ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ: ಇಬ್ಬರು ಅಧಿಕಾರಿಗಳ ಅಮಾನತು

ತಾಲ್ಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್
Last Updated 16 ಅಕ್ಟೋಬರ್ 2019, 20:26 IST
ಅಕ್ಷರ ಗಾತ್ರ

ಮದ್ದೂರು: ಸರ್ವೆ ಮಾಡಲು ಹಾಗೂ ದಾಖಲಾತಿ ನೀಡಲು ಲಂಚ ಪಡೆಯುತ್ತಾರೆ ಎಂಬ ಆರೋಪದ ಮೇಲೆ ತಾಲ್ಲೂಕು ಕಚೇರಿಯ ಸರ್ವೆ ದಾಖಲಾತಿ ವಿಭಾಗದ ದಫೇದಾರ್ ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಅಕ್ಬರ್ ಎಂಬುವರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ತಾಲ್ಲೂಕು ಕಚೇರಿಗೆ ಬುಧವಾರ ದಿಢೀರ್‌ ಭೇಟಿ ನೀಡಿದ ಸಚಿವರು, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಸಾರ್ವಜನಿಕರಿಂದ ಅಹವಾಲು ಆಲಿಸಿದರು.

ಸರ್ವೆ ವಿಭಾಗಕ್ಕೆ ಭೇಟಿ ನೀಡಿದ ಸಚಿವರಿಗೆ ನಾಗರಿಕರಾದ ಹೊನ್ನಲಗೆರೆ ಸ್ವಾಮಿ, ರವಿ ಸೇರಿದಂತೆ ಹಲವರು ದೂರುಗಳ ಸುರಿಮಳೆಯನ್ನೇ ಸುರಿಸಿದರು.

ರೈತರ ಜಮೀನಿಗೆ ಸಂಬಂಧಿಸಿದಂತೆ ಅಳತೆ ಮಾಡುವುದಕ್ಕೆ, ದಾಖಲಾತಿ ಗಳನ್ನು ನೀಡುವುದಕ್ಕೆ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಡುತ್ತಾರೆ. ಸರ್ವೆ ಮಾಡಲು ₹4 ಸಾವಿರದಿಂದ ₹5 ಸಾವಿರ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಲು ಸುಮಾರು ₹3 ಸಾವಿರ ಕೊಡಬೇಕು. ಹಣ ಕೊಡದಿದ್ದರೆ ಅನಗತ್ಯವಾಗಿ ವಿಳಂಬ ಮಾಡುತ್ತಾರೆ’ ಎಂದು ದೂರಿದರು.

ಇದರಿಂದ ಕೆರಳಿದ ಸಚಿವರು, ‘ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜನರ ಕೆಲಸಗಳನ್ನು ಮಾಡಿಕೊಡದೆ ವಿಳಂಬ ಧೋರಣೆ ಅನುಸರಿಸುವ, ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಗಳ ಮೇಲೆ ನಿಗಾ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಸೂಚಿಸಿದರು.

‘ಖಾತೆ ಮಾಡುವುದಕ್ಕೆ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ವಿನಾಕಾರಣ ತಾಲ್ಲೂಕು ಕಚೇರಿಗೆ ಅಲೆಸುತ್ತಾರೆ. 5–6 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಉಪವಿಭಾಗಾಧಿಕಾರಿ ಅವರಿಗೆ ಕಳುಹಿಸಿದ್ದೇವೆ ಎಂದು ನೆಪ ಹೇಳುತ್ತಾರೆ’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ದಿಗ್ವಿಜಯ್ ಗೋಡ್ಕೆ ಅವರಿಗೆ ಸೂಚಿಸಿದರು.

ತಾಲ್ಲೂಕು ಕಚೇರಿಗೆ ಸಚಿವರು ಬಂದಿರುವ ವಿಷಯ ತಿಳಿದ ಶಾಸಕ ಡಿ.ಸಿ.ತಮ್ಮಣ್ಣ ಸ್ಥಳಕ್ಕೆ ಬಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಣ್ಣೆದೊಡ್ಡಿ ರಘು, ಮುಖಂಡರಾದ ರವಿ, ರಮೇಶ್, ಸಿಪಿಐ ಮಹೇಶ್ ಹಾಗೂ ಪಿಎಸ್ಐ ಮಂಜೇಗೌಡ ಇದ್ದರು.

‘ಲಂಚ ಕೇಳಿದರೆ ಗಮನಕ್ಕೆ ತನ್ನಿ’

ತಾಲ್ಲೂಕು ಕಚೇರಿಯಲ್ಲಿ ಲಂಚಗುಳಿತನ ಹೆಚ್ಚಾಗಿದೆ. ಈ ಬಗ್ಗೆ ಜನರು ದೂರು ನೀಡಿದ್ದಾರೆ. ಇಲ್ಲಿನ ಯಾವುದೇ ವಿಭಾಗದ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದರೆ, ಲಂಚಕ್ಕೆ ಬೇಡಿಕೆ ಇಟ್ಟರೆ ಕೂಡಲೇ ತಹಶೀಲ್ದಾರ್‌ ಗಮನಕ್ಕೆ ತರಬೇಕು ಎಂದು ಆರ್‌.ಅಶೋಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT