ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಮೀನು ದಾರಿ ಸಮಸ್ಯೆ ಬಗೆಹರಿಸಿ’

Last Updated 16 ಆಗಸ್ಟ್ 2019, 15:46 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದ ರೈತರು ತಮ್ಮ ಜಮೀನುಗಳಿಗೆ ಹೋಗಲು ದಾರಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ರೈತ ಸಂಘದ ಜಂಟಿ ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.

‘ಜಮೀನುಗಳಿಗೆ ಹೋಗಲು ದಾರಿಯಿಲ್ಲದೇ ಹಳ್ಳಿಗಳಲ್ಲಿ ಹೊಡೆದಾಡುವ ಸ್ಥಿತಿ ನಿರ್ಮಾಣವಾಗಿದೆ. ದಾರಿ ಸಮಸ್ಯೆ ಬಗೆಹರಿಸುವಂತೆ ಹಿಂದಿನ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಹಶೀಲ್ದಾರರಿಗೆ ದಾರಿ ಮಾಡಿಕೊಡಲು ಅವಕಾಶ ನೀಡಿದರೆ ಸಾಕು. ತಹಶೀಲ್ದಾರರ ಆದೇಶದ ಮೇಲೆ ರೈತರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಶಿ ಕಲಾದಾಗಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ‘ರಾಜ್ಯದ ರೈತರ ಜಮೀನುಗಳನ್ನು ಬ್ರಿಟಿಷರ್ ಆಡಳಿತದಲ್ಲಿ ಸರ್ವೆ ಮಾಡಲಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಸರ್ವೆ ಕಾರ್ಯ ನಡೆದಿಲ್ಲ. 30 ವರ್ಷಕ್ಕೊಮ್ಮೆ ರಾಜ್ಯದ ಜಮೀನುಗಳನ್ನು ಸರ್ವೆ ಮಾಡಿ ಹೊಸ ಪಹಣಿ ಪೂರೈಸಬೇಕು ಎಂಬ ನಿಯಮವಿದೆ. ಹಳ್ಳಿಗಳಲ್ಲಿ ಗಡಿ ಗುರುತಿಗಾಗಿ ರೈತರು ತಮ್ಮ ತಮ್ಮಲ್ಲಿಯೇ ಕಚ್ಚಾಟ ಮಾಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಮಾತನಾಡಿದರು. ಸಿದ್ರಾಮ ಅಂಗಡಗೇರಿ, ಜಿ.ಎಸ್.ಇಂಗಳಗಿ, ಈರಣ್ಣ ದೇವರ ಗುಡಿ, ಶಾಂತಗೌಡ ಬಿರಾದಾರ, ಚಂದ್ರಾಮ ತೆಗ್ಗಿ, ಗೋಲ್ಲಾಳಪ್ಪ ಚೌಧರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT