ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಪ್ರಾರಂಭಕ್ಕೆ ಪೋಷಕರ ಆಗ್ರಹ

6–8 ತರಗತಿಗೆ ಪೂರ್ಣ ಪ್ರಮಾಣದಲ್ಲಿ ಆರಂಭ, ಮೊದಲ ದಿನ ಶೇ 60 ವಿದ್ಯಾರ್ಥಿಗಳ ಹಾಜರಿ
Last Updated 23 ಫೆಬ್ರುವರಿ 2021, 4:40 IST
ಅಕ್ಷರ ಗಾತ್ರ

ಮಂಡ್ಯ: ಸೋಮವಾರದಿಂದ 6 ರಿಂದ 8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು, ಶಾಲೆಯಲ್ಲಿ ಬಿಸಿಯೂಟ ಪ್ರಾರಂಭಿಸುವ ಒತ್ತಾಯಗಳು ಕೇಳಿ ಬರುತ್ತಿವೆ.

ಶೈಕ್ಷಣಿಕ ಚಟುವಟಿಕೆಗಳು ಮತ್ತೆ ಹಳಿಗೆ ಬರುತ್ತಿದ್ದು, ಮಕ್ಕಳು ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತರಬೇಕಾಗಿದೆ. ಗ್ರಾಮಾಂತರ, ಹಳ್ಳಿಗಳಲ್ಲಿನ ಶಾಲೆಗಳಲ್ಲಿ ಬಹುತೇಕ ಬಡತನ ಹಿನ್ನೆಲೆಯ ಮಕ್ಕಳು ದಾಖಲಾಗಿದ್ದು, ಕೆಲ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಿಲ್ಲದೆ ಅರೆಹೊಟ್ಟೆಯಲ್ಲೇ ಪಾಠ ಕೇಳುವಂತಾಗಿದೆ. ಹಳ್ಳಿಗಳಲ್ಲಿ ಬೆಳಿಗ್ಗೆ ತಿಂಡಿಯೂ ಇಲ್ಲದೆ ಬೆರಳೆಣಿಕೆ ಮಕ್ಕಳು ಶಾಲೆಗೆ ಬರುತ್ತಿದ್ದು, ಕ್ಷೀರ ಭಾಗ್ಯ, ಬಿಸಿಯೂಟ ಯೋಜನೆಗಳು ಆರಂಭಿಸಿದರೆ ಪೂರ್ಣ ಮನಸ್ಸಿನಿಂದ ಪಾಠ ಕೇಳಬಹುದಾಗಿದೆ.

‘ಕೊರೊನಾ ಕಾರಣದಿಂದ ನಿರ್ಬಂಧ ವಿಧಿಸಿದ್ದ ಎಲ್ಲಾ ಕಾರ್ಯಗಳೂ ಸಾರಾಗವಾಗಿ ನಡೆಯುತ್ತಿದೆ. ಮದುವೆಗಳು, ಬಸ್‌ ಪ್ರಮಾಣ, ಸಂತೆಯಲ್ಲಿ ಜನ ಸೇರುವುದು ಯಾವುದಕ್ಕೂ ನಿರ್ಬಂಧ ಇಲ್ಲ. ಶಾಲೆಯ ಆರಂಭಕ್ಕೆ ಇದ್ದ ನಿರ್ಬಂಧ ತೆಗೆದು, ಶಾಲೆ ಆರಂಭಿಸಿರುವುದು ಸಂತಸ ವಿಷಯ. ಅಂತೆಯೇ ಬಿಸಿಯೂಟ ಪ್ರಾರಂಭಿಸದರೆ ಪೂರ್ಣ ಮನಸ್ಸಿನಿಂದ ಅಧ್ಯಯನದ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ. ಎಲ್ಲಾ ಪೋಷಕರು ಬಿಸಿಯೂಟ ಆರಂಭಿಸಲು ಒತ್ತಾಯಿಸುತ್ತಿದ್ದಾರೆ’ ಎಂದು ಬಿ.ಹೊಸೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಚ್‌.ಜಿ.ಸುರೇಶ್‌ ಹೇಳಿದರು.

‘ಈಗಾಗಲೇ ಶಾಲೆಗೆ ಬರಲು ಪೋಷಕರ ಒಪ್ಪಿಗೆ ಪತ್ರ ತಂದಿರುವ ವಿದ್ಯಾರ್ಥಿಗಳೂ ಮತ್ತೆ ಒಪ್ಪಿಗೆ ಪತ್ರ ತರಬೇಕು. ಈಗಾಗಲೇ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ, ಬಿಸಿಯೂಟ ಧಾನ್ಯಗಳನ್ನ ನೀಡಲಾಗಿದೆ. ಹಿಂದಿನಂತೆಯೇ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ತರಗತಿಗಳು ನಡೆಯಲಿದ್ದು, ಮನೆಯಿಂದಲೇ ಊಟ ತರಬೇಕು’ ಎಂದು ಶಿಕ್ಷಣಾಧಿಕಾರಿ ಚಂದ್ರಶೇಖರ್‌ ಹೇಳಿದರು.

ಕೋವಿಡ್‌ ಕಾರಣದಿಂದ ಅರ್ಧ ದಿನ ನಡೆಯುತ್ತಿದ್ದ 6 ರಿಂದ 8 ನೇ ತರಗತಿಗಳು ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು, ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮೊದಲ ದಿನ ಜಿಲ್ಲೆಯಾದ್ಯಂತ ಶೇ 60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಶಾಲೆಯಿಲ್ಲದೆ, ಮನೆಯಲ್ಲಿ ಆಟ ಆಡಲು ಬಿಡದೆ ಕೂಡಿ ಹಾಕುತ್ತಿದ್ದ ಮಕ್ಕಳಿಗೆ ಪಂಜರದಿಂದ ಬಿಡಿಸಿದ ಸ್ವತಂತ್ರ ಹಕ್ಕಿಯಂತಾಗಿದ್ದು, ಸ್ನೇಹಿತರೊಂದಿಗೆ ಆಟ–ಪಾಠದಲ್ಲಿ ಉತ್ಸುಕತೆಯಿಂದ ತಲ್ಲೀನರಾಗುತ್ತಿದ್ದಾರೆ. ಜ. 1 ರಿಂದ 10 ನೇ, ಫೆ. 1 ರಿಂದ 9 ನೇ ತರಗತಿಗಳು ಆರಂಭವಾಗಿದ್ದವು. ಜ. 1 ರಿಂದಲೇ ವಿದ್ಯಾಗಮ ಅಡಿ 6ರಿಂದ 9ರವೆರೆಗೆ ಅರ್ಧ ದಿನದ ತರಗತಿಗಳು ನಡೆಯುತ್ತಿದ್ದವು.

‘ಕೋವಿಡ್‌ನಿಂದ ಬೇಸತ್ತಿದ್ದ ಮಕ್ಕಳಿಗೆ ಪೂರ್ಣ ದಿನದ ತರಗತಿಗಳು ಶಿಕ್ಷಣದ ನೈಜ ಸ್ವಾದ ಅನುಭವಿಸುತ್ತಿದ್ದಾರೆ. ಈಗ ಶಿಕ್ಷಣದಿಂದ ಅಧ್ಯಯನದ ಕಡೆ ಹೆಚ್ಚು ಆಸಕ್ತಿ ವಹಿಸುವಂತಾಗಿದೆ. 6–10 ರವರೆಗೆ 7586 ವಿದ್ಯಾರ್ಥಿಗಳು ಇದ್ದು, 6300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ’ ಎಂದು ಮಂಡ್ಯ ಉತ್ತರ ವಲಯದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಾಗರಾಜು ಅವರು ಹೇಳಿದರು.

ಫಲಿತಾಂಶ ಸುಧಾರಣೆಗೆ ಸಭೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಪಂ ಸಿಇಒ ಜುಲ್ಫೀಕರ್‌ ಉಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಜುಲ್ಫೀಕರ್‌ ಉಲ್ಲಾ ಮಾತನಾಡಿ ‘ಕಳೆದ ಬಾರಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 4ನೇ ಸ್ಥಾನ ಪಡೆದಿದ್ದು, ಈ ಬಾರಿ ಅದಕ್ಕಿಂತ ಉತ್ತಮ ಸ್ಥಾನ ಪಡೆಯಲು ಶ್ರಮಿಸಬೇಕು. ಶಾಲೆಗಳಲ್ಲಿ ಕುಡಿಯುವ ನೀರಿನ, ಶೌಚಾಲಯದ ಸಮಸ್ಯೆ ಇದ್ದರೆ ಕ್ರಿಯಾಯೋಜನೆ ತಯಾರಿಸಿ ಕೊಡಿ. ನರೇಗಾದಡಿ ಅನುದಾನ ಕೊಡಿಸಲಾಗುವುದು’ ಎಂದು ಹೇಳಿದರು.

ಡಿಡಿಪಿಐ ರಘುನಂದನ್‌ ಮಾತನಾಡಿ ‘ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಶಿಕ್ಷಕರಿಗೆ ದತ್ತು ನೀಡಲಾಗಿದೆ. ಫಲಿತಾಂಶ ಉತ್ತಮ ಪಡಿಸಲು ಶ್ರಮಿಸಲಾಗುವುದು’ ಎಂದು ಹೇಳಿದರು. ಇಒ ಚಂದ್ರಶೇಖರ್‌, ಬಿಇಒಗಳು, ಬಿಆರ್‌ಸಿಗಳು, ವಿಷಯ ಪರಿವೀಕ್ಷಕರು, ಡಿವೈಪಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT