ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಚರಕ, ಕನ್ನಡಕ ಕದಿಯದಿರಿ

ಸರ್ವೋದಯ ಮೇಳದಲ್ಲಿ ನಟರಾಜ ಹುಳಿಯಾರ್‌ ಮನವಿ
Last Updated 14 ಫೆಬ್ರುವರಿ 2017, 7:02 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬೇಕಿದ್ದರೆ ಗಾಂಧಿ ವಿಚಾರ ಕದಿಯಿರಿ; ಗಾಂಧಿ ಚರಕ ಮತ್ತು ಅವರ ಕನ್ನಡಕ ಕದಿಯುವುದನ್ನು ನಿಲ್ಲಿಸಿ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನಟರಾಜ ಹುಳಿಯಾರ್‌ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಗಾಂಧಿ ಪ್ರಣೀತ ವಿಚಾರಧಾರೆ ಆಧಾರಿತ ಸರ್ವೋದಯ ಮೇಳದಲ್ಲಿ ‘ಗಾಂಧಿವಾದದ ವ್ಯಾಖ್ಯಾನಗಳು’ ಕುರಿತು ಅವರು ವಿಷಯ ಮಂಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಗಾಂಧೀಜಿ ಅವರ ಚರಕವನ್ನು ವಿಕೃತಿಗೊಳಿಸಿದ್ದಾರೆ. ಚರಕ ಎಂಬುದು ಕೇವಲ ಒಂದು ವಸ್ತುವಲ್ಲ; ಅದು ಗಾಂಧೀಜಿ ಅವರ ಸಮಗ್ರ ಚಿಂತನೆಯ ಪ್ರತಿರೂಪ. ಅದನ್ನು ಧ್ಯಾನ ಎನ್ನಬಹುದು. ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಬಿಂಬ ಎಂತಲೂ ಕರೆಯಬಹುದು. ಆದರೆ ಗಾಂಧಿ ಟೋಪಿ, ಚರಕ ಇತರ ಸಂಕೇತಗಳು ನಗೆಪಾಟಲಿಗೆ ಈಡಾಗುತ್ತಿವೆ ಎಂದರು.

ಸರ್ಕಾರದಿಂದ ಸಾಧ್ಯವಿಲ್ಲದೇ ಇರುವುದನ್ನು ಗಾಂಧೀಜಿ ಅವರ ಅನುಯಾಯಿಗಳು ಮಾಡಬಲ್ಲರು ಎನ್ನುವುದಕ್ಕೆ ಬೆಂಗಳೂರಿನ ಕಸ ವಿಲೇವಾರಿ ಸಂಬಂಧ ಎಚ್‌.ಎಸ್‌.ದೊರೆಸ್ವಾಮಿ ಅವರು ನಡೆಸಿದ ಹೋರಾಟವೇ ಸಾಕ್ಷಿ. ನರೇಂದ್ರ ಮೋದಿ ಅವರಿಗೆ ಗಾಂಧಿ ವಿಚಾರಗಳನ್ನು ಅನುಷ್ಠಾನಗೊಳಿಸಬೇಕು ಎಂಬ ನಿಜವಾದ ಆಸಕ್ತಿ ಇದ್ದರೆ ತಮ್ಮ ಮನ್‌ಕಿ ಬಾತ್‌ನಲ್ಲಿ ಅಸ್ಪೃಶ್ಯತೆ, ಅಸಮಾನತೆ, ನಿರುದ್ಯೋಗದ ಬಗ್ಗೆ ಗಟ್ಟಿ ದನಿಯಲ್ಲಿ ಪ್ರಸ್ತಾಪಿಸಬೇಕು. ತಾವು ಇಡುವ ಹೆಜ್ಜೆಯಿಂದ ಕಟ್ಟಕಡೆಯ ವ್ಯಕ್ತಿಗೆ ಪ್ರಯೋಜನ ಆಗುತ್ತದೆಯೆ ಎಂಬುದನ್ನು ಆಳುವವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಲಿ. ಹಿಂದೂ ಉಗ್ರವಾದದ ಪ್ರತಿನಿಧಿ ಗೋಡ್ಸೆ ಯಾರಿಗೂ ಮಾದರಿ ಆಗಬಾರದು ಎಂದರು.

ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರನ್ನು ವಿರುದ್ಧ ದಿಕ್ಕಿನಲ್ಲಿ ನೋಡುವುದು ಒಂದು ಫ್ಯಾಷನ್‌ ಆಗಿದೆ. ಇಬ್ಬರೂ ಅಹಿಂಸಾ ಚಳವಳಿಯನ್ನು ರೂಪಿಸಲು ಯತ್ನಿಸಿದರು. ಗಾಂಧೀಜಿ ದಂಡಿ ಸತ್ಯಾಗ್ರಹ ರೂಪಿಸಿದರೆ, ಅಂಬೇಡ್ಕರ್‌ ಮಹಾಡ್‌ ಚಳವಳಿ ರೂಪಿಸಿದರು. ಗಾಂಧೀಜಿ ಒತ್ತಾಸೆಯಿಂದಲೇ ವಿರೋಧ ಪಕ್ಷದಲ್ಲಿದ್ದ ಅಂಬೇಡ್ಕರ್‌ ಮಂತ್ರಿಯಾದರು. ಮುಂದಿನ ಜನ್ಮದಲ್ಲಿ ಭಂಗಿಯಾಗಿ ಹುಟ್ಟಲು ಬಯಸುವುದಾಗಿ ಗಾಂಧೀಜಿ ಹೇಳಿದ್ದರು ಎಂದು ಪ್ರಶ್ನೆಯೊಂದಕ್ಕೆ ನಟರಾಜ್‌ ಹುಳಿಯಾರ್‌ ಪ್ರತಿಕ್ರಿಯಿಸಿದರು.

ಆಫ್ರಿಕಾದಿಂದ ಬಂದ ಬಳಿಕ ಗಾಂಧೀಜಿ, ರೈತ, ಕಾರ್ಮಿಕ, ದಲಿತೋದ್ಧಾರ ಚಳವಳಿಗಳಲ್ಲಿ ಪಾಲ್ಗೊಂಡರು. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಈಗಲೂ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ವಿಜಯ್‌ ಮಲ್ಯ ಅವರಂತಹ ಕೈಗಾರಿಕೋದ್ಯಮಿಗಳ ಸಹಸ್ರಾರು ಕೋಟಿ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರನ್ನು ಕಡೆಗಣಿಸಿವೆ. ಗಾಂಧೀಜಿ ಅವರ ವಿಚಾರಧಾರೆಯ ಅಡಿಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಬೀಜ ಸತ್ಯಾಗ್ರಹ ಆರಂಭಿಸಿದ್ದರು. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಬೆಂಗಳೂರು ನಗರದಲ್ಲಿ ಈಗಲೂ ದಲಿತರಿಗೆ ಬಾಡಿಗೆ ಮನೆ ಸಿಗುತ್ತಿಲ್ಲ ‘ವೆಜ್‌ನವರಿಗೆ ಮಾತ್ರ’, ‘ಪ್ಯೂರ್‌ ವೆಜ್‌ನವರಿಗೆ ಮಾತ್ರ’ ಎಂಬ ಫಲಕ ನೇತು ಹಾಕಿರುತ್ತಾರೆ ಎಂದು ನೊಂದು ನುಡಿದರು.

* ಗಾಂಧೀಜಿ ಅವರಲ್ಲಿ ದೈವತ್ವ ಮತ್ತು ಹೆಣ್ತನ ಎರಡೂ ಇತ್ತು. ಹಾಗಾಗಿ, ಅವರ ವ್ಯಕ್ತಿತ್ವದಲ್ಲಿ ಮಾರ್ದವತೆ ಕಾಣುತ್ತಿತ್ತು. ಪ್ರತಿಯೊಬ್ಬನ ಅಂತರಂಗದಲ್ಲಿ ಶಕ್ತಿಯಿದೆ ಎಂಬುದನ್ನು ತೋರಿಸಿ ಕೊಟ್ಟಿದ್ದರು. ಅಹಿಂಸಾ ತತ್ವವನ್ನು ಸರ್ವಾಧಿಕಾರಿ ಧೋರಣೆ ಯ ಟ್ರಂಪ್‌ ಅಂತಹವರಿಗೆ ಹೇಳಿಕೊಡುವ ಅಗತ್ಯ ಬಂದಿದೆ.

ಪ್ರೊ.ನಟರಾಜ ಹುಳಿಯಾರ್‌, ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT