ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಕಳಪೆ: ಲೋಕಾಯುಕ್ತ ಸಂಸ್ಥೆಯ ತಂಡ ಪರಿಶೀಲನೆ

Last Updated 15 ಜುಲೈ 2021, 8:41 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ನಡೆದಿರುವ ₹813 ಕೋಟಿ ವೆಚ್ಚದ ಹೇಮಾವತಿ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಕಳಪೆ ಯಾಗಿದೆ ಎಂಬ ರೈತ ಸಂಘದ ದೂರಿನ ಮೇರೆಗೆ ಲೋಕಾಯುಕ್ತ ಸಂಸ್ಥೆಯ ಪರಿಣತರ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

‘ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲ್ಲೂಕಿನ ವಿವಿಧ ಭಾಗಗಳಿಗೆ ನೀರುಣಿ ಸುವ ಈ ಮುಖ್ಯ ಕಾಲುವೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ನೂರಾರು ಕೋಟಿ ರೂಪಾಯಿ ಸಾರ್ವಜನಿಕರ ಹಣ ದುರುಪಯೋಗವಾಗಿದೆ’ ಎಂದು ತಾಲ್ಲೂಕು ರೈತ ಸಂಘದ ಮುಖಂಡರು ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಹೀಗಾಗಿ, ಸಂಸ್ಥೆಯ ಅಧಿಕಾರಿಗಳಾದ ಪ್ರಸಾದ್ ಮತ್ತು ನಿರಂಜನ್ ನೇತೃತ್ವದ ತಂಡ ತಾಲ್ಲೂಕಿನ ಹೇಮಾವತಿ ಕಾಲುವೆಯ 52ನೇ ಸರಪಳಿಯಿಂದ ನಾಲೆಗಳ ಮೇಲೆ ಸಂಚರಿಸಿ ಪರಿಶೀಲನೆ ನಡೆಸಿತು.

‘ಈ ಯೋಜನೆಯಡಿ ಚರಂಡಿ ನಿರ್ಮಾಣ, ಗಡಿ ಕಲ್ಲುಗಳ ಅಳವಡಿಕೆ, ಶಾಶ್ವತವಾದ ಬೆಂಚ್ ಮಾರ್ಕ್ ಕಲ್ಲುಗಳ ಅಳವಡಿಕೆ, ತಡೆಗೋಡೆ ರಕ್ಷಣಾ ಕಲ್ಲುಗಳ ಅಳವಡಿಕೆ ಸೇರಿದಂತೆ ಹತ್ತು ಹಲವು ಕಾಮಗಾರಿ ನಡೆಸಬೇಕಿತ್ತು. ಆದರೆ, ಕಾಮಗಾರಿ ನಡೆಸದೆಯೇ ₹11.65 ಕೋಟಿ ಬಿಲ್ ಮಾಡಿಕೊಳ್ಳಲಾಗಿದೆ. ಅದೇ ರೀತಿ ಕಾಲುವೆಯ ಲೈನಿಂಗ್ ಸೋಪಾನ ಕಟ್ಟೆ ನಿರ್ಮಾಣ, ಕಾಲುವೆ ಏರಿಯ ಮೇಲಿನ ರಸ್ತೆಗೆ ಗ್ರಾವೆಲ್ ಹಾಕುವುದು ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಸುಳ್ಳು ಲೆಕ್ಕ ತೋರಿಸಿ ಕೋಟ್ಯಂತರ ರೂಪಾಯಿ ಮೋಸ ಮಾಡಲಾಗಿದೆ’ ಎಂದು ರೈತ ಮುಖಂಡರು ಆರೋಪಿಸಿದ್ದರು.

ಪರಿಣತರ ತಂಡವು ಲೈನಿಂಗ್ ಕಾಮಗಾರಿ, ಗ್ರಾವೆಲ್ ಮಣ್ಣಿನ ಅವಾಂತರ, ಕಾಲುವೆ ಏರಿ ಮೇಲೆ ಗುಂಡಿ ಬಿದ್ದಿರುವುದನ್ನು ಪರಿಶೀಲಿಸಿತು. ಅದರ ಮಾದರಿಗಳನ್ನು ಸಂಗ್ರಹಿಸಿತು. ಮುಂದಿನ ಮೂರು ದಿನ ಪಾಂಡವಪುರ, ನಾಗಮಂಗಲ ತಾಲ್ಲೂಕಿನಲ್ಲಿರುವ ನಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.

ಹೇಮಾವತಿ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಕಾರ್ಯ ಪಾಲಕ ಎಂಜಿನಿಯರ್‌ ಶ್ರೀನಿವಾಸ್, ಎಂಜಿನಿಯರ್ ಗುರುಪ್ರಸಾದ್, ದೂರುದಾರ, ರೈತ ಮುಖಂಡ ಪಿ.ಬಿ.ಮಂಚನಹಳ್ಳಿ ನಾಗೇಗೌಡ, ಬಸ್ ಕೃಷ್ಣೇಗೌಡ, ಮಾಕವಳ್ಳಿ ರವಿ, ಎಲ್.ಬಿ.ಜಗದೀಶ್, ಹಿರೀಕಳಲೆ ಬಸವರಾಜು, ಮುದ್ದು ಕುಮಾರ್, ನೀತಿಮಂಗಲ ಮಹೇಶ್ ಇದ್ದರು.

ಗುತ್ತಿಗೆದಾರರ ಪರ ವಕಾಲತ್ತು: ರೈತರ ಆಕ್ರೋಶ
ಪರಿಣತರ ತಂಡದ ಪರಿಶೀಲನೆ ವೇಳೆ ಕೆಲವರು, ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಪರವಾಗಿ ಮಾತನಾಡಿದರು. ಅಲ್ಲದೆ, ದೂರು ಕೊಟ್ಟಿರುವ ರೈತ ಸಂಘದ ಕಾರ್ಯಕರ್ತರ ವಿರುದ್ಧವೂ ವಾಗ್ದಾಳಿ ನಡೆಸಿದರು.

‘ಕಾಲುವೆ ನಿರ್ಮಾಣದ ವೇಳೆ ಬಾರದ ನೀವು, ಈಗ ತನಿಖೆಯ ಹೆಸರಿನಲ್ಲಿ ಗುತ್ತಿಗೆದಾರರು, ಎಂಜಿನಿಯರ್‌ಗಳಿಗೆ ಕಿರುಕುಳ ನೀಡುತ್ತಿದ್ದೀರಿ’ ಎಂದು ದೂರಿದರು.

ಈ ವೇಳೆ, ಇವರ ವಿರುದ್ಧ ಸ್ಥಳೀಯ ರೈತರು ತಿರುಗಿಬಿದ್ದರು. ‘ಗಲಾಟೆ ಮಾಡುವ ಉದ್ದೇಶದಿಂದಲೇ ಇಲ್ಲಿಗೆ ಬಂದಿರುವವರನ್ನು ಹೊರಗೆ ಕಳುಹಿಸದಿದ್ದರೆ ಧರಣಿ ನಡೆಸುತ್ತೇವೆ’ ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.

ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಿದ ಅಧಿಕಾರಿಗಳು, ಪರಿಶೀಲನೆಯನ್ನು ಮುಂದುವರಿಸಿದರು. ಇಲ್ಲಿ ಆಗಿರುವ ಲೋಪಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT