ಮಂಗಳವಾರ, ಸೆಪ್ಟೆಂಬರ್ 28, 2021
24 °C
ಕಾವೇರಿ ನದಿ ತೀರದಲ್ಲೇ ಕುಡಿಯುವ ನೀರಿಗೆ ಹಾಹಾಕಾರ, ಆರಂಭಗೊಳ್ಳದ ಕಾಮಗಾರಿ

ವಾರಕ್ಕೊಮ್ಮೆ ನೀರು: ಸಂಕಷ್ಟದಲ್ಲಿ ಜನರು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ, ಹೆಬ್ಬಾಡಿಹುಂಡಿ, ಮಣಿಗೌಡನಹುಂಡಿ ಮತ್ತು ಮಹದೇವಪುರ ಬೋರೆ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಕಾವೇರಿ ನದಿ ದಡದಲ್ಲೇ ಇರುವ ಮಹದೇವಪುರದಲ್ಲಿ ವಾರಕ್ಕೆ ಒಮ್ಮೆ ನೀರು ಕೊಡಲಾಗುತ್ತಿದೆ. ನೀರು ಬಿಡುವ ದಿನ ಜನರು ತಮ್ಮ ಎಲ್ಲ ಕೆಲಸ ಬಿಟ್ಟು ಬಿಂದಿಗೆ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಒಂದು ತಿಂಗಳಿನಿಂದ ನೀರಿನ ಬವಣೆ ತೀವ್ರಗೊಂಡಿದೆ. ಕೆಲವರು ತೋಟ, ತುಡಿಕೆಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಮತ್ತೆ ಕೆಲವರು ನದಿಯ ಕಚ್ಚಾ ನೀರನ್ನೇ ಕುಡಿಯುತ್ತಿದ್ದಾರೆ. ಮಹದೇವಪುರ ಬೋರೆ ಗ್ರಾಮದಲ್ಲಿ ಕೂಡ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಪರದಾಡುತ್ತಿದ್ದಾರೆ. ಇಲ್ಲಿ ಕೂಡ
ವಾರಕ್ಕೆ ಒಮ್ಮೆ ನೀರು ಸರಬರಾಜಾಗುತ್ತಿದೆ.

ಮಹದೇವಪುರದಲ್ಲಿ ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಊರಿಗೆ ಹೊಂದಿಕೊಂಡೇ ನದಿ ಹರಿದರೂ ನೀರಿನ ಸಮಸ್ಯೆ ತೀರಿಲ್ಲ. ಶಾಸಕರು, ಸಚಿವರು ಆಶ್ವಾಸನೆ ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದು, ಜನರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ಕುಡಿಯುವ ನೀರಿಗೆ ಸಂಬಂಧಿಕರ ನಡುವೆಯೇ ಗಲಾಟೆಗಳು ನಡೆಯುತ್ತಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ವಿ. ಕೃಷ್ಣ ಹೇಳುತ್ತಾರೆ.

ಕಸಬಾ ಹೋಬಳಿಯ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ನಾಲ್ಕು ದಿನಗಳಿಗೆ ಒಮ್ಮೆ ನೀರು ಕೊಡಲಾಗುತ್ತಿದೆ. ಎತ್ತರದ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಹತ್ತುತ್ತಿಲ್ಲ. ಸಮರ್ಪಕವಾಗಿ ನೀರು ಸಿಗದ ಕಾರಣ ಗ್ರಾಮದ ಆಸುಪಾಸಿನಲ್ಲಿರುವ ತೋಟ, ತುಡಿಕೆಗಳಿಂದ ಜನರು ನೀರು ಹೊತ್ತು ತರುತ್ತಿದ್ದಾರೆ.

ಗೆಂಡೆಹೊಸಹಳ್ಳಿ ಸಮೀಪದ ಮಣಿಗೌಡನಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಾತ್ಕಾಲಿಕವಾಗಿ ನೀರು ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ತಾಲ್ಲೂಕಿನ ಮಹದೇವಪುರ, ಮಹದೇವಪುರ ಬೋರೆ, ಹೆಬ್ಬಾಡಿಹುಂಡಿ ಮತ್ತು ಮಣಿಗೌಡ ಹುಂಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆ ಇರುವ ಕಡೆ ಹೊಸದಾಗಿ ಕೊಳವೆ ಬಾವಿ ಕೊರೆಸಲು ಸ್ಥಳ ಗುರುತು ಮಾಡಲಾಗಿದೆ. ಮಹದೇವಪುರ ಇತರ ಗ್ರಾಮಗಳಿಗೆ ಬಹುಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ರೂಪಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಇಇ ಸಂಗಮೇಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.