ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ: ರೈತ ಮುಖಂಡ ಪ್ರಸನ್ನ

ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮುಖಂಡರ ಅಳಲು
Published 27 ಜುಲೈ 2023, 13:15 IST
Last Updated 27 ಜುಲೈ 2023, 13:15 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಜಮೀನು, ಮನೆ ಇದ್ದರೂ ಕೃಷಿ ಕೆಲಸದಲ್ಲಿ ತೊಡಗಿರುವ ಯುವ ರೈತರಿಗೆ ಹೆಣ್ಣು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಮುಖಂಡರಾದ ಪ್ರಸನ್ನ ಎನ್‌. ಗೌಡ, ನೆಲಮನೆ ಶಂಭುಗೌಡ ಇತರರು ಅಳಲು ತೋಡಿಕೊಂಡರು.

ತಾಲ್ಲೂಕಿನ ಆರತಿಉಕ್ಕಡ ಗ್ರಾಮದ ಅಹಲ್ಯಾದೇವಿ ದೇವಾಲಯದ ಬಳಿ ಗುರುವಾರ ನಡೆದ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳ ರೈತ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಈ ಸಮಸ್ಯೆ ವ್ಯಕ್ತಪಡಿಸಿದರು.

‘ಯುವ ರೈತರು ಐದು, ಆರು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದಾರೆ. ಕೆಲವರು ಹೆಣ್ಣು ಸಿಗದೆ ಹತಾಶರಾಗಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಹೆಣ್ಣು ಸಿಗದೇ ಇರುವುದಕ್ಕೆ ಹೆಣ್ಣು ಭ್ರೂಣ ಹತ್ಯೆಯೂ ಕಾರಣವಾಗಿದ್ದು, ಸರ್ಕಾರ ಅದನ್ನು ತಡೆಗಟ್ಟಬೇಕು. ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ ನೀಡಬೇಕು’ ಎಂದು ಒತ್ತಾಯಿಸಿದರು.

‘ರೈತ ಸಂಘಟನೆಯನ್ನು ಬಲಪಡಿಸಲು ಯುವ ಘಟಕ, ಮಹಿಳಾ ಘಟಕ, ಕಾರ್ಮಿಕ ಘಟಕಗಳನ್ನು ರಚಿಸಲು ಉದ್ದೇಶಿಸಲಾಗಿದೆ. ವಾರದಲ್ಲಿ ಒಂದು ದಿನ ತಾಲ್ಲೂಕು ಕೇಂದ್ರದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸುವ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್‌. ಗೌಡ ಹೇಳಿದರು.

ರೈತ ಸಂಘದ ಪಾಂಡವಪುರ ತಾಲ್ಲೂಕು ಘಟಕದ ಅಧ್ಯಕ್ಷ ಕೆನ್ನಾಳು ನಾಗರಾಜು ಮಾತನಾಡಿ, ‘ಗ್ರಾಮ ಘಟಕಗಳ ಪುನರ್‌ ರಚನೆಯಾಗಬೇಕು. ರೈತ ಸಂಘಟನೆಯಲ್ಲಿ ಇದ್ದವರು ಚದುರಿ ಹೋಗಿದ್ದು, ಪುನರ್‌ ಸಂಘಟನೆಗೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

ಮುಖಂಡರಾದ ಪಾಂಡು, ರಾಮದಾಸ್‌, ಕ್ಯಾತನಹಳ್ಳಿ ಗೌಡಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ ಮಾತನಾಡಿದರು.

ರೈತ ಸಂಘದ ಗೌರವಾಧ್ಯಕ್ಷ ಬಿ.ಎಸ್‌. ರಮೇಶ್‌, ಕಾರ್ಯದರ್ಶಿ ಶಂಕರೇಗೌಡ, ಜಿಲ್ಲಾ ಘಟಕದ ಖಜಾಂಚಿ ತಗ್ಗಹಳ್ಳಿ ಪ್ರಸನ್ನ, ಕೃಷಿಕ ಸಮಾಜ ನಿರ್ದೇಶಕ ಕಡತನಾಳು ಬಾಲಕೃಷ್ಣ, ದೊಡ್ಡಪಾಳ್ಯ ಜಯರಾಮೇಗೌಡ, ಡಿ.ಎಸ್‌. ಚಂದ್ರಶೇಖರ್‌, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಜಾಂ ರವಿಚಂದ್ರ, ಎಂ. ಚಂದ್ರಶೇಖರ್‌, ಶಿವಣ್ಣ, ಹೊನ್ನಯ್ಯ, ಎಣ್ಣೆಹೊಳೆ ಕೊಪ್ಪಲು ಮಂಜುನಾಥ್‌, ಕೂಡಲಕುಪ್ಪೆ ತಮ್ಮಣ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹೊಲ, ಮನೆ ಇದ್ದರೂ ಹೆಣ್ಣು ಕೊಡುವವರಿಲ್ಲ ರೈತರ ಕೈಹಿಡಿಯುವವರಿಗೆ ಪ್ರೋತ್ಸಾಹ ಧನ ನೀಡಿ ರೈತರ ಗ್ರಾಮ ಘಟಕ ಪುನರ್‌ ರಚನೆಯಾಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT