ಭಾನುವಾರ, ಜೂನ್ 13, 2021
29 °C
ಗ್ರಾಮಗಳೂ ಸುರಕ್ಷಿತವಾಗಿ ಉಳಿದಿಲ್ಲ, ಜಮೀನಿಗೆ ತೆರಳವುದಕ್ಕೂ ಭಯ, ಬಿಕೋ ಎನ್ನುತ್ತಿರುವ ರಸ್ತೆಗಳು

ಕೋವಿಡ್‌-19: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಸ್ವಯಂಪ್ರೇರಿತ ಸೀಲ್‌ಡೌನ್‌

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯ ಹಳ್ಳಿಗಳಲ್ಲೂ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿತರು ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಸೋಂಕಿತರ ಮನೆಗಳನ್ನು ಸೀಲ್‌ಡೌನ್‌ ಮಾಡುತ್ತಿದ್ದು ಹಳ್ಳಿಗಳಲ್ಲಿ ನೀರವ ಮೌನ ಆವರಿಸಿದೆ.

ರೋಗ ಲಕ್ಷಣಗಳಿಲ್ಲದ, ಸೌಮ್ಯ ರೋಗ ಲಕ್ಷಣ ಹೊಂದಿರುವವರನ್ನು ಆಸ್ಪತ್ರೆಗೆ, ಕೋವಿಡ್‌ ಕೇರ್‌ ಕೇಂದ್ರಗಳಿಗೆ ದಾಖಲು ಮಾಡದೇ ಮನೆಯಲ್ಲೇ ಉಳಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ಸೌಲಭ್ಯ ಇಲ್ಲದವರನ್ನು ಮಾತ್ರ ಕೋವಿಡ್‌ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಪೊಲೀಸರು ಸೋಂಕಿತರ ಮೇಲೆ ನಿಗಾ ವಹಿಸಿದ್ದಾರೆ.

ಜೊತೆಗೆ ಗ್ರಾಮಸ್ಥರು ಕೂಡ ಸೋಂಕಿತರ ಮೇಲೆ ನಿಗಾ ವಹಿಸಿದ್ದಾರೆ.  ಪ್ರತಿ ಗ್ರಾಮದಲ್ಲೂ ಸೋಂಕಿತರು ಕಂಡುಬಂದಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಇಡೀ ಊರಿಗೆ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಸೋಂಕು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಹಳ್ಳಿಗಳು ಸುರಕ್ಷಿತವಾಗಿದ್ದವು. ಬೇರೆಬೇರೆ ನಗರಗಳಿಂದ ಬಂದವರು ಹಳ್ಳಿಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದರು. ಹಳ್ಳಿ ಅಂಗಡಿಗಳು, ಹೋಟೆಲ್‌ಗಳ ಚಟುವಟಿಕೆ ನಡೆಯುತ್ತಿದ್ದವು. ಹಳ್ಳಿಯ ಜನರು ಯಾವುದೇ ಮಾಸ್ಕ್‌ಗಳನ್ನೂ ಧರಿಸುತ್ತಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ, ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಬಂದರೂ ತಪ್ಪದೇ ಮಾಸ್ಕ್‌ ಧರಿಸುವ ಪರಿಸ್ಥಿತಿ ಇದೆ.

‘ಹೊಲಕ್ಕೆ ತೆರಳಲು ಮನೆಯಿಂದ ಹೊರ ಬರುವುದಕ್ಕೂ ಭಯವಾಗುತ್ತಿದೆ, ಹಳ್ಳಿಗಳ ರಸ್ತೆಗಳು ಬಿಕೋ ಎನ್ನುತ್ತಿವೆ. ಮಕ್ಕಳನ್ನೂ ಹೊರಗೆ ಕಳುಹಿಸುತ್ತಿಲ್ಲ. ಗ್ರಾಮಗಳಲ್ಲಿ ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕೋವಿಡ್‌ ಪರಿಸ್ಥಿತಿ ಉಲ್ಭಣಿಸಿದ ನಂತರ ಹೊರ ಜಿಲ್ಲೆ, ರಾಜ್ಯಗಳಿಗೆ ತೆರಳಿದವರು ವಾಪಸ್‌ ಬಂದಿದ್ದಾರೆ. ಹೀಗಾಗಿ ಹಳ್ಳಿಗಳಲ್ಲೂ ಸೋಂಕು ಹರಡಿದೆ’ ಎಂದು ಮಂಗಲ ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು.

ಗ್ರಾಮ ಪಂಚಾಯತಿ ಜೊತೆಗೆ ಗ್ರಾಮಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ, ಇನ್ನಿತರ ಸೊಸೈಟಿಗಳ ಪದಾಧಿಕಾರಿಗಳು ಸಭೆ ನಡೆಸಿ ಹಳ್ಳಿಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದಾರೆ. ಹಾಲು ಹಾಕಲು ಬಂದ ಸದಸ್ಯರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಮಾಸ್ಕ್‌ ಧರಿಸದಿದ್ದರೆ ಹಾಲು ಹಾಕಿಸಿಕೊಳ್ಳುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವಾಗಲೂ ಸುರಕ್ಷತಾ ನಿಯಮ ಪಾಲಿಸುವಂತೆ ನೋಡಿಕೊಳ್ಳಲಾಗುತ್ತಿದೆ.

ಒಬ್ಬರಿಗೊಬ್ಬರು ಸಹಾಯ: ಹಳ್ಳಿಗಳಲ್ಲಿ ಸೋಂಕಿತರಿಗೆ ಸಹಾಯ ಮಾಡುವ ಪ್ರವೃತ್ತಿಯೂ ಕಂಡುಬರುತ್ತಿದೆ. ಒಂದೇ ಮನೆಯ ನಾಲ್ಕೈದು ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ ಅಕ್ಕಪಕ್ಕದ ಮನೆಯವರು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಮನೆಯ ಜಾನುವಾರುಗಳಿಗೆ ಮೇವು ಹಾಕಿ, ನೀರು ಕುಡಿಸುವುದು, ಮಕ್ಕಳಿಗೆ ಊಟ, ತಿಂಡಿ ಕೊಡುವುದು, ಸೋಂಕಿತರಿಗೆ ಮಾತ್ರೆ, ಔಷಧಿ ತಂದು ಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

‘ಸೋಂಕಿತರ ಮನೆಗಳಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸ್ವಂತ ಹಣದಿಂದ ಔಷಧಿ ತಂದು ಕೊಡುತ್ತಿದ್ದೇವೆ. ಆಯಾ ಹಳ್ಳಿಗಳಲ್ಲಿ ಎಲ್ಲರೂ ಕೋವಿಡ್‌ನಿಂದ ಗುಣಮುಖರಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದು ತಾಲ್ಲೂಕಿನ ಬೇವಿನಹಳ್ಳಿ ಗ್ರಾ.ಪಂ ಸದಸ್ಯ ಬಿ.ಎಂ.ಮಹೇಶ್‌ ತಿಳಿಸಿದರು.

*******

ಗ್ರಾ.ಪಂಗಳಿಗೆ ಹಣದ ಕೊರತೆ

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಗ್ರಾ.ಪಂಗಳಿಗೆ ಹಣಕಾಸಿನ ಕೊರತೆ ಉಂಟಾಗಿದೆ. 15ನೇ ಹಣಕಾಸು ಯೋಜನೆಯ ಹಣವನ್ನು ಖರ್ಚು ಮಾಡುವಂತೆ ಗ್ರಾ.ಪಂಗಳಿಗೆ ಸೂಚನೆ ನೀಡಲಾಗಿದೆ. ಆದರೆ ಈಗಾಗಲೇ ಹಲವೆಡೆ ಈ ಹಣವನ್ನು ಕಾಮಗಾರಿಗಳಿಗೆ ಖರ್ಚು ಮಾಡಿರುವ ಕಾರಣ ಕೋವಿಡ್‌ ಪರಿಸ್ಥಿತಿ ನಿಭಾಯಿಸುವುದು ತೊಂದರೆಯಾಗಿದೆ.

‘ಗ್ರಾ.ಪಂ ಗಳಿಗೆ ಜಿಲ್ಲಾ ಪಂಚಾಯಿತಿಯಿಂದ ನಿತ್ಯ ಸೂಚನೆಗಳು ಬರುತ್ತವೆ. ಆದರೆ ಅವುಗಳನ್ನು ಜಾರಿಗೊಳಿಸಲು ಹಣ ಇಲ್ಲದಾಗಿದೆ’ ಎಂದು ಪಿಡಿಒವೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

*********

ವಿವಿಧೆಡೆ ಯುವಕರ ಜೂಜಾಟ

ಗ್ರಾಮೀಣ ಭಾಗದಲ್ಲಿ ಸೋಂಕು ತೀವ್ರವಾಗಿದ್ದರೂ ಕೆಲವು ಗ್ರಾಮಗಳಲ್ಲಿ ಯುವಕರು ಗ್ರಾಮದ ಹೊರವಲಯದಲ್ಲಿ ತೋಟದ ಮನೆಯಲ್ಲಿ, ಕಾಲುವೆ, ಕೆರೆ ಸಮೀಪ ಜೂಜಾಡುತ್ತಿರುವುದು ಕಂಡುಬರುತ್ತಿದೆ. ವಿವಿಧೆಡೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲು ಮಾಡುತ್ತಿದ್ದಾರೆ.

‘ಕೋವಿಡ್‌ ನಿಯಮ ಉಲ್ಲಂಘಿಸಿ ಜೂಜಾಡುವವರ ವಿರುದ್ದ ಪ್ರಕರಣ ದಾಖಲು ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

***

ಹಳ್ಳಿಗಳಲ್ಲಿ ಸೋಂಕು ನಿವಾರಣೆಗೆ ಸಕಲ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಕಲ ಸೂಚನೆ ನೀಡಲಾಗಿದೆ

– ಎಸ್‌.ಅಶ್ವಥಿ, ಜಿಲ್ಲಾಧಿಕಾರಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು