ಎಲ್ಲ ವೃತ್ತಿಗಳನ್ನು ಸಮಾನವಾಗಿ ಕಾಣಬೇಕು: ಜಗ್ಗಿ ವಾಸುದೇವ್‌

7

ಎಲ್ಲ ವೃತ್ತಿಗಳನ್ನು ಸಮಾನವಾಗಿ ಕಾಣಬೇಕು: ಜಗ್ಗಿ ವಾಸುದೇವ್‌

Published:
Updated:
Deccan Herald

ಮೈಸೂರು: ಎಲ್ಲ ವೃತ್ತಿಗಳನ್ನು ಸಮಾನ ರೀತಿಯಲ್ಲಿ ಕಂಡರೆ ಇಂದಿನ ಸಮಾಜ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ ಎಂದು ಈಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ಆರ್‌ಐಇ) ಶನಿವಾರ ಏರ್ಪಡಿಸಿದ್ದ ‘ಯೂತ್‌ ಅಂಡ್‌ ಟ್ರುತ್‌’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಸಭಿಕರಿಂದ ತಮ್ಮತ್ತ ತೂರಿಬಂದ ಪ್ರಶ್ನೆಗಳಿಗೆ ಮನಮುಟ್ಟುವ ರೀತಿಯಲ್ಲಿ ಉತ್ತರಿಸಿದರು.

ವೈದ್ಯ, ಎಂಜಿನಿಯರ್‌, ಎಲೆಕ್ಟ್ರಿಷಿಯನ್‌, ಬಡಗಿ... ಹೀಗೆ ಎಲ್ಲ ವೃತ್ತಿಗಳೂ ನಮ್ಮ ಉಳಿವಿಗೆ ಬೇಕು. ಕೆಲವು ವೃತ್ತಿಗಳನ್ನು ದೈವ ಸಮಾನವಾಗಿ ಕಂಡು, ಮತ್ತೆ ಕೆಲವನ್ನು ಕೀಳಾಗಿ ಕಾಣಬಾರದು. ಇಂದು ಬಡಗಿಯೊಬ್ಬ ವೈದ್ಯನಿಗಿಂತ ಹೆಚ್ಚು ಹಣ ಸಂಪಾದಿಸುತ್ತಿದ್ದಾನೆ. ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಇಂದು ಬಹುತೇಕ ಮಕ್ಕಳ ಶಿಕ್ಷಣ ಕೇವಲ ‘ಸಾಮಾಜಿಕ ವಿದ್ಯಮಾನ’ವಾಗಿ ಬದಲಾಗಿದೆ. ಜ್ಞಾನಾರ್ಜನೆಯ ಮಾಧ್ಯಮವಾಗಿಲ್ಲ. ನನ್ನ ನೆರೆಮನೆಯವನ ಮಗ ವೈದ್ಯನಾಗಿರುವುದಿಂದ ನನ್ನ ಮಗನೂ ವೈದ್ಯನಾಗಬೇಕು ಎಂಬ ಭಾವನೆ ಹೆಚ್ಚಿನ ಪೋಷಕರಲ್ಲಿದೆ. ಈ ಧೋರಣೆ ಬದಲಾಗಬೇಕು ಎಂದು ಕಿವಿಮಾತು ಹೇಳಿದರು.

‘ನಾನೇಕೆ ಶಾಲೆಗೆ ಹೋಗುತ್ತಿದ್ದೇನೆ’ ಎಂಬ ಪ್ರಶ್ನೆ ವಿದ್ಯಾರ್ಥಿಯಾಗಿದ್ದಾಗ ನನಗೆ ಕಾಡಿತ್ತು. ಆ ಪ್ರಶ್ನೆಗೆ ಯಾರೂ ಸರಿಯಾದ ಉತ್ತರ ನೀಡಿರಲಿಲ್ಲ. ಇಂದಿನ ಶೇ 30ರಿಂದ 40ರಷ್ಟು ಮಕ್ಕಳಿಗೆ ತಾವೇಕೆ ಶಾಲೆಗೆ ಹೋಗುತ್ತಿದ್ದೇವೆ ಎಂಬುದೇ ತಿಳಿದಿಲ್ಲ ಎಂದರು.

ಇನ್ನೊಬ್ಬನಂತೆ ಜೀವಿಸಬೇಡಿ: ಹಣ ಗಳಿಕೆಯೇ ಇಂದಿನ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ. ಜೀವನೋಪಾಯಕ್ಕಾಗಿ ಹೇಗೆ ಹಣ ಸಂಪಾದಿಸುವಿ ಎಂದು ಬಹುತೇಕ ಹೆತ್ತವರು ತಮ್ಮ ಮಕ್ಕಳನ್ನು ಕೇಳುತ್ತಾರೆ. ಈ ಭೂಮಿಯಲ್ಲಿ ಜೀವಿಸುವುದು ಸವಾಲಿನ ಸಂಗತಿಯೇ ಅಲ್ಲ. ಆದರೆ ಇನ್ನೊಬ್ಬನನ್ನು ನೋಡಿ ಆತನಂತೆ ಜೀವಿಸಬೇಕು ಎಂದು ಭಾವಿಸಿದರೆ ನಿಮ್ಮ ಸಮಸ್ಯೆಗೆ ಕೊನೆ ಎಂಬುದಿರುವುದಿಲ್ಲ ಎಂದು ನುಡಿದರು.

ಮನುಷ್ಯನ ಹುಟ್ಟು: ಮನುಷ್ಯನು ದೇವನ ಸೃಷ್ಟಿ ಎಂದು ಧರ್ಮಗಳು ಹೇಳುವುದಾದರೆ, ಮಂಗನಿಂದ ಮಾನವ ಎಂದು ವಿಜ್ಞಾನ ಹೇಳುತ್ತದೆ. ಈ ಎರಡು ವಾದಗಳಲ್ಲಿ ಯಾವುದನ್ನು ನಂಬಬೇಕು ಎಂಬ ಪ್ರಶ್ನೆಗೆ, ಮನಸ್ಸು, ಬುದ್ಧಿ ಇನ್ನಷ್ಟು ವಿಕಸನ ಆಗಬೇಕು ಮತ್ತು ಜೀವನದಲ್ಲಿ ‘ಫಾರ್ವರ್ಡ್‌ ಗೇರ್‌’ ಹಾಕಿ ಮುಂದೆ ಹೋಗಲು ಬಯಸುವುದಾದರೆ ಡಾರ್ವಿನನ ವಿಕಾಸವಾದವನ್ನು ನಂಬಿ. ‘ರಿವರ್ಸ್‌ ಗೇರ್‌’ ಹಾಕಿ ಹೋಗುವುದಾದರೆ ಧರ್ಮ ಹೇಳುವುದನ್ನು ನಂಬಿ ಎಂದು ಉತ್ತರಿಸಿದರು.

ಸಂತಸ ಮತ್ತು ದುಃಖ ಈ ಎರಡರಲ್ಲಿ ಎಲ್ಲರೂ ಸಂತಸವನ್ನೇ ಅಯ್ಕೆ ಮಾಡುತ್ತಾರೆ. ನೀವು ಸಂತಸದ ಉನ್ನತ ಸ್ಥಿತಿಯಲ್ಲಿದ್ದಾಗ ಮಾತ್ರ ನಿಮ್ಮ ದೇಹ ಮತ್ತು ಮನಸ್ಸು ಚೆನ್ನಾಗಿ ಕೆಲಸ ನಿರ್ವಹಿಸಬಲ್ಲದು ಎಂದರು.

ಬಡ್ತಿ ಮೀಸಲಾತಿ ಬಗ್ಗೆ ಎದುರಾದ ಪ್ರಶ್ನೆಗೆ, ಶಿಕ್ಷಣ, ಉದ್ಯೋಗದಲ್ಲಿ ಆರಂಭಿಕ ಹಂತದಲ್ಲಿ ಮೀಸಲಾತಿ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಬಡ್ತಿ ನೀಡುವ ವೇಳೆ ಅವರ ಸಾಮರ್ಥ್ಯವನ್ನು ಅಳೆಯಬೇಕೇ ಹೊರತು ಮೀಸಲಾತಿ ನೀಡುವುದು ಸರಿಯಲ್ಲ ಎಂದು ಹೇಳಿದರು.

‘45 ವರ್ಷಗಳ ಬಳಿಕ ಬಂದಿದ್ದೇನೆ’
‘ಸುಮಾರು 45 ವರ್ಷಗಳ ಬಿಡುವಿನ ಬಳಿಕ ಈ ಕ್ಯಾಂಪಸ್‌ಗೆ ಬಂದಿದ್ದೇನೆ. ನಾನು ಹಲವು ಶಾಲೆಗಳಲ್ಲಿ ಕಲಿತಿದ್ದೇನೆ. ಯಾವುದೇ ಶಾಲೆ ಕೂಡಾ ನನ್ನನ್ನು ಒಂದು ವರ್ಷಕ್ಕಿಂತ ಹೆಚ್ಚು ಇಟ್ಟುಕೊಳ್ಳಲಿಲ್ಲ. ಆದರೆ ಈ ಶಾಲೆಯಲ್ಲಿ 2 ವರ್ಷ ಇದ್ದೆ’ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ತಾವು ಕಲಿತ ದಿನಗಳನ್ನು ನೆನಪಿಸಿಕೊಂಡರು.

‘ಇಲ್ಲಿನ ವಿಶಾಲ ಪ್ರದೇಶ, ಬೃಹತ್‌ ಮರಗಳು, ಬೋಗಾದಿ ಕೆರೆಯನ್ನು ಇಷ್ಟಪಟ್ಟಿದ್ದೆ. ಅಗತ್ಯವಿದ್ದಾಗ ಮಾತ್ರ ಶಾಲೆಗೆ ಹೋಗುತ್ತಿದ್ದೆ. 38ಕ್ಕಿಂತ ಹೆಚ್ಚಿನ ಅಂಕಗಳನ್ನು ಒಮ್ಮೆಯೂ ಗಳಿಸಿರಲಿಲ್ಲ. ಈ ಶಾಲೆಯಲ್ಲಿ ಕಳೆದ ದಿನಗಳನ್ನು ಚೆನ್ನಾಗಿ ಆನಂದಿಸಿದ್ದೆ’ ಎಂದರು.

* ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ನನಗೆ ಅಗೌರವವಿಲ್ಲ. ಆದರೆ ಶಿಕ್ಷಣ ವ್ಯವಸ್ಥೆಯನ್ನು ನಾವು ನೋಡುವ ವಿಧಾನದಲ್ಲಿ ಬದಲಾವಣೆಯಾಗಬೇಕಿದೆ.
-ಜಗ್ಗಿ ವಾಸುದೇವ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !