ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆಯ ಅಪಾಯ

‘ಇಸ್ರೊ’ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ ಕುಮಾರ್ ಆತಂಕ
Last Updated 18 ಜೂನ್ 2019, 14:55 IST
ಅಕ್ಷರ ಗಾತ್ರ

ಮೈಸೂರು: ಕೃತಕ ಬುದ್ಧಿಮತ್ತೆಯು ದಿನೇ ದಿನೇ ಹೆಚ್ಚು ಪ್ರಗತಿ ಹೊಂದುತ್ತಿದ್ದು, ಮಾನವ ಬುದ್ಧಿಮತ್ತೆಗೆ ಸವಾಲೆಸೆಯುವ ಅಪಾಯವಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪದವೀಧರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರಂಭಿಕ ದಿನಗಳಲ್ಲಿ ರೊಬಾಟ್‌ಗಳು ಬಂದಾಗ ಅವನ್ನು ಕೇವಲ ಯಂತ್ರಗಳೆಂದು ಪರಿಭಾವಿಸಲಾಗಿತ್ತು. ಈಗ ಅವು ಕೇವಲ ಯಂತ್ರಗಳು ಮಾತ್ರವಲ್ಲ. ಅವು ಮಾನವರಂತೆಯೇ ಯೋಚಿಸಬಲ್ಲ, ಜ್ಞಾನವನ್ನು ಹೆಚ್ಚಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿವೆ ಎಂಬುದು ಸಾಬೀತಾಗಿದೆ. ಕೃತಕ ಬುದ್ಧಿಮತ್ತೆ ಈಗ ಕೇವಲ ಕಂಪ್ಯೂಟರ್‌ ಚಿಪ್ ಅಲ್ಲ; ಅದು ಜೀವಿಯಂತೆ. ಹಾಗಾಗಿ, ಅದು ಎಲ್ಲವನ್ನೂ ಹೊಸತಾಗಿ ಕಲಿತುಕೊಳ್ಳುತ್ತದೆ ಎನ್ನುವುದು ಈಗಿನ ಗ್ರಹಿಕೆ. ಹಾಗಾಗಿ, ಈ ವಿಚಾರವು ಈಗ ಮಾನವ ಜಗತ್ತಿನಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗಿಂತಲೂ ವೇಗವಾಗಿ ಗ್ರಹಿಸಬಲ್ಲದು, ಕಲಿತುಕೊಳ್ಳಬಲ್ಲದು. ಹಾಗಾಗಿ, ಬಿಳಿ ಕಾಲರ್‌ ಕೆಲಸ ಮಾಡುವ ಅನೇಕರು ಕೆಲಸ ಕಳೆದುಕೊಳ್ಳುವ ಚಿಂತೆಯಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಬುದ್ಧಿಗೆ ಹೆಚ್ಚು ಕೆಲಸವನ್ನು ನೀಡುವ ವೃತ್ತಿಗಳಲ್ಲಿ ಈ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಕ್ಷಣೆಗೆ ಹೆಚ್ಚಿನ ಆದ್ಯತೆ: ‘ಇಸ್ರೊ’ ಈಗ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ. ರಕ್ಷಣೆ ಎಂದಾಕ್ಷಣ ಕೇವಲ ಸೈನ್ಯ ಎಂದು ಭಾವಿಸುವಂತಿಲ್ಲ. ನಾಗರಿಕರನ್ನು ಹವಾಮಾನ ವೈಪರೀತ್ಯಗಳಿಂದ ರಕ್ಷಿಸುವುದೂ ಆದ್ಯತೆಯೇ. ಹಾಗಾಗಿಯೇ, ಈಚೆಗೆ ‘ಫೋನಿ’ ಚಂಡಮಾರುತ ಬಂದಿದ್ದಾಗ ಹೆಚ್ಚಿನ ಸಾವು – ನೋವುಗಳಾಗಲಿಲ್ಲ. ‘ಇಸ್ರೊ’ ಬಳಿ ಈಗ ಇಡೀ ಭಾರತದ ಚಿತ್ರವನ್ನು ಪ್ರತಿ 15 ನಿಮಿಷಕ್ಕೊಮ್ಮೆ ತೆಗೆಯುವ ತಂತ್ರಜ್ಞಾನವಿದೆ. ಹವಾಮಾನ ವೈಪರೀತ್ಯಗಳನ್ನು ಅವಲೋಕನ ಮಾಡುವುದು ಈಗ ಸುಲಭವಾಗಿದೆ. ಇದು ಜನರ ಅಮೂಲ್ಯ ಪ್ರಾಣ ಉಳಿಸಲು ಸಹಾಯಕಾರಿಯಾಗಿದೆ ಎಂದು ಹೇಳಿದರು.

‘ಇಸ್ರೊ’ ಈಗ ಹೆಚ್ಚು ಪ್ರಗತಿ ಸಾಧಿಸಿದೆ. ವಿವಿಧ ದೇಶಗಳ 299 ಕೃತಕ ಉಪಗ್ರಹಗಳನ್ನು ಈವರೆಗೆ ಉಡಾವಣೆ ಮಾಡಿದೆ. ಒಂದೇ ರಾಕೆಟ್‌ನಲ್ಲಿ 104 ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ವಿವಿಧ ಬಗೆಯ ರಾಕೆಟ್‌ಗಳ ನಿರ್ಮಾಣ ಮಾಡಬಲ್ಲ ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಈಗ ಭಾರತವೂ ಸೇರಿದೆ ಎಂದು ಅವರು ಶ್ಲಾಘಿಸಿದರು.

‘ಚಂದ್ರಯಾನ– 1’ ಯೋಜನೆ ಭಾರತದ ಅತಿ ದೊಡ್ಡ ಸಾಧನೆ. ಅಲ್ಲಿಯವರೆಗೂ ವಿವಿಧ ರಾಷ್ಟ್ರಗಳು ಚಂದ್ರನಲ್ಲಿಗೆ ರಾಕೆಟ್ ಉಡಾವಣೆ ಮಾಡಿದ್ದರೂ ಚಂದ್ರನಲ್ಲಿ ನೀರಿರುವ ವಿಚಾರವನ್ನು ಪತ್ತೆ ಮಾಡಿರಲಿಲ್ಲ. ಆದರೆ, ಭಾರತದ ಉಪಗ್ರಹವು ಅದನ್ನು ಪತ್ತೆ ಮಾಡಿತು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಟಿಎಂಇ ಟ್ರಸ್ಟ್‌ ಅಧ್ಯಕ್ಷ ಎಲ್.ಅರುಣ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಎಲ್‌.ಬಸವರಾಜು, ಖಜಾಂಚಿ ಆರ್‌.ವೀರೇಶ್‌, ಕಾರ್ಯದರ್ಶಿ ಕೆ.ಶಿವಶಂಕರ್‌, ಆಡಳಿತ ಮಂಡಳಿಯ ಸದಸ್ಯ ಸೈಯದ್ ಶಕೀಬ್‌ ಉರ ರೆಹಮಾನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT