ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಮುಡಿ: ಸರಳ ಆಚರಣೆಗೆ ನಿರ್ಧಾರ

ಒಮ್ಮೆ ದೇವಾಲಯಕ್ಕೆ 100ಕ್ಕಿಂತ ಹೆಚ್ಚು ಜನರಿಗೆ ಪ್ರವೇಶ ಇಲ್ಲ, ಕೋವಿಡ್‌ ಪರೀಕ್ಷಾ ವರದಿ ಕಡ್ಡಾಯ
Last Updated 15 ಮಾರ್ಚ್ 2021, 14:13 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಮಾರ್ಚ್‌ 24ರಂದು ನಡೆಯಲಿರುವ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮಾರ್ಚ್ 19ರಿಂದ ಧಾರ್ಮಿಕ ಉತ್ಸವ ಆರಂಭಗೊಳ್ಳಲಿದ್ದು ಮಾರ್ಚ್‌ 31ರವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ರಾಜ್ಯ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ಸರಳ ಆಚರಣೆಗೆ ಸೀಮಿತಗೊಳಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಶ್ವಥಿ ‘ಕಳೆದ ಬಾರಿಯಂತೆಯೇ ಈ ಬಾರಿಯೂ ಸರಳವಾಗಿ ಆಚರಣೆ ಮಾಡಲಾಗುವುದು. ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ದೇವಸ್ಥಾನದ 2 ಪ್ರವೇಶ ದ್ವಾರದಲ್ಲಿ ಅವಕಾಶ ಮಾಡಿಕೊಡಲಾಗುವುದು. ಪ್ರವೇಶದ್ವಾರದಲ್ಲಿಯೇ ಕೋವಿಡ್-19 ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು ಹಾಗೂ ನೆಗೆಟಿವ್ ವರದಿ ಬಂದವರಿಗೆ ಸೀಲ್ ಹಾಕಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಆಚರಣೆಯಲ್ಲಿ 2000 ಕ್ಕಿಂತ ಹೆಚ್ಚಿನ ಭಕ್ತಾಧಿಗಳು ಸೇರದಂತೆ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನದ ಪ್ರಾಂಗಣದೊಳಗೆ ಒಂದು ಬಾರಿಗೆ ನೂರಕ್ಕಿಂತ ಹೆಚ್ಚು ಜನರಿಗೆ ಪ್ರವೇಶವಿಲ್ಲ. ದೇವಸ್ಥಾನದಲ್ಲಿ ನಿಯೋಜಿಸಿರುವ ಅರ್ಚಕರು ಹಾಗೂ ಸರ್ಕಾರಿ ಸಿಬ್ಬಂದಿಯನ್ನು ಹೊರತುಪಡಿಸಿ, ಹೆಚ್ಚುವರಿ ಅರ್ಚಕರು ಮತ್ತು ಸಿಬ್ಬಂದಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ’ ಎಂದರು.

‘ದೇವಾಲಯದ ಆವರಣದಲ್ಲಿ ಗುಂಪುಗೂಡುವುದು ಹಾಗು ರಾತ್ರಿವೇಳೆಯಲ್ಲಿ ತಂಗುವಿಕೆಯನ್ನು ನಿರ್ಬಂಧಿಸಲಾಗುವುದು. ಒಳ ಮತ್ತು ಹೊರ ಆವರಣದಲ್ಲಿ ಯಾವುದೇ ರೀತಿಯ ಸಾಮೂಹಿಕ ಭೋಜನ ವ್ಯವಸ್ಥೆ, ಪ್ರಸಾದ ವಿತರಣೆ ಇರುವುದಿಲ್ಲ. ಸುತ್ತಮುತ್ತಲಿನ ಹೊಟೇಲ್‍ಗಳನ್ನು ತೆರೆಯದಂತೆ ಆದೇಶಿಸಲಾಗುವುದು’ ಎಂದರು.

ಬ್ರಹ್ಮೋತ್ಸವವನ್ನು ನಸುಕಿನ ಜಾವ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ರಾತ್ರಿ 12 ಗಂಟೆಯೊಳಗೆ ಮುಗಿಯುವಂತೆ ಸೂಚನೆ ನೀಡಲಾಗುವುದು. ಸರಳ ಆಚರಣೆಗೆ ಸಾರ್ವಜನಿಕರು ಸಹಕರಿಸಬೇಕು. ಸ್ಥಳದಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುವುದು ಕಡ್ಡಾಯ. 3.25 ಚ.ಮೀ ದೈಹಿಕ ಅಂತರ ಕಾಪಾಡಿಕೊಂಡು ದರ್ಶನ ಪಡೆಯಬೇಕು. ಜಿಲ್ಲಾ ಖಜಾನೆಯಲ್ಲಿರುವ ಆಭರಣ ಪೆಟ್ಟಿಗೆಯನ್ನು ಸರಳ ಪೂಜೆ ನೆರವೇರಿಸುವ ಮೂಲಕ ಮೇಲುಕೋಟೆಗೆ ಕೊಂಡೊಯ್ಯಲಾಗುವುದು. ವೈಭವದ ಮೆರವಣಿಗೆ ಇರುವುದಿಲ್ಲ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅಶ್ವಿನಿ, ಪಾಂಡವಪುರದ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ವಾರ್ತಾಧಿಕಾರಿ ಟಿ.ಕೆ ಹರೀಶ್, ಪಾಂಡವಪುರ ತಾಲ್ಲೂಕಿನ ತಹಶೀಲ್ದಾರ್ ಪ್ರಮೋದ್ ಪಾಟೀಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT