ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ನಾಗಮಂಗಲ ತಾಲ್ಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಮೂಲಸೌಕರ್ಯ ಕೊರತೆ
Last Updated 31 ಅಕ್ಟೋಬರ್ 2020, 4:51 IST
ಅಕ್ಷರ ಗಾತ್ರ

ನಾಗಮಂಗಲ: ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ಚರಂಡಿ ತುಂಬಿ ರಸ್ತೆ ಮೇಲೆ ನೀರು ನಿಲ್ಲುತ್ತದೆ. ಮನೆಗಳ ಮುಂದೆ ನೀರು ನಿಂತು ಗೋಡೆಗಳೆಲ್ಲಾ ತೇವಗೊಂಡು ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರ ಇರುವದುಮ್ಮಸಂದ್ರ ಗ್ರಾಮಕ್ಕೆ ಹಲವು ದಶಕಗಳಿಂದ ಮೂಲ ಸೌಕರ್ಯ ಮರೀಚಿಕೆಯಾಗಿದೆ.

ಮಳೆಗಾಲದಲ್ಲಂತೂ ಗ್ರಾಮದ ರಸ್ತೆಗಳಲ್ಲಿ ನೀರು ಹರಿಯುವ ದೃಶ್ಯ ಸಾಮಾನ್ಯವಾಗಿರುತ್ತದೆ. ಗುಂಡಿಗಳಲ್ಲಿ ನೀರು ನಿಂತು ಗಬ್ಬುವಾಸನೆ ಬರುತ್ತದೆ. ನಿರಂತರವಾಗಿ ರಸ್ತೆಗಳಲ್ಲಿ ಚರಂಡಿ ನೀರು ಹರಿಯುವುದರಿಂದ ಕೆಲ ಮನೆಗಳ ಗೋಡೆ ಕುಸಿದು
ಬಿದ್ದಿವೆ.

ಶಾಲೆ, ದೇವಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಎದುರು ಚರಂಡಿ ನೀರು ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಗ್ರಾಮದ ಒಳಗೇ ಇರುವ ತಿಪ್ಪೆಗಳಲ್ಲಿ ಗಿಡಗಳು ಬೆಳೆದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.

‘ಮೂಲಸೌಕರ್ಯಕ್ಕೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ತಿಪ್ಪೆ ಮುಚ್ಚಿಸುವಂತೆ ಮನವಿ ಮಾಡಿದರೆ ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ’ ಎಂದು ಗ್ರಾಮದಲಕ್ಷ್ಮಣ ಗೌಡ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮಳೆಗಾಲ ಬಂದರೆ ಚರಂಡಿ ಕೊಳಚೆ ಜೊತೆಗೆ ಮಳೆ ನೀರು ನಿಂತು ಮನೆಗಳು ತೇವಗೊಳ್ಳುತ್ತವೆ. ನೆಲ ಹಸಿಯಾಗಿ ಗೋಣಿಚೀಲ ಹಾಕಿಕೊಂಡು ಮಲಗುವ ಪರಿಸ್ಥಿತಿ ಬರುತ್ತದೆ. ಅತಿಯಾದ ಶೀತಕ್ಕೆ ಮನೆ ಗೋಡೆಗಳು ಬಿದ್ದರೆ ಯಾರು ಹೊಣೆ’ ಎಂದು ಗ್ರಾಮಸ್ಥರಾದ ಯಶೋದರಾ ಪ್ರಶ್ನಿಸುತ್ತಾರೆ.

ಮತದಾನ ಬಹಿಷ್ಕಾರ ಎಚ್ಚರಿಕೆ: ‘ಜನಪ್ರತಿನಿಧಿಗಳಿಗೆ ನಮ್ಮ ಗ್ರಾಮ ನೆನಪಾಗುವುದು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ. ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಆಲೋಚನೆ ಮಾಡಿದ್ದೇವೆ. ಗ್ರಾಮದ ಸಮಸ್ಯೆ ಬಗೆಹರಿಸದಿದ್ದರೆ ಮತ ಕೇಳಲು ಗ್ರಾಮದ ಒಳಗೆ ಬರದಂತೆ ತಡೆಯುತ್ತೇವೆ’ ಎಂದು ಗ್ರಾಮಸ್ಥರು ಆಕ್ರೋಶ
ವ್ಯಕ್ತಪಡಿಸುತ್ತಾರೆ.

‘ಗ್ರಾಮದ ಸಮಸ್ಯೆ ಬಗ್ಗೆ ಜನ ಗಮನಕ್ಕೆ ತಂದಿದ್ದು, ಸಭೆಯನ್ನೂ ಕರೆಯಲಾಗಿತ್ತು. ಶೀಘ್ರ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ರಸ್ತೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಸಕ ಸುರೇಶ್ ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT