ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ–ಕಟ್ಟೆ ಖಾಲಿ, ಬತ್ತಿದ ಕೊಳವೆಬಾವಿ

ಬಸರಾಳು, ದುದ್ದ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ, ನೀಗದ ಸಮಸ್ಯೆ
Last Updated 4 ಮೇ 2019, 1:26 IST
ಅಕ್ಷರ ಗಾತ್ರ

ಕೆರಗೋಡು: ಮಂಡ್ಯ ತಾಲ್ಲೂಕಿನ ಬಸರಾಳು ಮತ್ತು ದುದ್ದ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಅಂತರ್ಜಲ ಕುಸಿದಿದ್ದು, ಕೆರೆ–ಕಟ್ಟೆಗಳು ಒಣಗಿವೆ. ಕೊಳವೆಬಾವಿಗಳು ಬತ್ತಿವೆ.

ಬಸರಾಳು ಹೋಬಳಿ ಒಣ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ಇಲ್ಲಿನ ಜನರು ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಬಸರಾಳು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮ ಪಂಚಾಯಿತಿಯವರು ಮೂರು ದಿನಗಳಿಗೊಮ್ಮೆ ನೀರು ಬಿಟ್ಟರೆ ಅದೇ ಪುಣ್ಯ. 600 ಅಡಿಗಿಂತಲೂ ಹೆಚ್ಚಿಗೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದೇ ರೈತರು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಮೊದಲೇ ಈ ಪ್ರದೇಶ ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ಕೊರತೆಯಿಂದಾಗಿ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿ ಆವರಣದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ದಿನಪೂರ್ತಿ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘ಕೋಡಿಕೊಪ್ಪಲು ಗ್ರಾಮದಲ್ಲಿ ಕೊರೆಸಿರುವ ಕೊಳವೆಬಾವಿಯಿಂದ ನೀರು ಪೂರೈಕೆಯಾಗುತ್ತಿತ್ತು. ಆದರೆ, ಇತ್ತೀಚೆಗೆ ಎರಡೂ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. ನೀರಿನ ರಭಸ ಕ್ಷೀಣಿಸಿದೆ. ಆದರೂ ಸಾರ್ವಜನಿಕರಿಗೆ ನೀರಿಗಾಗಿ ಯಾವುದೇ ವ್ಯತ್ಯಾಸವಾಗದಂತೆ ಕ್ರಮ ವಹಿಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಹೇಳಿದರು.

ಗ್ರಾಮದಲ್ಲಿ ನೀರಿನ ಮಿನಿ ಟ್ಯಾಂಕ್‌ಗಳ ಅವಶ್ಯಕತೆ ಹೆಚ್ಚಿದೆ. ಸದ್ಯಕ್ಕೆ ಎರಡು ದೊಡ್ಡ ಟ್ಯಾಂಕ್‌ಗಳಿದ್ದರೂ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಜನಸಂಖ್ಯೆ ಹೆಚ್ಚಳವೂ ಪ್ರಮುಖ ಕಾರಣವಾಗಿದೆ.

ಹಲ್ಲೇಗೆರೆ ಗ್ರಾಮ ಪಂಚಾಯಿತಿ ಯಲ್ಲೂ ಕುಡಿಯುವ ನೀರಿನದ್ದೇ ಸಮಸ್ಯೆ. ಕೊಳವೆಬಾವಿಗಳಲ್ಲಿ ನೀರಿಲ್ಲ. ಸಮರ್ಪಕ ನೀರು ಪೂರೈಸಲು ಕರೆಂಟ್ ಕೈ ಕೊಡುತ್ತಿದೆ. ದನಕರುಗಳ ಹಾಹಾ ಕಾರ ಹೇಳ ತೀರದಾಗಿದೆ. ಈ ಭಾಗದ ಮೋಳೆ, ದೊಡ್ಡಕೊತ್ತಗೆರೆ, ಚಾಕನಹಳ್ಳಿ, ಚಲ್ಲನಾಯಕನಹಳ್ಳಿ, ಶಿವಪುರ, ಅರಿಸಿನಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರವಿದೆ.

ಬಸರಾಳು ಮತ್ತು ದುದ್ದ ಹೋಬಳಿಯ ಹಲವು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳನ್ನು ದುರಸ್ತಿ ಮಾಡಬೇಕು ಹಾಗೂ ಹೊಸ ಘಟಕಗಳ ಸ್ಥಾಪನೆಯಾಗಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.

ವಿವಿಧ ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ:ದುದ್ದ ಹೋಬಳಿಯ ಹಲವು ಗ್ರಾಮಗಳಲ್ಲಿ ಕೆರೆಗಳು ಒಣಗಿವೆ. ಅಂತರ್ಜಲವೂ ಕುಸಿದಿದೆ. ಮುದಗಂದೂರು ಗ್ರಾಮ ಪಂಚಾಯಿತಿಯ 8 ಗ್ರಾಮಗಳಲ್ಲೂ ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರು ಸಿಕ್ಕರೆ ಸಾಕು ಎನ್ನುವಂತಾಗಿದೆ. ಗ್ರಾಮಸ್ಥರು ದೂರಕ್ಕೆ ತೆರಳಿ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ಇದೆ. ಈ ಭಾಗದ ಕೆರೆ, ಕಟ್ಟೆಗಳು ಖಾಲಿಯಾಗಿದ್ದು ಜನ, ಜಾನುವಾರು ಪರಿತಪಿಸು ವಂತಾಗಿದೆ. ಪುಟ್ಟಿಕೊಪ್ಪಲು, ಕುರಿಕೊಪ್ಪಲು, ಬೇವುಕಲ್ಲು, ಹಟ್ನ ಭಾಗದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಜನರು ನೀರಿಗಾಗಿ ಹಪಹಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT