ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾದರೂ ಬಗೆಹರಿಯದ ನೀರಿನ ಸಮಸ್ಯೆ

ವಾಯಿದೆಯಲ್ಲೇ ಕಾಲ ದೂಡುತ್ತಿರುವ ಜಲ ಮಂಡಳಿ, ನಗರದ ಜನರಿಗೆ ಟ್ಯಾಂಕರ್‌ ನೀರೇ ಗತಿ
Last Updated 14 ಜೂನ್ 2021, 5:14 IST
ಅಕ್ಷರ ಗಾತ್ರ

ಮಂಡ್ಯ: ‘ಮಂಡ್ಯದವರಿಗೆ ನೀರಿಗೇನು ಬರ’ ಎನ್ನುವ ಮಾತು ಸಾಮಾನ್ಯ. ಆದರೆ, ಬೆಂಗಳೂರು– ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗೆ ಹಾನಿ ಉಂಟಾಗಿದೆ. ಒಂದು ತಿಂಗಳಿನಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಟ್ಯಾಂಕರ್‌ನಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

ನಗರಕ್ಕೆ ನೀರು ಸರಬರಾಜು ಮಾಡುವ ಮೊದಲ ಹಂತದ ಕೊಳವೆ ಮಾರ್ಗದಲ್ಲಿ (ಕೋಡಿಶೆಟ್ಟಿಪುರ ಸಮೀಪದ ಹೆದ್ದಾರಿಯ ಫ್ಲೈ ಓವರ್‌ ಬ್ರಿಡ್ಜ್‌ ಕೆಳಗೆ ಹಾದು ಹೋಗಿರುವ ಕೊಳವೆಗೆ ಹಾನಿಯಾಗಿದ್ದು, ಗಣನೀಯ ಪ್ರಮಾಣದಲ್ಲಿ ನೀರು ಸೋರುವಿಕೆ ಕಂಡು ಬಂದಿದೆ) ಒಂದು ತಿಂಗಳಿನಿಂದಲೂ ದುರಸ್ತಿ ಕಾರ್ಯ ಮಾಡುತ್ತಿದ್ದು, ಸಮಸ್ಯೆ ಬಗೆಹರಿದಿಲ್ಲ.

ಹೆದ್ದಾರಿ ನಿರ್ಮಾಣದ ವೇಳೆ ಪೈಪ್‌ಲೈನ್‌ ಗಮನಿಸದೆ ಮಾಡಿದ ಅವೈಜ್ಞಾನಿಕ ಕಾಮಗಾರಿಯಿಂದ ಪೈಪ್‌ಲೈನ್‌ ಒಡೆದಿದ್ದು, ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಕಂಪನಿಯ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ, ಅದನ್ನು ಸರಿಪಡಿಸಲಾಗುವುದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಕುವೆಂಪು ನಗರ, ನೆಹರೂ ನಗರ, ಗಾಂಧಿನಗರ, ಗುತ್ತಲು, ತಾವರೆಗೆರೆ, ಹಾಲಹಳ್ಳಿ, ಹೊಸಹಳ್ಳಿ, ಬೀಡಿ ಕಾರ್ಮಿಕರ ಕಾಲೊನಿ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ, ಕಲ್ಲಹಳ್ಳಿ, ಸುಭಾಷ್‌ನಗರ, ಸೇರಿದಂತೆ ನಗರದ 35 ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಟ್ಯಾಂಕರ್‌ನಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಟ್ಯಾಂಕರ್‌ ಬಂದ ವೇಳೆಯಲ್ಲಿ ನೀರಿನ ಸಂಗ್ರಹಣೆಗೆ ಜನ ಮುಗಿ ಬಿದ್ದಿದ್ದಾರೆ.

ಒಬ್ಬರಿಗೆ ಕೆಲವೇ ಬಿಂದಿಗೆಗಳ ನೀರು ನೀಡಲಾಗುತ್ತಿದ್ದು, ವಾರ ಪೂರ್ತಿ ಇದನ್ನು ನಿಭಾಯಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಅಕ್ಕ–ಪಕ್ಕದಲ್ಲಿ ಅಥವಾ ಬೀದಿಯಲ್ಲಿ ಬೋರ್‌ವೆಲ್‌ ಇರುವವರ ಬಳಿ ನೀರನ್ನು ಪಡೆಯುತ್ತಿದ್ದು, ಅವರೂ ಕೊಡದಿದ್ದರೆ ದುಡ್ಡುಕೊಟ್ಟು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮನೆ ಚಿಕ್ಕದು. ನೀರು ಸಂಗ್ರಹಣೆಗೆ ಅಗತ್ಯ ಸೌಲಭ್ಯಗಳಿಲ್ಲ. ಈಗ ವಾರಕ್ಕೊಮ್ಮೆ ಟ್ಯಾಂಕರ್‌ನಲ್ಲಿ ನೀರು ಕೊಡುತ್ತಿದ್ದು, ಅಡುಗೆಗೆ ಸಾಕಾದರೆ, ನಿತ್ಯದ ಬಳಕೆಗೆ ಪರದಾಡುವಂತಾಗಿದೆ ಎಂದು ನೆಹರೂ ನಗರದ ನಿವಾಸಿ ಶಾರದಮ್ಮ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT