ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವ ಜಮೀರ್‌ ಅಹಮದ್‌

Published 30 ಜೂನ್ 2024, 15:14 IST
Last Updated 30 ಜೂನ್ 2024, 15:14 IST
ಅಕ್ಷರ ಗಾತ್ರ

ಮಂಡ್ಯ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯ ಅಗತ್ಯವಿಲ್ಲ’ ಎಂದು ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್‌ ಅಹಮದ್‌ ಖಾನ್ ಹೇಳಿದರು.

ನಗರದ ಬೀಡಿ ಕಾಲೊನಿಗೆ ಭಾನುವಾರ ಭೇಟಿ ನೀಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ‘ಚಂದ್ರಶೇಖರ ಸ್ವಾಮೀಜಿಯ ಅಭಿಪ್ರಾಯ ವೈಯಕ್ತಿಕವಾದುದು. ಸ್ವಾಮೀಜಿ ಅಭಿಪ್ರಾಯ ತಪ್ಪು ಅನ್ನೋಕೆ ಆಗಲ್ಲ. ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಎಂದು ತೀರ್ಮಾನ ಮಾಡಿ ಅಧಿಕಾರ ನೀಡಿದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲದ ಸಂದರ್ಭದಲ್ಲಿ ಚರ್ಚಿಸುವುದು ಅನಗತ್ಯ’ ಎಂದು ಹೇಳಿದರು.

ಸಿಎಂ ಸ್ಥಾನ ಕೊಡಿ ಎಂದು ಒಕ್ಕಲಿಗರು, ಲಿಂಗಾಯತರು, ದಲಿತರು ಕೇಳುತ್ತಾ ಇದ್ದಾರೆ. ಅವರು ಕೇಳುವುದರಲ್ಲಿ ತಪ್ಪೇನಿದೆ. ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹಾಕಿದ ಗೆರೆಯನ್ನ ನಾವ್ಯಾರು ದಾಟುವುದಿಲ್ಲ. ಏನೇ ಇದ್ದರೂ ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬಡವರಿಗೆ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡ ಜನರ ಬಗ್ಗೆ ಕಾಳಜಿ ಇರುವುದರಿಂದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಜೊತೆಗೆ ಮನೆಗಳನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಮೀನುಗಳನ್ನು ಸರ್ವೆ ಮಾಡುವ ಮೂಲಕ ಉಪನಗರ ನಿರ್ಮಾಣ ಮಾಡಿ ಬಡವರಿಗೆ ಮನೆ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಮುಡಾ ಅಧ್ಯಕ್ಷ ನಹೀಮ್, ನಗರಸಭೆ ಸದಸ್ಯರಾದ ಪೂರ್ಣಿಮಾ, ಶ್ರೀಧರ್, ಜಾಕೀರ್ ಪಾಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಎಚ್.ಕೆ. ರುದ್ರಪ್ಪ, ಮುನಾವರ್ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT