ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳ ಅಹೋರಾತ್ರಿ ಧರಣಿ ಆರಂಭ

ಕಳಪೆ ಕಾಮಗಾರಿ ಆರೋಪ; ಕೂಡಲೇ ನಿವಾಸಿಗಳಿಗೆ ಮನೆ ಹಂಚಿಕೆ ಮಾಡಲು ಒತ್ತಾಯ
Last Updated 23 ಸೆಪ್ಟೆಂಬರ್ 2020, 14:43 IST
ಅಕ್ಷರ ಗಾತ್ರ

ಮಂಡ್ಯ: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಗರದ ಹಾಲಹಳ್ಳಿಯಲ್ಲಿ ಕೊಳೆಗೇರಿ ಜನರಿಗಾಗಿ ನಿರ್ಮಿಸಿರುವ ಮನೆಗಳ ಕಾಮಗಾರಿ ಕಳಪೆಯಾಗಿದೆ. ಗುಣಮಟ್ಟ ಕಾಮಗಾರಿ ಮಾಡಿ ನಿವಾಸಿಗಳಿಗೆ ಮನೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕೊಳೆಗೇರಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹಾಲಹಳ್ಳಿ ಕೊಳೆಗೇರಿಯಲ್ಲಿ 712 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಮಳೆ ಬಂದರೆ ಕೊಳಚೆ ನೀರು ಶೆಡ್‌ಗಳಿಗೆ ನುಗ್ಗಿ ಇಡೀ ರಾತ್ರಿ ಜಾಗರಣೆ ಇರುವಂತಾಗಿದೆ. ಸೂಕ್ತ ಸೂರು ಇಲ್ಲದೆ ಕೊಳಚೆಯ ನಡುವೆಯೇ ಜೀವನ ನಡೆಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

2015ರಲ್ಲಿ ಅಂದಿನ ವಸತಿ ಸಚಿವರಾಗಿದ್ದ ಅಂಬರೀಷ್‌ ಅವರು 712 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಒಂದು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದರು. ಆದರೆ 5 ವರ್ಷ ಕಳೆದರೂ ಮನೆ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿಯವರೆಗೆ 632 ಮನೆಗಳನ್ನು ಮಾತ್ರ ನಿರ್ಮಾಣ ಮಾಡಿದ್ದು, ಇನ್ನೂ 80 ಮನೆಗಳನ್ನು ಕಟ್ಟಲು ಪ್ರಾರಂಭಿಸಿಲ್ಲ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಜಿ+1 ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ಯಾವುದೇ ಕಾರಣಕ್ಕೂ ಜಿ+2 ಕಾಮಗಾರಿ ಮಾಡಬಾರದು. ಹೊಸದಾಗಿ ನಿರ್ಮಿಸುತ್ತಿರುವ ಮನೆಗಳ ಹತ್ತಿರ ರಸ್ತೆ, ಚರಂಡಿ, ಬೀದಿ ದೀಪ ಅಳವಡಿಸಿ ಮೂಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಹಾಲಹಳ್ಳಿ ಕೊಳೆಗೇರಿಗೆ ಸೇರಿದ ಸರ್ವೆ ನಂಬರ್‌ 14 ಮತ್ತು 16ರಲ್ಲಿನ 16 ಎಕರೆ 8 ಗುಂಟೆ ಭೂಮಿ ಅಳತೆ ಮಾಡಿಸಿ ಯಾರೂ ಅತಿಕ್ರಮಿಸದಂತೆ ಕ್ರಮ ಕೈಗೊಳ್ಳಬೇಕು. ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದಿದ್ದರೂ ಫಲಾನುಭವಿಗಳ ಕಂತಿನ ಹಣ ಕಟ್ಟಬೇಕು ಎಂದು ಒತ್ತಡ ತರುತ್ತಿದ್ದು, ಹಣವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.

ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಗಡು ಶೀಟ್‌ನಲ್ಲಿ ನಿರ್ಮಾಣ ಮಾಡಿಕೊಟ್ಟಿರುವ ಮನೆಗಳನ್ನು ಸರಿಪಡಿಸಿಕೊಡಬೇಕು. ಕೊರೊನಾ ಕಾರಣದಿಂದ ಕೊಳೆಗೇರಿ ಜನರಿಗೆ ಕೂಲಿ ಕೆಲಸ ಸಿಗದಂತಾಗಿದ್ದು, ಸರ್ಕಾರ ಆಹಾರ ಧಾನ್ಯ ವ್ಯವಸ್ಥೆ ಮಾಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಗೌರವ ಪೋಷಕ ಎಂ.ಬಿ.ಶ್ರೀನಿವಾಸ್ ಮಾತನಾಡಿ ‘ಸ್ಲಂನಲ್ಲಿ ನಿರ್ಮಿಸುತ್ತಿರುವ ಮನೆಗಳು ತೀರಾ ಕಳಪೆ ಮಟ್ಟದಿಂದ ಕೂಡಿದ್ದು, ಮಳೆ ಬಂದರೆ ಸೋರುತ್ತದೆ. ಅಲ್ಲದೆ ಇತರೆ ಕಾಮಗಾರಿಗಳೂ ಸಹ ಗುಣಮಟ್ಟದಿಂದ ಕೂಡಿಲ್ಲ. ಕೂಡಲೇ ಇವುಗಳನ್ನು ಸರಿಪಡಿಸಿ ಬಡವರ ಕಷ್ಟಕ್ಕೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಸೋಮಣ್ಣ, ಕಾರ್ಯಾಧ್ಯಕ್ಷ ಟಿ.ಆರ್.ಮುರುಳಿ, ಅಧ್ಯಕ್ಷ ಮುರುಗ, ಉಪಾಧ್ಯಕ್ಷ ಪೊನ್ನುಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌, ಕಾರ್ಯದರ್ಶಿ ಗುಂಡ, ಸಹ ಕಾರ್ಯದರ್ಶಿ ಕಾರ್ತಿಕ್‌ ಕುಮಾರ್‌, ಸಂಘಟನಾ ಕಾರ್ಯದರ್ಶಿ ಕುಮಾರ್‌, ಖಜಾಂಚಿ ಜೆ.ಪ್ರಶಾಂತ್‌, ಸಂಚಾಲಕ ಸತ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT