ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಉಸಿರಾಟ ನೀಡಿ ಜೀವ ಉಳಿಸಿದ ವೈದ್ಯರು

ಶ್ವಾಸಕೋಶದಂತೆ ಕಾರ್ಯನಿರ್ವಹಿಸುವ ಸಾಧನ ಬಳಕೆ
Last Updated 22 ಮೇ 2019, 19:57 IST
ಅಕ್ಷರ ಗಾತ್ರ

ಮೈಸೂರು: ಶ್ವಾಸಕೋಶ ಸಂಪೂರ್ಣವಾಗಿ ವೈಫಲ್ಯಗೊಂಡು ನರಳುತ್ತಿದ್ದ ಮಳವಳ್ಳಿಯ ಭುಗತಹಳ್ಳಿ ಗ್ರಾಮದ ಸವಿತಾ ಎಂಬವರಿಗೆ ಕೃತಕ ಶ್ವಾಸಕೋಶ ಸಾಧನವನ್ನು ತಾತ್ಕಾಲಿಕವಾಗಿ ಅಳವಡಿಸುವ ಮೂಲಕ ಅಪೊಲೊ ಬಿಜಿಎಸ್‌ ಆಸ್ಪತ್ರೆಯ ವೈದ್ಯರು ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

‘ಎಚ್‌1ಎನ್‌1 ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ಸವಿತಾ ಅವರಿಗೆ ಉಸಿರಾಟದ ತೊಂದರೆಯಿತ್ತು. ಸತತ ಒಂದು ತಿಂಗಳ ಕಾಲ ‘ವೆಂಟಿಲೇಟರ್‌’ (ಉಸಿರಾಟ ಸಾಧನ) ನಲ್ಲಿ ಇರಿಸಿದರೂ ಚೇತರಿಕೆ ಕಾಣಲಿಲ್ಲ. ಹಾಗಾಗಿ, ಕೃತಕ ಶ್ವಾಸಕೋಶ ಸಾಧನ (ಎಕ್ಸ್‌ಸ್ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಟರ್) ಅಳವಡಿಸಿ ಚಿಕಿತ್ಸೆ ನೀಡಲಾಯಿತು’ ಎಂದು ತಜ್ಞವೈದ್ಯ ನಾಗೇಂದ್ರ ಪ್ರಕಾಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಶ್ವಾಸಕೋಶ ವೈಫಲ್ಯ ಪ್ರಕರಣಗಳಲ್ಲಿ ಸಾಮಾನ್ಯವಾಗಿ ‘ವೆಂಟಿಲೇಟರ್‌’ ಅಳವಡಿಸಿ ಚಿಕಿತ್ಸೆ ನೀಡಲಾಗುವುದು. ಆದರೆ, ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ಪ್ರಾಣಕ್ಕೆ ತೊಂದರೆಯಾಗುತ್ತದೆ. ಇದೇ ಪರಿಸ್ಥಿತಿಯಲ್ಲಿ ರೋಗಿಯಿದ್ದರು. ರೋಗಿಯ ಒಪ್ಪಿಗೆ ಪಡೆದು ಕೃತಕ ಶ್ವಾಸಕೋಶವನ್ನು ಅಳವಡಿಸಿದೆವು. ಒಟ್ಟು 50 ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು’ ಎಂದು ವಿವರಣೆ ನೀಡಿದರು.

‘ಶ್ವಾಸಕೋಶ ಮಾಡುವ ಕೆಲಸವನ್ನು ಈ ಸಾಧನ ಮಾಡುತ್ತದೆ. ಹೃದಯಕ್ಕೆ ಎರಡು ನಾಳಗಳನ್ನು ಜೋಡಿಸಲಾಗುತ್ತದೆ. ಕಲುಷಿತ ರಕ್ತವು ಒಂದು ನಾಳದಿಂದ ಸಾಧನದ ಒಳಗೆ ಬರುತ್ತದೆ. ಶುದ್ಧಗೊಂಡ ರಕ್ತವು ಸಾಧನದ ಮೂಲಕ ಹೃದಯವನ್ನು ಸೇರುತ್ತದೆ. ಈ ರೀತಿಯ ಚಿಕಿತ್ಸೆಯನ್ನು ಗರಿಷ್ಠ 1 ತಿಂಗಳ ಕಾಲ ವ್ಯಕ್ತಿಗೆ ನೀಡಬಹುದು. ಈ ಅವಧಿಯಲ್ಲಿ ವ್ಯಕ್ತಿಯ ಶ್ವಾಸಕೋಶ ಅಥವಾ ಹೃದಯ ಗುಣಹೊಂದುತ್ತದೆ’ ಎಂದು ಮಾಹಿತಿ ನೀಡಿದರು.

ಒಟ್ಟು 40 ಸಿಬ್ಬಂದಿಯ ತಂಡ ಈ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದಾರೆ. ಶ್ವಾಸಕೋಶ ತಜ್ಞ ಡಾ.ಕೆ.ಮಧು, ತೀವ್ರನಿಗಾ ಘಟಕ ತಜ್ಞ ಡಾ.ಹರೀಶ್‌ ನಾಯಕ್ ಹಾಗೂ ಡಾ.ರಾಮಕೃಷ್ಣ, ನರ್ಸಿಂಗ್‌ ಮುಖ್ಯಸ್ಥೆ ಶಿಲ್ಪಾ, ಸಮಾಲೋಚಕಿ ಸೌಮ್ಯಾ ಹಾಗೂ ಉಸಿರಾಟ ತಜ್ಞ ಚಂದನ್ ಶ್ರಮ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT