ಗುರುವಾರ , ಆಗಸ್ಟ್ 18, 2022
25 °C

ಮಂಡ್ಯ: ಕೊಲೆಯಾದ ಮಹಿಳೆಯರ ಸುಳಿವು ನೀಡಿದವರಿಗೆ ₹1ಲಕ್ಷ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರುಂಡ, ಮುಂಡ ಬೇರ್ಪಡಿಸಿದ ರೀತಿಯಲ್ಲಿ ಈಚೆಗೆ ಪತ್ತೆಯಾಗಿದ್ದ ಇಬ್ಬರು ಅಪರಿಚಿತ ಮಹಿಳೆಯರ ಗುರುತು ಪತ್ತೆ ಕಾರ್ಯಾಚರಣೆ ಪೊಲೀಸರಿಗೆ ತಲೆನೋವಾಗಿದೆ. ಕೊಲೆಯಾದ ಮಹಿಳೆಯರ ಸುಳಿವು ನೀಡಿದವರಿಗೆ ₹ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ಪೊಲೀಸ್‌ ಇಲಾಖೆ ಪ್ರಕಟಿಸಿದೆ.

ಎರಡೂ ಮೃತದೇಹಗಳು ಒಂದೇ ರೀತಿಯಲ್ಲಿ ಕೊಲೆಯಾಗಿದ್ದು ಪೊಲೀಸರಿಗೆ ಹಲವು ಅನುಮಾನಗಳು ಕಾಡುತ್ತಿವೆ. ಕಳೆದೆರಡು ವಾರದಿಂದ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ. ಭಿತ್ತಿಪತ್ರಗಳನ್ನು ಹಂಚಿಕೆ ಮಾಡಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಮತ್ತಷ್ಟು ಜಟಿಲವಾಗುತ್ತಿರುವ ಕಾರಣ ಪೊಲೀಸರು ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ಜೂನ್‌ 8ರಂದು ಪಾಂಡವಪುರ ತಾಲ್ಲೂಕು ಬೇಬಿ ಗ್ರಾಮದ ಕೆರೆಯ ಕಾಲುವೆಯಲ್ಲಿ ಒಂದು ಶವ ಪತ್ತೆಯಾಗಿದ್ದರೆ, ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಬಳಿಯ ಸಿಡಿಎಸ್‌ ನಾಲೆಯಲ್ಲಿ ಇನ್ನೊಂದು ಶವ ಪತ್ತೆಯಾಗಿತ್ತು. ದೇಹಗಳು ಮುಂಡ ಭಾಗ ಮಾತ್ರ ಪತ್ತೆಯಾಗಿದ್ದು ರುಂಡ ಸಿಕ್ಕಿರಲಿಲ್ಲ. ಎರಡೂ ಕೊಲೆಗಳು ಒಂದೇ ರೀತಿಯಲ್ಲಿ ನಡೆದಿರುವ ಕಾರಣ ಪೊಲೀಸರು ವಿವಿಧ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

‘ಮಹಿಳೆಯರ ಗುರುತು ಪತ್ತೆಯಾದರೆ ತನಿಖೆಗೆ ಸಹಾಯವಾಗುತ್ತಿದೆ. ಆ ನಿಟ್ಟಿನಲ್ಲಿ ಗುರುತು ಪತ್ತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಶೀಘ್ರ ಮಾಹಿತಿ ದೊರೆಯುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು