ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆಗಳ ದುರಸ್ತಿಗೆ ಸೂಚನೆ

Last Updated 24 ಫೆಬ್ರುವರಿ 2018, 8:52 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ದುರಸ್ತಿಗೊಳಿಸಿ, ಅವುಗಳ ಭಾವಚಿತ್ರದೊಂದಿಗೆ ಫೆ.27ರೊಳಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಗರದಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮತಗಟ್ಟೆಗಳ ಪರಿಶೀಲನೆ ಮತ್ತು ದುರಸ್ತಿ, ಮತಗಟ್ಟೆಗಳ ಡಿಜಿಟಲ್ ನಕ್ಷೆ ಸೇರಿದಂತೆ ಪ್ರಮುಖ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಮತಗಟ್ಟೆಗಳ ದುರಸ್ತಿ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿರುವ ಬಗೆಗೆ ವಿಷಾದ ವ್ಯಕ್ತಪಡಿಸಿದ ಅವರು, ‘ಮತಗಟ್ಟೆಗೆ ಗುರುತಿಸಿದ ಕಟ್ಟಡದ ಬಾಗಿಲು, ಕಿಟಕಿ ದುರಸ್ತಿ ಪಡಿಸಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

‘ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಮತಗಟ್ಟೆಗಳನ್ನು ನಗರಸಭೆ ಆಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ದುರಸ್ತಿ ಮಾಡಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಆರು ಹೋಬಳಿ ಇವೆ. ಹೋಬಳಿವಾರು ಮತಗಟ್ಟೆಗಳ ಪರಿಶೀಲನೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಮತದಾನ ನಿಗದಿಪಡಿಸಿದ ಒಂದು ವಾರ ಮುಂಚಿತವಾಗಿ ಪ್ರತಿಯೊಂದು ಮತಗಟ್ಟೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿ ಅನುಮತಿಯಿಲ್ಲದೇ ದೀರ್ಘ ರಜೆಯ ಮೇಲೆ ಹೋಗಬಾರದು. ಕೇಂದ್ರ ಸ್ಥಾನ ಬಿಡಬಾರದು’ ಎಂದು ಹೇಳಿದರು.

‘ಯಾವುದೇ ಸಮಯದಲ್ಲಿ ಚುನಾವಣಾ ಕಾರ್ಯಕ್ಕೆ ನೇಮಕ ಮಾಡಲಾಗುವುದು. ಆದ್ದರಿಂದ ಅಧಿಕಾರಿಗಳು ಜಾಗರೂಕರಾಗಿರಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಡಿ.ಷಣ್ಮುಖ, ಉಪ ವಿಭಾಗಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT