ದರಾಮಯ್ಯ ಅವರಿಂದ ಪ್ರಚಾರ ಕಾರ್ಯವನ್ನು ನಡೆಸಲಾಯಿತು.

ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಬಿ.ಪ್ರಕಾಶ್, ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿದರು.

ಜಿಲ್ಲಾ ಪಂಚಾಂಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಬಿ.ನಾಗೇಂದ್ರಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ರವೀಂದ್ರಬಾಬು, ಮುಖಂಡರಾದ ರವಿಕುಮಾರ್ ಗಣಿಗ, ಮೀನಾಕ್ಷಿ ರಮೇಶ್, ಕೆ.ಸಿ.ಮಂಜುನಾಥ್, ಪುರುಷೋತ್ತಮ್, ಕೆ..ಬಿ.ಈಶ್ವರಪ್ರಸಾದ್ ಇದ್ದರು.

‘ಬಿಜೆಪಿಗೆ ಪಾಠ ಕಲಿಸಿ’

‘ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಾದರೆ ನಾರಾಯಣಗೌಡರಿಗೆ ಮತ ಹಾಕದೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ವ್ಯಕ್ತಿ ಕೆ.ಬಿ.ಚಂದ್ರಶೇಖರ್‌ಗೆ ಮತ ಹಾಕಿ ಗೆಲ್ಲಿಸಬೇಕು. ಆಗ ನನಗೆ ಶಕ್ತಿ ಬರುತ್ತದೆ. ನಾನು ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಅಹಿಂದ ವರ್ಗಗಳ ಸಂಘಟನೆ ಮಾಡುತ್ತಿರುವುದನ್ನು ಸಹಿಸದೇ ನನ್ನನ್ನು ಉಚ್ಚಾಟನೆ ಮಾಡಲಾಯಿತು. ಆಗ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಯಿತು. ಜೆಡಿಎಸ್ ಪಕ್ಷಕ್ಕೆ ಆಚಾರ, ವಿಚಾರ, ನೀತಿ ನಿಯಮ ಏನಿಲ್ಲ. ಹಿಂದೆ ನಮ್ಮ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಿದ್ದರು. ಈಗ ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ ಅಂತಾ ಹೇಳುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT