ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಎಸ್ ಭರ್ತಿಯಾದ ತಕ್ಷಣ ನಾಲೆಗಳಿಗೆ ನೀರು: ಸಚಿವ ಚಲುವರಾಯಸ್ವಾಮಿ

ನಾಲೆ ಆಧುನೀಕರಣ ಕಾಮಗಾರಿ ವೀಕ್ಷಣೆ: ಸಚಿವ ಎನ್.ಚಲುವರಾಯಸ್ವಾಮಿ
Published 19 ಜೂನ್ 2024, 13:56 IST
Last Updated 19 ಜೂನ್ 2024, 13:56 IST
ಅಕ್ಷರ ಗಾತ್ರ

ಪಾಂಡವಪುರ: ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ನೀರು ಒದಗಿಸಲಾಗುವುದು ರೈತರು ಆತಂಕಪಡುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ಬುಧವಾರ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯನ್ನು ವೀಕ್ಷಿಸಿ ಹಾಗೂ ಪರಿಶೀಲನೆ ನಡೆಸಿ ಮಾತನಾಡಿದರು. ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ನಮ್ಮ ಸರ್ಕಾರ ನಡೆಸುತ್ತಿರುವ ಗುಣಮಟ್ಟ ಕಾಮಗಾರಿಯನ್ನು ನೋಡಿ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅಸಮಾಧಾನದಿಂದ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಯಾವುದೇ ಕೆಲಸ ಆಗಬಾರದು, ರೈತರು ಇದೇ ಸ್ಥಿತಿಯಲ್ಲಿಯೇ ಇರಬೇಕು ಎಂಬ ಭಾವನೆ ಇದ್ದಂತಿದೆ. ನಾವು ಅವರ ರೀತಿಯ ರಾಜಕಾರಣ ಮಾಡಲು ಹೋಗಲ್ಲ. ನಮ್ಮ ಸರ್ಕಾರಕ್ಕೆ ರೈತರ ಹಿತ ಮುಖ್ಯ. ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸುವ ವಿಪಕ್ಷ ನಾಯಕರು ಯಾವ ಎಂಜಿನಿಯರ್ ಗಳನ್ನಾದರೂ ಕರೆದುಕೊಂಡು ಬಂದು ಗುಣಮಟ್ಟ ಪರೀಕ್ಷಿಸಲಿ. ನಾವು ಯಾರನ್ನು ತಡೆಯುವುದಿಲ್ಲ ಎಂದರು.

1992ರಲ್ಲಿ ಕೆ.ಎನ್.ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ವಿಶ್ವೇಶ್ವರಯ್ಯ ನಾಲೆಯ ಡ್ಯಾಮೇಜ್ ಭಾಗಗಳಲ್ಲಿ ಮಾತ್ರ ಆಧುನೀಕರಣ ಮಾಡಿದ್ದು ಬಿಟ್ಟರೇ ಈವರೆಗೂ ಯಾವ ಸರ್ಕಾರವೂ ಆಧುನೀಕರಣ ಮಾಡಿರಲಿಲ್ಲ. ಈಗ ನಾಲೆ ಸಂಪೂರ್ಣ ಆಧುನೀಕರಣ ನಡೆಯುತ್ತಿದೆ. ಕಾಮಗಾರಿಯಿಂದ ಮಂಡ್ಯ, ಕೊತ್ತತ್ತಿ, ಮದ್ದೂರು ಹಾಗೂ ಮಳವಳ್ಳಿ ಭಾಗಕ್ಕೂ ನೀರು ವೇಗವಾಗಿ ಹರಿಯುತ್ತದೆ. ಕಾಮಗಾರಿಗೂ ಮುನ್ನ ನೀರು ಕೊನೆ ಭಾಗ ತಲುಪುವುದು ತಡವಾಗುತ್ತಿತ್ತು. ಈಗ ಒಂದೆರಡು ದಿನದಲ್ಲೇ ನೀರು ಕೊನೆ ಹಂತ ತಲುಪುತ್ತದೆ. ಇನ್ನೂ 50 ವರ್ಷಗಳ ಕಾಲ ಇದರ ಉಪಯೋಗ ಪಡೆಯಬಹುದಾಗಿದೆ. ರೈತರು ಗುಣಮಟ್ಟದ ಕೆಲಸ ನಡೆಯುತ್ತಿದೆ ಎಂದು ಸಂತಸಪಡುತ್ತಿದ್ದಾರೆ ಎಂದು ಹೇಳಿದರು.

ಸಚಿವ ಎನ್.ಚಲುವರಾಯಸ್ವಾಮಿ ಅವರು ನಾಲೆ ವೀಕ್ಷಿಸಿದ ವೇಳೆ ಜಮಾಯಿಸಿದ ರೈತರು, ಕಾಮಗಾರಿಯನ್ನು ತ್ವರಿತವಾಗಿ ಸಂಪೂರ್ಣಗೊಳಿಸಿ ಮುಂಗಾರು ಹಂಗಾಮಿನ ಬೆಳೆಗೆ ನೀರು ಒದಗಿಸಬೇಕು. ಹಲವೆಡೆ ಸೋಪನಾಕಟ್ಟೆ ರ‍್ಯಾಂಪ್‌ ಮತ್ತು ಸೇತುವೆಗಳ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಬೆಟ್ಟಹಳ್ಳಿ ಬಳಿ ಜಮಾಯಿಸಿದ ರೈತರು, ಗುಣಮಟ್ಟದಿಂದ ಕೂಡಿದ ಭಾಗಗಲ್ಲಿ ಮಾತ್ರ ನಿಮಗೆ ಕಾಮಗಾರಿಯನ್ನು ತೋರಿಸಲಾಗುತ್ತಿದೆ. ಉಳಿದ ಭಾಗಗಲ್ಲಿ ಕಾಮಗಾರಿ ಕಳಪೆಯಾಗಿಯೇ ಇದೆ. ಕಾಂಕ್ರೀಟ್ ಮಾಡಿದ ಬಳಿಕ ಕ್ಯೂರಿಂಗ್ ಮಾಡುತ್ತಿಲ್ಲ ಎಂದು ಆರೋಪಿಸಿದರೆ, ಮತ್ತೆ ಕೆಲವರು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಆರ್‌ಎಸ್ ಅಣೆಕಟ್ಟೆಯ ಶೂನ್ಯ ಬಿಂದುವಿನಿಂದ ದುದ್ದ ಹೋಬಳಿಯ ಹುಲಿಕೆರೆವರೆಗಿನ ಸುಮಾರು 46.ಕಿ.ಮೀ.ಉದ್ದದ ನಾಲಾ ಆಧುನೀಕರಣ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳ್ಳುತ್ತಿಲ್ಲ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಹಾಗೂ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದ್ದರಿಂದ ಸುಮಾರು 30ಕ್ಕೂ ಹೆಚ್ಚು ಕಿ.ಮೀ.ವ್ಯಾಪ್ತಿಯ ನಾಲಾ ಆಧುನೀಕರಣ ಕಾಮಗಾರಿಯನ್ನು ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಣೆ ಮಾಡಿ ಸಂಪೂರ್ಣ ಚಿತ್ರಣ ಮತ್ತು ಮಾಹಿತಿ ಪಡೆದುಕೊಂಡರು.

ಈ ವೇಳೆ ಜಿಲ್ಲಾಧಿಕಾರಿ ಕುಮಾರ, ಉಪ ವಿಭಾಗಾಧಿಕಾರಿ ಎಲ್.ಎಂ.ನಂದೀಶ್, ನೀರಾವರಿ ಇಲಾಖೆಯ ಎಇಇ ಜಯರಾಮು, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಮಧು ಜಿ.ಮಾದೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮುಖಂಡರಾದ ಬಿ.ರೇವಣ್ಣ ಇತರರು ಇದ್ದರು.

ನೈತಿಕತೆ ಎಲ್ಲಿದೆ:

ಬಿಜೆಪಿ ನಾಯಕರು ಯಾವ ನೈತಿಕತೆಯಿಂದ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡೋದು ಅಗತ್ಯವಿದೆಯೇ, ಪೆಟ್ರೋಲ್ ಬೆಲೆಯನ್ನು ₹70ರಿಂದ ₹100ಕ್ಕೆ ಏರಿಸಿದವರು ಯಾರು? ಮಹಾರಾಷ್ಟ್ರ ಮಧ್ಯಪ್ರದೇಶ, ಕೇರಳದಲ್ಲಿ ಪೆಟ್ರೋಲ್ ದರ ಎಷ್ಟಿದೆ? ಬಿಜೆಪಿಯವರಂತೆ ತಲೆಕೆಟ್ಟ ರೀತಿ ನಾವು ಬೆಲೆ ಏರಿಕೆ ಮಾಡಿಲ್ಲ. ಇತಿಮಿತಿಯಲ್ಲಿ ಏರಿಕೆ ಮಾಡಿದ್ದೇವೆ. ಎಷ್ಟು ದಿನ ಪ್ರತಿಭಟನೆ ಮಾಡುತ್ತಾರೋ ಮಾಡಲಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT