ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಮಾರುಕಟ್ಟೆ: ಕುಸಿದ ಬದನೆ ಧಾರಣೆ

ಇಳಿಕೆ ಕಾಣದ ಟೊಮೆಟೊ, ದಪ್ಪಮೆಣಸಿನಕಾಯಿ
Last Updated 7 ಜುಲೈ 2020, 5:21 IST
ಅಕ್ಷರ ಗಾತ್ರ

ಮೈಸೂರು: ಈ ವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಬದನೆಕಾಯಿ ಕನಿಷ್ಠ ಸಗಟು ಧಾರಣೆ ಕೆ.ಜಿಗೆ ₹ 2ಕ್ಕೆ ಕುಸಿದಿದೆ. ಗರಿಷ್ಠ ಧಾರಣೆ ₹ 4ರಲ್ಲಿದ್ದು, ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ.

ಕಳೆದ ತಿಂಗಳೆಲ್ಲ ಇದರ ಧಾರಣೆ ಕೆ.ಜಿಗೆ ₹ 10ರಿಂದ ₹ 5ರವರೆಗೂ ಇತ್ತು. ಆದರೆ, ಈ ತಿಂಗಳಿನಲ್ಲಿ ಬದನೆಗೆ ಬೇಡಿಕೆಯೇ ಇಲ್ಲವಾಗಿದ್ದರಿಂದ ಬೆಲೆ ಕುಸಿತದ ಹಾದಿಯಲ್ಲಿದೆ ಎಂದು ತರಕಾರಿ ವ್ಯಾಪಾರಿ ಮುರುಳಿ ತಿಳಿಸಿದರು.

ಟೊಮೆಟೊ ಧಾರಣೆ ಈ ವಾರವೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿಲ್ಲ. ಜೂನ್ 30ರಂದು ಕೆ.ಜಿಗೆ ಟೊಮೆಟೊ ₹ 28ಕ್ಕೆ ಏರಿಕೆ ಕಂಡಿತ್ತು. ಸದ್ಯ, ಸೋಮವಾರ ಇದು ₹ 23ರಲ್ಲಿದೆ. ಕೇರಳ ವರ್ತಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದರಿಂದ ಮಾರುಕಟ್ಟೆಗೆ ಸೋಮವಾರ 728 ಕ್ವಿಂಟಲ್‌ನಷ್ಟು ಟೊಮೆಟೊ ಆವಕವಾದರೂ ಬೆಲೆ ಕಡಿಮೆಯಾಗಿಲ್ಲ.

ಹಸಿಮೆಣಸಿನಕಾಯಿ ಬೆಲೆ ತೂಗುಯ್ಯಾಲೆಯಲ್ಲಿದೆ. ಇಂತಿಷ್ಟೇ ಬೆಲೆ ಎಂಬುದು ನಿರ್ಧಾರವಾಗುತ್ತಿಲ್ಲ. ಜೂನ್ 29ರ ಮತ್ತು 30ರಂದು ಕೆ.ಜಿಗೆ ₹ 30ರಲ್ಲಿತ್ತು. ಜುಲೈ 1ರಂದು ₹ 19ಕ್ಕೆ ಕಡಿಮೆಯಾಯಿತು. 2ರಂದು ₹ 17 ಇತ್ತು. ಸೋಮವಾರ ಇದರ ಧಾರಣೆ ₹ 25ನ್ನು ತಲುಪಿದೆ. ಇದರಿಂದ ಬೆಳೆಗಾರರಿಗೆ ಬೆಲೆಯ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.

ಕಳೆದ ವಾರ ಕೆ.ಜಿಗೆ ಬೀನ್ಸ್ ₹ 10ಕ್ಕೆ ಕುಸಿತ ಕಂಡಿತ್ತು. ಈಗ ಇದರ ಧಾರಣೆ ₹ 15ಕ್ಕೆ ಏರಿಕೆ ಕಂಡಿದೆ. ಇದು ಬೀನ್ಸ್ ಬೆಳೆಗಾರರಲ್ಲಿ ಉತ್ತಮ ನಿರೀಕ್ಷೆಗಳನ್ನು ಗರಿಗೆದರಿಸಿದೆ.

ದಪ್ಪಮೆಣಸಿನಕಾಯಿ ಬೆಲೆ ಏರುಗತಿಯಲ್ಲೇ ಇದೆ. ಸದ್ಯ, ಇದು ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 53 ಇದ್ದರೆ, ಹಾಪ್‌ಕಾಮ್ಸ್‌ನಲ್ಲಿ ಇದರ ಧಾರಣೆ ₹ 74 ಇದೆ.

ಈರುಳ್ಳಿ ಬೆಲೆಯು ಎಪಿಎಂಸಿಯಲ್ಲಿ ₹ 12 ಇದೆ. ಇತರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಧಾರಣೆ ₹ 20 ಇದೆ.

ಬಾಳೆಹಣ್ಣಿನ ಬೆಲೆಯು ಕೆ.ಜಿಗೆ ₹ 50ರಲ್ಲೇ ಇದ್ದು, ಕಡಿಮೆಯಾಗಿಲ್ಲ. ಹಾಪ್‌ಕಾಮ್ಸ್‌ನಲ್ಲಿ ₹ 52 ಇದ್ದರೆ, ಇತರೆ ಮಾರುಕಟ್ಟೆಗಳಲ್ಲಿ ಇದರ ಆಸುಪಾಸಿನಲ್ಲೇ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT