ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ: ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ- ಸಿಎಂ ಬೊಮ್ಮಾಯಿ ಪರೋಕ್ಷ ಎಚ್ಚರಿಕೆ

Last Updated 5 ಜನವರಿ 2022, 12:44 IST
ಅಕ್ಷರ ಗಾತ್ರ

ನಾಗಮಂಗಲ: 'ಕೋವಿಡ್ ಕಾನೂನು ಪಾಲನೆ ಮಾಡುವುದು, ಬಿಡುವುದು ಕಾಂಗ್ರೆಸ್‌ ಮುಖಂಡರಿಗೆ ಬಿಟ್ಟ ವಿಚಾರ. ಆದರೆ, ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಜರುಗಿಸಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು 'ಕೋವಿಡ್ ಗೂ ಒಂದು ಕಾನೂನು ಇದೆ, ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕು,

ಕೋವಿಡ್ ಕಾನೂನು ಪಾಲನೆ ಮಾಡಬೇಕು ಎಂಬುದು ನಮ್ಮ ಅಪೇಕ್ಷೆ. ಇಲ್ಲ, ನಾವು ತಿಳಿದದ್ದನ್ನೇ ಮಾಡುತ್ತೇವೆ ಎಂದರೆ ಜನರು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ' ಎಂದರು.

'ಕಾಂಗ್ರೆಸ್ ಮುಖಂಡರೂ ಸರ್ಕಾರ ಮಾಡಿದ್ದಾರೆ, ಹಲವು ಕಾನೂನು ಜಾರಿ ಮಾಡಿದ್ದಾರೆ, ಕಾನೂನು ಎಲ್ಲರಿಗೂ ಒಂದೆ‌. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಏನು ಬೇಕಾದರೂ ಮಾಡಬಹುದು, ಚಳವಳಿಯನ್ನೂ ಮಾಡಬಹುದು' ಎಂದರು.

'ಹಿಂದೆ 2 ಕೋವಿಡ್ ಅಲೆಗಳನ್ನು ನೋಡಿದ್ದೇವೆ. ಮಹಾರಾಷ್ಟ್ರ, ಗೋವಾದಲ್ಲಿ ಕೋವಿಡ್ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಕೆಲವು ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಕೋವಿಡ್ ಎಲ್ಲರಿಗೂ ಒಂದೇ, ಅದು ಪಕ್ಷಾಧಾರಿತವಾಗಿ ಬರುವುದಿಲ್ಲ. ಕೋವಿಡ್ ನಿಯಮ ಪಾಲಿಸುವುದು ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯವಾಗಬೇಕು' ಎಂದರು.

ಮಠಗಳು ವಿಜ್ಞಾನ ಕೇಂದ್ರವಾಗಲಿ: ಆದಿಚುಂಚನಗಿರಿ ಮಠದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು 'ಮಠಗಳು ವಿಜ್ಞಾನ ಕೇಂದ್ರಗಳಾಬೇಕು. ಮಠಾಧೀಶರು ವಿಜ್ಞಾನದತ್ತ ಚಿಂತಿಸಬೇಕು. ಜ್ಞಾನವು ವಿಜ್ಞಾನವಾಗಬೇಕು, ವಿಜ್ಞಾನ ತಂತ್ರಜ್ಞಾನವಾಗಬೇಕು, ತಂತ್ರಜ್ಞಾನ ತಂತ್ರಾಂಶದ ಜ್ಞಾನವಾಗಬೇಕು' ಎಂದರು.

'ಆದಿಚುಂಚನಗಿರಿ ಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರಕ್ಕೆ ಸರ್ಕಾರದಿಂದ ಸಕಲ‌ ಸೌಲಭ್ಯ ಒದಗಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT