ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಜೆಡಿಎಸ್‌ ಭದ್ರಕೋಟೆ: ಪುಟ್ಟರಾಜು

Last Updated 21 ಮೇ 2017, 9:33 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆ ಜೆಡಿಎಸ್‌ ಭದ್ರಕೋಟೆ. ಎಲ್ಲ ಏಳು ಕ್ಷೇತ್ರಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.ನಗರದ ವಿಠ್ಠಲ ಸಮುದಾಯ ಭವನದಲ್ಲಿ  ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಅದಕ್ಕಾಗಿ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಪಕ್ಷ ಕಟ್ಟುವ ಕೆಲಸ ಕೈಗೊಳ್ಳಬೇಕು. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ದುಡಿಯಬೇಕು .

ಬೂತ್‌ ಮಟ್ಟದಲ್ಲಿ  ವಿವಿಧ ಕಮಿಟಿ ರಚನೆ ಮಾಡುವ ಮೂಲಕ ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವ ಕೆಲಸ ಮಾಡಲಾಗುವುದು. ಈಗಾಗಲೇ ಕೆ.ಆರ್. ಪೇಟೆ, ನಾಗಮಂಗಲ, ಪಾಂಡವಪುರ ವಿಧಾನಸಭಾ ಕ್ಷೇತ್ರದ ಸಭೆ ನಡೆಸಲಾಗಿದೆ. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ‘ ಕಾಂಗ್ರೆಸ್‌ ದುರಾಡಳಿತ ಹಾಗೂ ಬಿಜೆಪಿಯವರ ಒಳಜಗಳಗಳಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜೆಡಿಎಸ್‌ಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ಹೇಳಿದರು.

ಮಾಜಿ ಶಾಸಕರಾದ ಎಂ. ಶ್ರೀನಿವಾಸ್ , ಜಿ.ಬಿ. ಶಿವಕುಮಾರ್, ಪ್ರಭಾವತಿ ಜಯರಾಂ, ವೀಕ್ಷಕ ಪ್ರದೀಪ್‌ ಕುಮಾರ್,  ಡಿ. ರಮೇಶ್,  ಸಿದ್ದರಾಮೇಗೌಡ,  ಎಚ್.ಎನ್. ಯೋಗೇಶ್,  ಎನ್. ಶಿವಣ್ಣ, ಜಿ.ಪಂ. ಮಾಜಿ ಸದಸ್ಯ ಕೆ.ಎಸ್. ವಿಜಯಾನಂದ,  ಎಸ್.ಪಿ. ಗೌರೀಶ್ ಇತರರು ಹಾಜರಿದ್ದರು.

‘₹ 593 ಕೋಟಿ ಯೋಜನೆ: ಜನರಿಗೆ ಟೋಪಿ!’
ಮಳವಳ್ಳಿ:  ‘ಶಾಸಕ ನರೇಂದ್ರಸ್ವಾಮಿ ತಾವು ಮುಖ್ಯಮಂತ್ರಿಯ ಆಪ್ತರು ಎಂದು ಬಿಂಬಿಸಿಕೊಂಡು ಜೆಡಿಎಸ್‌ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಸಂಸದ ಪುಟ್ಟರಾಜು ಆರೋಪಿಸಿದರು.

ಪಟ್ಟಣದ ರೈತ ಸಭಾಂಗಣದಲ್ಲಿ ಶನಿವಾರ ನಡೆದ ಜೆಡಿಎಸ್ ಪಕ್ಷದ ಬೂತ್‌ಮಟ್ಟದ ಕಾರ್ಯಕರ್ತರ ಸಮಿತಿ ರಚನೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಥಳೀಯ ಹಾಗೂ ತಾಲ್ಲೂಕು ವ್ಯಾಪ್ತಿಗೆ ₹ 593 ಕೋಟಿ ಯೋಜನೆ ತಂದಿದ್ದೇನೆ ಎಂದು ಅವರು ಹೇಳಿಕೊಂಡಿರುವುದು ಟೋಪಿ ಹಾಕುವ ಕೆಲಸ’ ಎಂದು ಅವರು ಟೀಕಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ‘ಸ್ಥಳೀಯವಾಗಿ ನನ್ನ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರ ಮೇಲೆ ಕೆಲ ಮುಖಂಡರು, ಕಾರ್ಯಕರ್ತರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಈ ಗೊಂದಲಗಳನ್ನು ಸಂಸದ ಪುಟ್ಟರಾಜು, ಪಕ್ಷದ ವೀಕ್ಷಕರಾದ ಶ್ರೀಕಂಠೇಗೌಡ, ಪ್ರದೀಪ್‌ಕುಮಾರ್ ಅವರ ಜತೆ ಬಹಿರಂಗ ಸಭೆಯಲ್ಲೇ ಚರ್ಚಿಸಿ ಪಕ್ಷದ ಗೆಲುವಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ‘ಈ ತಿಂಗಳ ಒಳಗೆ ಒಂದು ಕ್ಷೇತ್ರ ವ್ಯಾಪ್ತಿಯಲ್ಲಿ 20 ಸಮಿತಿಗಳನ್ನು ರಚನೆ ಮಾಡಿ ಪಕ್ಷ ಸಂಘಟಿಸಬೇಕು’ ಎಂದು ತಿಳಿಸಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್ ಮಾತನಾಡಿದರು. ತಾಲ್ಲೂಕು ಘಟಕ ಅಧ್ಯಕ್ಷ ರವಿ, ಜಿ.ಪಂ. ಮಾಜಿ ಸದಸ್ಯ ಎಂ.ಸಿ.ವೀರೇಗೌಡ, ರಾಜಣ್ಣ, ದೊಡ್ಡಯ್ಯ, ಶಶಿಧರ್, ಪುಟ್ಟಬುದ್ಧಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT