ಬುಧವಾರ, ಸೆಪ್ಟೆಂಬರ್ 18, 2019
28 °C
ಸತತ ಮಳೆಗೆ ಭಾರಿ ಹಾನಿ; ಸಂಕಷ್ಟದಲ್ಲಿ ಮೈಸೂರು ಜಿಲ್ಲೆಯ 450ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು

950ಕ್ಕೂ ಹೆಚ್ಚು ಶಾಲಾ ಕೊಠಡಿಗಳಿಗೆ ಹಾನಿ

Published:
Updated:
Prajavani

ಮೈಸೂರು: ಆಗಸ್ಟ್‌ ಮೊದಲ ವಾರದ ಕೊನೆ, ಎರಡನೇ ವಾರದಲ್ಲಿ ಜಿಲ್ಲೆಯಾದ್ಯಂತ ಸುರಿದ ‘ಆಶ್ಲೇಷ’ ಮಳೆಗೆ 450ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಹಾನಿಯಾಗಿದೆ.

ಹಲವು ಶಾಲೆಗಳಲ್ಲಿ ಹಳೆಯ ಒಂದೆರೆಡು ಕೊಠಡಿಗೆ ಹಾನಿಯಾಗಿದ್ದರೆ, ಕೆಲವು ಶಾಲೆಗಳಲ್ಲಿ ಐದಾರು ಕೊಠಡಿ ಶಿಥಿಲಗೊಂಡಿವೆ. ಕೊಠಡಿಗಳ ಮೇಲ್ಛಾವಣಿಗೆ ಹಾನಿಯಾಗಿದ್ದು, ಹೆಂಚುಗಳು ಹೊಡೆದಿವೆ. ರೀಪರ್ ಮುರಿದಿವೆ. ತೊಲೆಗಳು ಮುರಿದು ಬಿದ್ದಿವೆ. ಇಂತಹ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕೂತು ಪಾಠ ಕೇಳಲು ಹಿಂಜರಿಯುತ್ತಿದ್ದಾರೆ. ಸೋನೆ ಮಳೆ ಸುರಿದರೂ ಮಕ್ಕಳು ಕೊಠಡಿಯೊಳಗೆ ತೊಯ್ಯುತ್ತಿದ್ದಾರೆ.

ಇನ್ನೂ ಕೆಲವು ಶಾಲೆಗಳ ಕೊಠಡಿಗಳ ಗೋಡೆಗಳು ಸತತ ಮಳೆಗೆ ಶಿಥಿಲಗೊಂಡು ಧರೆಗುರುಳಿವೆ. ಹಲವು ಶಾಲೆಗಳ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನವೀಯುತ್ತಿವೆ. ನೆಲದ ಫ್ಲೋರಿಂಗ್ ಹಾಳಾಗಿದೆ. ಆರ್‌ಸಿಸಿಯೂ ಸೋರುತ್ತಿದೆ. ಕಿಟಕಿ–ಬಾಗಿಲುಗಳಿಗೂ ಹಾನಿಯಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಯಂತೆ ಜಿಲ್ಲೆಯಲ್ಲಿ ಅಂದಾಜು ಸಮೀಕ್ಷೆ ನಡೆದಿದೆ.

‘ಪ್ರತಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಿಂದ ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಳೆಯಿಂದ ಹಾನಿಗೀಡಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಲ್ಲಾ ಶಾಲೆಗಳ ಮಾಹಿತಿಯನ್ನು ಕ್ರೋಢೀಕರಿಸಿ, ವರದಿಯೊಂದನ್ನು ಸಿದ್ಧಪಡಿಸಿ, ಅದನ್ನು ದೃಢೀಕರಿಸಿ ನಮ್ಮ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ. ನಾವೂ ಸಹ ಎಲ್ಲಾ ವಲಯದ ವರದಿಗಳನ್ನು ಒಟ್ಟುಗೂಡಿಸಿ, ಸಮಗ್ರ ವರದಿಯನ್ನು ಇಲಾಖೆಯ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ, ಜಿಲ್ಲಾ ಪಂಚಾಯಿತಿ ಸಿಇಒಗೆ ಶನಿವಾರ ಇ ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದೇವೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಿನ ಅಂದಾಜು ಸಮೀಕ್ಷೆಯಂತೆ 450ಕ್ಕೂ ಹೆಚ್ಚು ಶಾಲೆಗಳ 950ಕ್ಕೂ ಹೆಚ್ಚು ಕೊಠಡಿಗಳಿಗೆ ಮಳೆಯಿಂದ ಹಾನಿಯಾಗಿದೆ. ಪ್ರತಿ ಕೊಠಡಿಯ ದುರಸ್ತಿಗೆ ಸರಾಸರಿ ₹ 2 ಲಕ್ಷ ಅನುದಾನ ಕೊಡುವ ಅವಕಾಶ ಇಲಾಖೆಯಲ್ಲಿದ್ದು, ತುರ್ತು ದುರಸ್ತಿಗೆ ಪ್ರಸ್ತಾವನೆಯ ಪ್ರತಿಯನ್ನು ಸೋಮವಾರ ಇಲಾಖೆಯ ಆಯುಕ್ತರಿಗೆ ಕಳುಹಿಸಿಕೊಡುವೆ’ ಎಂದು ಅವರು ಹೇಳಿದರು.

***

ಎಚ್‌.ಡಿ.ಕೋಟೆ, ನಂಜನಗೂಡು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಹೆಚ್ಚು ಹಾನಿಯಾಗಿದೆ. ಹೆಚ್ಚು ಹಾನಿಯಾದೆಡೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಲಾಗಿದೆ

ಡಾ.ಪಾಂಡುರಂಗ, ಡಿಡಿಪಿಐ

Post Comments (+)