ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪ್‌ಗೆ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಮಸ್ಯೆ ಬಹಿರಂಗಪಡಿಸದಂತೆ ಕುಟುಂಬದವರ ಮನವಿ
Last Updated 13 ಜೂನ್ 2019, 18:45 IST
ಅಕ್ಷರ ಗಾತ್ರ

ಮೈಸೂರು: ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರದಲ್ಲಿ ಹಲ್ಲೆಗೀಡಾದ ಎಸ್.ಪ್ರತಾಪ್ ಅವರನ್ನು ಇಲ್ಲಿನ ಸೇಂಟ್ ಮೇರಿಸ್ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಲಾಗಿದೆ.

ಇವರಿಗೆ ಇರುವ ಸಮಸ್ಯೆಯನ್ನು ಬಹಿರಂಗಪಡಿಸದಂತೆ ಕುಟುಂಬದ ಸದಸ್ಯರು ವೈದ್ಯರಿಗೆ ಮನವಿ ಮಾಡಿದ್ದಾರೆ.

ಅವರಿಗೆ ಚಿಕಿತ್ಸೆ ನೀಡುತ್ತಿರುವ ಮನೋವೈದ್ಯ ಡಾ.ರಾಜಗೋಪಾಲ್ ಕೂಡ ಯಾವುದೇ ವಿವರ ನೀಡಲು ನಿರಾಕರಿಸಿದ್ದು, ‘ಪ್ರತಾಪ್ ಅವರನ್ನು ನೋಡಲು ಯಾರಿಗೂ ಅವಕಾಶ ನೀಡಿಲ್ಲ. ಮಾನಸಿಕ ಸಮಸ್ಯೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ಕುರಿತು ಕುಟುಂಬದವರೂ ಮನವಿ ಮಾಡಿದ್ದು, ಚಿಕಿತ್ಸೆಯ ವಿವರ, ಸಮಸ್ಯೆಯ ಸ್ವರೂಪವನ್ನು ಹೇಳಲಾಗದು’ ಎಂದಿದ್ದಾರೆ.

ಇದಕ್ಕೂ ಮುನ್ನ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ಆರೋಗ್ಯವನ್ನು, ಅಲ್ಲಿನ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ರವೀಶ್‌ ತಪಾಸಣೆ ಮಾಡಿದ್ದರು. ನಂತರ ಮರುದಿನವೇ ಅಲ್ಲಿಂದ ಸೇಂಟ್‌ ಮೇರಿಸ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ರವೀಶ್‌, ‘ಈ ಕುರಿತು ತಮಗೇನೂ ಗೊತ್ತಿಲ್ಲ. ಆದರೆ, ಒಂದೆರಡು ದಿನಗಳಲ್ಲಿ ಇಂತಹುದೇ ಮಾನಸಿಕ ಸಮಸ್ಯೆ ಎಂದು ನಿರ್ಧರಿಸಲಾಗದು’ ಎಂದು ತಿಳಿಸಿದರು.

ಎರಡು ವರ್ಷಗಳಿಂದ ಸಮಸ್ಯೆ
‘ ಬಿಎಎಸ್‌ಸಿ ಪದವೀಧರರಾಗಿರುವ ಪ್ರತಾಪ್, ದೂರಶಿಕ್ಷಣದಲ್ಲಿ ಎಂಎಸ್‌ಸಿ ಮೊದಲ ವರ್ಷ ಪೂರ್ಣಗೊಳಿಸಿದ್ದರು. ಈ ಮಧ್ಯ, ಮಂಡ್ಯದಲ್ಲೂ ಕೆಲಸ ಮಾಡಿದ್ದರು. ಎರಡು ವರ್ಷಗಳಿಂದ ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಪ್ರತಾಪ್‌ಗೆ ಈ ಮೊದಲು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಿತ್ಯ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ನಂತರ ಅವರು ಸಹಜ ಸ್ಥಿತಿಗೆ ಮರಳಿದ್ದರು’ ಎಂದು ಇವರ ಸೋದರ ಸಂಬಂಧಿ ಮೋಹನ್ ತಿಳಿಸಿದರು.‌

‘ಎರಡು ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದ ಪ್ರತಾಪ್ ಮಾತ್ರೆಗಳ ಸೇವನೆ ಜತೆಗೆ ಯೋಗ, ಧ್ಯಾನ ಮಾಡುವ ಮೂಲಕ ಚೇತರಿಸಿಕೊಂಡು ಸಹಜ ಜೀವನ ನಡೆಸುತ್ತಿದ್ದರು. ಯಾರಿಗೂ ಅವರು ತೊಂದರೆ ಕೊಟ್ಟಿರಲಿಲ್ಲ’ ಎಂದು ಪ್ರತಾಪ್ ತಂದೆ ಶಿವಯ್ಯ ಹೇಳಿದ್ದಾರೆ.‌

3 ಲಕ್ಷ ದಂಡ?
‘ದೇವಸ್ಥಾನಕ್ಕೆ ಪ್ರತಾಪ್‌ ಹಾನಿ ಮಾಡಿದ್ದಾಗಿ ಮಾಡ್ರಹಳ್ಳಿ ಗ್ರಾಮಸ್ಥರೊಬ್ಬರು ಕರೆ ಮಾಡಿ, ಪಂಚಾಯ್ತಿ ವತಿಯಿಂದ ₹ 3 ಲಕ್ಷ ದಂಡ ವಿಧಿಸಲಾಗಿದೆ ಎಂದು ಹೇಳಿದ್ದರು. ಆದರೆ, ಈ ಕುರಿತು ಸ್ಪಷ್ಟವಾಗಿ ನನಗೇನೂ ಗೊತ್ತಿಲ್ಲ’ ಎಂದು ಪ್ರತಾಪ್ ಅವರ ಸೋದರ ಸಂಬಂಧಿ ಕಾಂತರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT